ದೊಡ್ಡಬಳ್ಳಾಪುರ: ತಾಲೂಕಿನ ಕೊಡಿಗೆಹಳ್ಳಿಯ ಆತ್ರೇಯ ಆಯುರ್ವೇದ ಕಾಲೇಜಿಗೆ ಬೀಗ ಮುದ್ರೆ ಹಾಕಿದ್ದು, ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ಸಂತ್ರಸ್ತ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಬೆಂ.ಗ್ರಾ ಜಿಲ್ಲಾಡಳಿತ ಭವನದ ಮುಂಭಾಗ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ, ವಿವಿಧ ಸಂಘಟನೆಗಳು, ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ 2ನೇ ದಿನಕ್ಕೆ ಕಾಲಿಟ್ಟಿದೆ
ದೊಡ್ಡಬಳ್ಳಾಪುರ: ತಾಲೂಕಿನ ಕೊಡಿಗೆಹಳ್ಳಿಯ ಆತ್ರೇಯ ಆಯುರ್ವೇದ ಕಾಲೇಜಿಗೆ ಬೀಗ ಮುದ್ರೆ ಹಾಕಿದ್ದು, ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ಸಂತ್ರಸ್ತ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಬೆಂ.ಗ್ರಾ ಜಿಲ್ಲಾಡಳಿತ ಭವನದ ಮುಂಭಾಗ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ, ವಿವಿಧ ಸಂಘಟನೆಗಳು, ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ 2ನೇ ದಿನಕ್ಕೆ ಕಾಲಿಟ್ಟಿದೆ.
ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಮಾತನಾಡಿ, ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಾಳಜಿವಹಿಸಿ ಕಾಲೇಜಿನ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದ್ದರೂ, ಪ್ರಯೋಜನವಾಗದ ಕಾರಣ, ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂಬ ಬೇಡಿಕೆಗಳನ್ನಿಟ್ಟು ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗಿದೆ ಎಂದು ತಿಳಿಸಿದರು.ತಾಲೂಕಿನ ಕೊಡಿಗೆಹಳ್ಳಿಯ ಆತ್ರೇಯ ಆಯುರ್ವೇದ ಮಹಾವಿದ್ಯಾಲಯದಲ್ಲಿ ಸುಮಾರು 400 ವಿದ್ಯಾರ್ಥಿಗಳಿದ್ದು, ರಾಜ್ಯ, ದೇಶದ ವಿವಿಧೆಡೆಗಳಿಂದ ದಾಖಲಾತಿ ಪಡೆದಿದ್ದಾರೆ. ಕಾಲೇಜು ಬ್ಯಾಂಕಿನಲ್ಲಿ ಪಡೆದಿರುವ ಸಾಲ ಕಟ್ಟದ ಕಾರಣ ಕಾಲೇಜಿಗೆ ಬ್ಯಾಂಕ್ ಬೀಗ ಮುದ್ರೆ ಹಾಕಲಾಗಿದೆ. ಸುಮಾರು ಎರಡು ತಿಂಗಳಿಂದ ಕಾಲೇಜು ವಿದ್ಯಾರ್ಥಿಗಳಿಗೆ ವ್ಯಾಸಂಗ ಹಾಗೂ ಪರೀಕ್ಷೆ ನಡೆಸುವಲ್ಲಿ ವಿಫಲವಾಗಿದೆ. ಈಗ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಾಗದೇ ಅತಂತ್ರ ಸ್ಥಿತಿಯಲ್ಲಿದ್ದಾರೆ. ಯಾವುದೇ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಕಾನೂನು, ಆಡಳಿತಾತ್ಮಕ ಅಥವಾ ಆರ್ಥಿಕ ಅನಿಶ್ಚಿತತೆಯಲ್ಲಿರುವ ಸಂದರ್ಭದಲ್ಲಿ ಹೊಸ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದು ಕಾನೂನು ಬಾಹಿರ. ಕಾಲೇಜು ತೆರೆಯಲು ಆಸಕ್ತಿ ಇಲ್ಲದ ಈ ಕಾಲೇಜು ಶುಲ್ಕ ಮಾತ್ರ ವಸೂಲಿ ಮಾಡಲು ಸೂಚನೆ ನೀಡುತ್ತಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಶಿಕ್ಷಣ ಸಂಸ್ಥೆಯ ಮೇಲೆ ಇಟ್ಟಿರುವ ಭರವಸೆ ಹುಸಿಯಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳಿಗೆ, ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಿಗೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿಗಳಿಗೆ, ಕೇಂದ್ರ ಆಯುಷ್ ಸಚಿವರಿಗೆ ಮನವಿ ಪತ್ರವನ್ನು ಸಲ್ಲಿಸ ಲಾಗಿದೆ. ಆದರೆ, ಇಂದಿನ ದಿನದವರೆಗೂ ಯಾವುದೇ ಪ್ರತಿಕ್ರಿಯೆ ಅಥವಾ ಯಾವುದೇ ವಿದ್ಯಾರ್ಥಿ ಪರ ಬೆಳವಣಿಗೆಗಳು ಕಂಡುಬರದ ಕಾರಣ, ಪ್ರತಿಭಟನೆಯನ್ನು ತೀವ್ರಗೊಳಿಸಲಾಗಿದೆ ಎಂದು ವಿವರಿಸಿದರು.
ಆನ್‌ಲೈನ್ ಶಿಕ್ಷಣ ಬೇಡ:ಕಾಲೇಜನ್ನು ಆರಂಭ ಮಾಡದೇ ಕಾಲೇಜಿನ ಶುಲ್ಕ ಕಟ್ಟಿಸಿಕೊಂಡು, ಆನ್‌ಲೈನ್ ಶಿಕ್ಷಣ ನೀಡಲು ಹೊರಟಿದೆ. ಆದರೆ, ವೈದ್ಯಕೀಯ ಶಿಕ್ಷಣ ಪ್ರಾಯೋಗಿಕವಾಗಿರಬೇಕು. ವೈದ್ಯರಾಗಬೇಕೆಂಬ ನಮ್ಮ ಆಸೆ ಕಮರುತ್ತಿದೆ. ನಾವು ಕಟ್ಟಿರುವ ಶುಲ್ಕಕ್ಕೆ ನಮಗೆ ಕಾಲೇಜಿನಿಂದ ಪಾಠಗಳು ಅಗತ್ಯ ಸೌಲಭ್ಯಗಳು ಸಿಗಬೇಕು ಎಂದು ನೆರೆದಿದ್ದ ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
ವೈದ್ಯರಾಗಬೇಕೆಂಬ ನಮ್ಮ ಮಕ್ಕಳ ಆಸೆ ಈಡೇರಿಸಲು ಕಷ್ಟಪಟ್ಟ ಹಣ ಹೊಂದಿಸಿ ಕಾಲೇಜಿಗೆ ಸೇರಿಸಿದರೆ, ಈಗ ಕಾಲೇಜು ಈ ಪರಿಸ್ಥಿತಿಗೆ ಬಂದಿದೆ. ಸರ್ಕಾರ ಹಾಗೂ ಸಂಬಂಧಪಟ್ಟ ವಿವಿ ಈ ಬಗ್ಗೆ ಕ್ರಮ ಕೈಗೊಂಡು ವಿದ್ಯಾರ್ಥಿಗಳ ಭವಿಷ್ಯ ಹಾಳಾಗದಂತೆ ಕ್ರಮ ಕೈಗೊಳ್ಳಬೇಕಿದೆ ಎಂದು ಪೋಷಕರು ಒತ್ತಾಯಿಸಿದ್ದಾರೆ.ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಖಜಾಂಚಿ ಚೇತನ್, ರಾಜ್ಯ ಪ್ರಧಾನ ಸಂಚಾಲಕ ಪಿ.ವಾಸು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾಯಿಗೌಡ, ಪ್ರದೀಪ್ ಕುಮಾರ್ ಹಾಗೂ ಕಾಲೇಜಿನ ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದರು.
9ಕೆಡಿಬಿಪಿ1- ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೇಹಳ್ಳಿಯಲ್ಲಿರುವ ಆತ್ರೇಯ ಆಯುರ್ವೇದ ಕಾಲೇಜು ಲಾಕ್‌ಡೌನ್ ಆಗಿರುವ ಹಿನ್ನಲೆ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಅನಿರ್ದಿಷ್ಟಾವಧಿ ಹೋರಾಟದ 2ನೇ ದಿನದ ಪ್ರತಿಭಟನೆ ನಡೆಯಿತು.