ಕನ್ನಡಪ್ರಭ ವಾರ್ತೆ ಇಳಕಲ್ಲ
ನಗರದ ಹೋರ ವಲಯದಲ್ಲಿರುವ ಲಿಂ.ವಿಜಯ ಮಹಾಂತ ಶಿವಯೋಗಿಗಳ ಕರ್ತು ಗದ್ದುಗೆಯಲ್ಲಿ ನಡೆದ ಸರ್ವಧರ್ಮಗಳ ಉಚಿತ ಕಲ್ಯಾಣ ಮಹೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ 20 ಜೋಡಿ ನವದಂಪತಿಗಳಿಗೆ ಪ್ರತಿಜ್ಞಾವಿಧಿ ಬೋದಿಸಿ ಬಸವ ತತ್ವದಂತೆ ನವದಂಪತಿಗಳಿಗೆ ಮದುವೆ ಸಮಾರಂಭ ಮಾಡಿ ಮಾತನಾಡಿದ ಶ್ರೀಗಳು, ನವದಂಪತಿಗಳು ಪರಸ್ಪರ ಅರಿತು ಬಾಳಬೇಕು. ನಿಮ್ಮಲ್ಲಿ ದುಶ್ಚಟಗಳಿದ್ದರೆ ಇಂದೆ ಮಹಾಂತ ಜೋಳಿಗೆಗೆ ಹಾಕಿ ಉತ್ತಮ ಜೀವನ ನಡೆಸಿ, ಮುಂದೆ ನಿಮಗಾಗುವ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವುದರ ಜತೆ ಅವರಿಗೆ ಸಂಸ್ಕಾರ ಲಿಂಗಪೂಜೆ ಮಾಡುವುದನ್ನು ಕಲಿಸಿ ಇನ್ನು ಬಡ ಜನರು ಸಾಲ ಸೂಲ ಮಾಡಿ ಅದ್ಧೂರಿ ಮದುವೆ ಮಾಡುವುದನ್ನು ಬಿಟ್ಟು ಇಂತ ಗುಡಿ ಜಾತ್ರೆಗಳಲ್ಲಿ ಆಗುವ ಸರಳ ಕಲ್ಯಾಣ ಮಹೋತ್ಸವ ಸಮಾರಂಭದಲ್ಲಿ ನಿಮ್ಮ ಮಕ್ಕಳ ಮದುವೆ ಮಾಡಿ ಎಂದು ಆಶೀರ್ವಚನ ನೀಡಿದರು.
ಶಿರೂರಿನ ಡಾ.ಬಸವಲಿಂಗ ಶ್ರೀಗಳು, ಲಿಂಗಸೂರಿನ ಸಿದ್ದಲಿಂಗ ಶ್ರೀ, ಸಿದ್ದಯ್ಯನಕೊಟೆಯ ಮಹಾಂತ ಶ್ರೀ ಇತರರು ಪಾಲ್ಗೊಂಡಿದ್ದರು.ಮಲ್ಲಯ್ಯ ಗಣಾಚಾರಿ ಅವರು ಬಸವ ತತ್ವದಂತೆ ವಧು-ವರರಿಗೆ ರುದ್ರಾಕ್ಷಿ ಕಟ್ಟುವ ಮೂಲಕ ಮತ್ತು ಅಕ್ಷತೆ ಹಾಕದೆ ಪುಷ್ಪವೃಷ್ಟಿ ಮಾಡಿ ಮದುವೆಯ ಕಾರ್ಯವನ್ನು ಮಾಡಿಸಿದರು.