ಇಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಸಾಮೂಹಿಕ ವಿವಾಹ

KannadaprabhaNewsNetwork |  
Published : Aug 18, 2025, 12:00 AM IST
ಮಲೆ ಮಹದೇಶ್ವರ ಬೆಟ್ಟದಲ್ಲಿ  ಆ. 18ರಂದು ಸಾಮೂಹಿಕ ವಿವಾಹ | Kannada Prabha

ಸಾರಾಂಶ

ಪ್ರಾಧಿಕಾರದ ರಂಗಮಂದಿರದಲ್ಲಿ ಆಗಸ್ಟ್ 18ರಂದು ಬೆಳಗ್ಗೆ 9:20 ರಿಂದ 10: 10ರೊಳಗೆ ಸಲ್ಲುವ ಶುಭ ಕನ್ಯಾ ಲಗ್ನದಲ್ಲಿ ಸಾಮೂಹಿಕ ವಿವಾಹ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಹನೂರು

ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರ ಸ್ಥಳ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಆ. 18ರಂದು ಸಾಮೂಹಿಕ ವಿವಾಹ ಕಾರ್ಯಕ್ರಮದ ಅಂತಿಮ ಸಿದ್ಧತೆ ಪೂರ್ಣಗೊಂಡಿದ್ದು, ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ಪರಿಶೀಲನೆ ನಡೆಸಿದರು.ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಈ ಬಾರಿ ನೂರಕ್ಕೂ ಹೆಚ್ಚು ಜೋಡಿಗಳು ಭಾಗವಹಿಸಬೇಕು ಎಂಬ ಆಶಯದೊಂದಿಗೆ ತಮಿಳುನಾಡು ಸೇರಿದಂತೆ ರಾಜ್ಯದ ಚಾಮರಾಜನಗರ, ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ತುಮಕೂರು, ಕೊಡಗು ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ವ್ಯಾಪಕ ಪ್ರಚಾರ ನಡೆಸಿದ ಪರಿಣಾಮ 15 ವರ್ಷಗಳ ನಂತರ 95 ಜೋಡಿಗಳು ಉಚಿತ ಸಾಮೂಹಿಕ ವಿವಾಹಕ್ಕೆ ನೋಂದಾಯಿಸಿಕೊಂಡಿರುವುದು ದಾಖಲೆಯಾಗಿದೆ.

ರಂಗಮಂದಿರದಲ್ಲಿ ಅಂತಿಮ ಸಿದ್ಧತೆ:

ಪ್ರಾಧಿಕಾರದ ರಂಗಮಂದಿರದಲ್ಲಿ ಆಗಸ್ಟ್ 18ರಂದು ಬೆಳಗ್ಗೆ 9:20 ರಿಂದ 10: 10ರೊಳಗೆ ಸಲ್ಲುವ ಶುಭ ಕನ್ಯಾ ಲಗ್ನದಲ್ಲಿ ಸಾಮೂಹಿಕ ವಿವಾಹ ನಡೆಯಲಿದೆ. ಈ ನಿಟ್ಟಿನಲ್ಲಿ ಅತಿಥಿ ಗಣ್ಯರ ವೇದಿಕೆ, ಸಾಮೂಹಿಕ ವಿವಾಹದ ಸ್ಥಳ, ಸಂಬಂಧಿಕರು ಹಾಗೂ ಹಿತೈಷಿಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ.

ವಧುವಿಗೆ ನಾಲ್ಕು ಗ್ರಾಮದ ಚಿನ್ನದ ತಾಳಿ, ಬೆಳ್ಳಿ ಕಾಲುಂಗುರ, ಸೀರೆ, ರವಿಕೆ, ವರನಿಗೆ ಪಂಚೆ, ಶರ್ಟ್, ಪೇಟವನ್ನು ನೀಡಲಾಗುತ್ತಿದೆ. ಹಲವು ವರ್ಷಗಳಿಂದ ವಧುವಿಗೆ ಮೂರು ಗ್ರಾಂ ಚಿನ್ನದ ತಾಳಿ ನೀಡಲಾಗುತ್ತಿತ್ತು. ಕಳೆದ ಎರಡು ವರ್ಷಗಳಿಂದ ಒಂದು ಗ್ರಾಂ ಸೇರ್ಪಡೆ ಮಾಡಿ ನಾಲ್ಕು ಗ್ರಾಂ ಚಿನ್ನದ ತಾಳಿ ವಿತರಣೆ ಮಾಡಲಾಗುತ್ತಿದೆ.ಸಾಮೂಹಿಕ ವಿವಾಹಕ್ಕೆ ಹೆಚ್ಚಿನ ಮಹತ್ವ :

ಈ ಹಿಂದೆ ಬಡವರು ಹಾಗೂ ಸಾಮಾನ್ಯ ವರ್ಗದವರು ಮಲೆ ಮಹದೇಶ್ವರ ಸ್ವಾಮಿ ಸನ್ನಿಧಾನದಲ್ಲಿ ಸರಳವಾಗಿ ವಿವಾಹವಾಗುತ್ತಿದ್ದರು. ಈ ನಿಟ್ಟಿನಲ್ಲಿ ಅಂದಿನ ಮಹದೇಶ್ವರ ಸ್ವಾಮಿ ಆಡಳಿತ ಮಂಡಳಿ ಸರಳ ವಿವಾಹವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 1989ರಿಂದ ಉಚಿತ ಸಾಮೂಹಿಕ ವಿವಾಹವನ್ನು ಆಯೋಜಿಸಿ ಈವರೆಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಈ ನಿಟ್ಟಿನಲ್ಲಿ ಪವಾಡ ಪುರುಷ ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಕಂಕಣ ಕೂಡಿ ಬರುತ್ತಿರುವುದಕ್ಕೆ ಪ್ರಾಧಿಕಾರ ಪ್ರತಿ ವರ್ಷವೂ ಹೆಚ್ಚಿನ ಒತ್ತು ನೀಡುತ್ತಿದೆ. ಇದರಿಂದ ಬಡವರಿಗೆ ಹಿಂದುಳಿದ ವರ್ಗದವರಿಗೆ ವರದಾನವಾಗಿದೆ. ಒಟ್ಟಾರೆ ಶ್ರೀ ಕ್ಷೇತ್ರ ಮನೆ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಉಚಿತ ಸಾಮೂಹಿಕ ವಿವಾಹಕ್ಕೆ ಹೆಚ್ಚಿನ ಮಹತ್ವವಿದೆ.

ವಿಶೇಷ ಹೂವಿನ ಅಲಂಕಾರ:

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರತಿವರ್ಷ ನಡೆಯಲಿರುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಸಂಬಂಧ ಶ್ರೀ ಮಹದೇಶ್ವರ ಸ್ವಾಮಿಯ ಹೊರ, ಒಳ ಆವರಣ ರಾಜು ಗೋಪುರ, ಅತಿಥಿ ಗಣ್ಯರ ಮುಖ್ಯದ್ವಾರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ವಿವಿಧ ಬಗೆಯ ಫಲ ಪುಷ್ಪಗಳಿಂದ ಅಲಂಕಾರ ಮಾಡಲಾಗುತ್ತಿದೆ. ಅದೇ ರೀತಿ ಈ ಬಾರಿ ನಡೆಯಲಿರುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಹೂವಿನ ಅಲಂಕಾರ ಮೆರುಗು ನೀಡಿದೆ.

ವಧು ವರನಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ:

ನೋಂದಾಯಿಸಿಕೊಂಡಿರುವ ವಧು ವರರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ ಇದಲ್ಲದೆ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಬರುವ ಸಂಬಂಧಿಕರಿಗೆ ಡಾರ್ಮೆಟ್ರಿಗಳನ್ನು ನಿಗದಿಪಡಿಸಿ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ.ಗಣ್ಯರು ಹಾಗೂ ಮಠಾಧೀಶರು ಭಾಗಿ:

ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಉಚಿತ ಸಾಮೂಹಿಕ ಕಾರ್ಯಕ್ರಮಕ್ಕೆ ರಾಜ್ಯದ ಗಣ್ಯರು ಮತ್ತು ಮಠಾಧೀಶರು ಸೇರಿದಂತೆ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ ಶಾಸಕರಾದ ಎಂ.ಆರ್.ಮಂಜುನಾಥ್ ಸೇರಿದಂತೆ ವಿವಿಧ ಭಾಗಗಳಿಂದ ಮುಖಂಡರು ಮಾದಪ್ಪನ ಭಕ್ತರು ಆಗಮಿಸಲಿದ್ದಾರೆ .

--------

17ಸಿಎಚ್ಎನ್‌17

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಆ. 18ರಂದು ಸಾಮೂಹಿಕ ವಿವಾಹ ಕಾರ್ಯಕ್ರಮದ ಅಂತಿಮ ಸಿದ್ಧತೆಯನ್ನು ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ಪರಿಶೀಲನೆ ನಡೆಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌