ಜಮಖಂಡಿ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸಂಜೀವ ಹಿಪ್ಪರಗಿ ಅವರಿಗೆ ಸಂಬಂಧಿಸಿದ ವಿವಿಧ ಸ್ಥಳಗಳ ಮೇಲೆ ಬುಧವಾರ ಲೋಕಾಯುಕ್ತ ಪೊಲೀಸರು ನಡೆಸಿದ ದಾಳಿಯ ವೇಳೆ ಸ್ಥಿರಾಸ್ತಿಗಳಾದ ವಾಸದ ಮನೆಗಳು ಹಾಗೂ ಕೃಷಿ ಜಮೀನುಗಳು, ಚರಾಸ್ತಿಗಳಾದ ನಗದು, ಚಿನ್ನಾಭರಣಗಳು, ವಾಹನಗಳು, ನಿಶ್ಚಿತ ಠೇವಣಿಗಳು ಸೇರಿ ವಿವಿಧ ಆಸ್ತಿಗಳು ಹೊಂದಿರುವುದು ಪತ್ತೆಯಾಗಿದೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಮಖಂಡಿ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸಂಜೀವ ಹಿಪ್ಪರಗಿ ಅವರಿಗೆ ಸಂಬಂಧಿಸಿದ ವಿವಿಧ ಸ್ಥಳಗಳ ಮೇಲೆ ಬುಧವಾರ ಲೋಕಾಯುಕ್ತ ಪೊಲೀಸರು ನಡೆಸಿದ ದಾಳಿಯ ವೇಳೆ ಸ್ಥಿರಾಸ್ತಿಗಳಾದ ವಾಸದ ಮನೆಗಳು ಹಾಗೂ ಕೃಷಿ ಜಮೀನುಗಳು, ಚರಾಸ್ತಿಗಳಾದ ನಗದು, ಚಿನ್ನಾಭರಣಗಳು, ವಾಹನಗಳು, ನಿಶ್ಚಿತ ಠೇವಣಿಗಳು ಸೇರಿ ವಿವಿಧ ಆಸ್ತಿಗಳು ಹೊಂದಿರುವುದು ಪತ್ತೆಯಾಗಿದೆ.ಆಪಾದಿತ ನೌಕರನ ವಿರುದ್ಧ ನ.17ರಂದು ಬಾಗಲಕೋಟೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ನ್ಯಾಯಾಲಯದಿಂದ ವಾರಂಟ್ ಪಡೆದು ನ.18ರಂದು ಬೆಳಗ್ಗೆ ಏಕಕಾಲದಲ್ಲಿ ವಿವಿಧ ಸ್ಥಳಗಳಲ್ಲಿ ಶೋಧನಾ ಕಾರ್ಯಾಚರಣೆ ನಡೆಸಲಾಗಿದೆ. ಜಮಖಂಡಿಯಲ್ಲಿ ಆಪಾದಿತ ನೌಕರ ವಾಸಿಸುವ ಮನೆ, ಅವರ ತಂದೆಯವರ ವಾಸದ ಮನೆ, ತೋಟದಲ್ಲಿರುವ ಶೆಡ್, ಸಂಬಂಧಿಕರ ಮನೆ, ಶಿರಗುಂಪಿಯ ಪಿಕೆಪಿಎಸ್ ಮೈಗುರ್ ಶಾಖೆ ಹಾಗೂ ಆಪಾದಿತರು ಕರ್ತವ್ಯ ನಿರ್ವಹಿಸುವ ಜಮಖಂಡಿ ತಾಪಂ ಕಚೇರಿ ಸೇರಿ ಒಟ್ಟು ಆರು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಶೋಧ ವೇಳೆ ಆಪಾದಿತರಿಗೆ ಸಂಬಂಧಿಸಿದ ಸ್ಥಿರಾಸ್ತಿ ಹಾಗೂ ಚರಾಸ್ತಿ ಪತ್ತೆಯಾಗಿದ್ದು, ಅವುಗಳಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಇತರೆ ಮಾಹಿತಿಗಳನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸಿದ್ದಾರೆ.
ಲೋಕಾಯುಕ್ತ ಬಾಗಲಕೋಟೆ ಪೊಲೀಸ್ ಅಧೀಕ್ಷಕ ಎಂ.ಬಿ. ನಂದಗಾಂವಿ, ಐಪಿಎಸ್ ಅವರ ಮಾರ್ಗದರ್ಶನ, ಡಿಎಸ್ಪಿ ಸುರೇಶರೆಡ್ಡಿ ಎಂ.ಎಸ್. ನೇತೃತ್ವದಲ್ಲಿ ಶೋಧನಾ ಕಾರ್ಯಾಚರಣೆ ನಡೆಯಿತು. ಬಾಗಲಕೋಟೆ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ಬಿ. ಬಿರಾದಾರ ಸೇರಿ ಬೆಳಗಾವಿ ಹಾಗೂ ಕೊಪ್ಪಳ ಜಿಲ್ಲೆಗಳ 1 ಡಿಎಸ್ಪಿ, 5 ಪೊಲೀಸ್ ನಿರೀಕ್ಷಕರು ಹಾಗೂ 30 ಸಿಬ್ಬಂದಿ ಸೇರಿ ಒಟ್ಟು 38 ಅಧಿಕಾರಿ, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಶೋಧ ವೇಳೆ ಪತ್ತೆಯಾದ ಆಸ್ತಿಗಳ ಮೌಲ್ಯ ಹಾಗೂ ಅವುಗಳ ಮೂಲಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳಿಂದ ಮುಂದಿನ ಪರಿಶೀಲನೆ ಹಾಗೂ ತನಿಖೆ ಮುಂದುವರಿದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.