ಗಮನ ಸೆಳೆದ ಮತದಾನ ಜಾಗೃತಿಯ ಬೃಹತ್ ಬೈಕ್ ಜಾಥಾ

KannadaprabhaNewsNetwork | Published : Apr 7, 2024 1:45 AM

ಸಾರಾಂಶ

ಲೋಕಸಭಾ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಮತದಾನದ ಮಹತ್ವ ಕುರಿತು ನಾಗರಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಚಾಮರಾಜನಗರ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್ ಬೈಕ್ ಜಾಥಾ ಎಲ್ಲರ ಗಮನ ಸೆಳೆಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಲೋಕಸಭಾ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಮತದಾನದ ಮಹತ್ವ ಕುರಿತು ನಾಗರಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಚಾಮರಾಜನಗರ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್ ಬೈಕ್ ಜಾಥಾ ಎಲ್ಲರ ಗಮನ ಸೆಳೆಯಿತು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾನಾಗ್ ಮತದಾನದ ಪ್ರತಿಜ್ಞಾ ವಿಧಿ ಬೊಧಿಸಿದರು.

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಎಸ್ಪಿ ಪದ್ಮಿನಿ ಸಾಹು, ಇತರೆ ಗಣ್ಯರು ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ಕೂಡಿದ ಮತದಾನ ಜಾಗೃತಿಯ ಬಲೂನ್‌ಗಳನ್ನು ಆಕಾಶಕ್ಕೆ ಹಾರಿ ಬಿಡುವ ಮೂಲಕ ಬೈಕ್ ಜಾಥಾವನ್ನು ಉದ್ಘಾಟಿಸಿದರು.

ಇದೇ ವೇಳೆ ಬೈಕ್ ಜಾಥಾವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾನಾಗ್ ಪ್ರತಿಯೊಬ್ಬರಲ್ಲೂ ಮತದಾನದ ಜಾಗೃತಿ ಮೂಡಿಸಲು ಬೈಕ್ ಜಾಥಾ ಹಮ್ಮಿಕೊಳ್ಳಲಾಗಿದೆ. ಚುನಾವಣೆಯು 5 ವರ್ಷಕ್ಕೊಮ್ಮೆ ಬರುವ ಹಬ್ಬವಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿರುವ ಎಲ್ಲ ಅರ್ಹ ಮತದಾರರು ಮತಗಟ್ಟೆಗೆ ಬಂದು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.

ಲೋಕಸಭಾ ಚುನಾವಣೆಯ ಮತದಾನವು ಏಪ್ರಿಲ್ ೨೬ರಂದು ನಡೆಯಲಿದ್ದು, ಈ ಬಾರಿ ಮೊದಲ ಸಲ ಮತದಾನ ಮಾಡುವ ೧೮ ವರ್ಷ ತುಂಬಿದ ಯುವ ಮತದಾರರು ತಪ್ಪದೆ ಮತ ಚಲಾಯಿಸಬೇಕು. ಮತದಾನದ ಪಾಮುಖ್ಯತೆ ಹಾಗೂ ಯಾವುದೇ ಆಮಿಷಗಳಿಗೆ ಒಳಗಾಗದೇ ಮತದಾನ ಮಾಡುವಂತೆ ಇತರರಿಗೂ ತಿಳಿಹೇಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.

ಬಳಿಕ ನೂರಾರು ಬೈಕ್‌ಗಳಲ್ಲಿ ಸಮಾವೇಶಗೊಂಡಿದ್ದ ಜಾಥಾಗೆ ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಪಿ. ಲಕ್ಷ್ಮೀ ಅವರು ಹಸಿರು ನಿಶಾನೆ ತೋರಿ ಜಾಥಾಗೆ ಶುಭ ಕೋರಿದರು.

ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಎಸ್ಪಿ ಪದ್ಮಿನಿ ಸಾಹೂ ಸಹ ಬೈಕ್ ಚಲಾಯಿಸಿದ್ದು ಜಾಥಾದ ವಿಶೇಷವಾಗಿತ್ತು.

ಜಿಲ್ಲಾ ಕ್ರೀಡಾಂಗಣದಿಂದ ಹೊರಟ ಬೈಕ್ ಜಾಥಾವು ನಗರದ ಎಲ್.ಐ.ಸಿ ವೃತ್ತ, ಸಂತೇಮಹಳ್ಳಿ ವೃತ್ತ, ಪಚ್ಚಪ್ಪ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ, ರಾಮಸಮುದ್ರ ಮೂಲಕ ಸಾಗಿ ಬಳಿಕ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಗುಂಡ್ಲುಪೇಟೆ ಸರ್ಕಲ್ ಮಾರ್ಗವಾಗಿ ಅಂತಿಮವಾಗಿ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ತಲುಪಿತು. ಬೈಕ್ ಜಾಥಾದಲ್ಲಿ ಪಾಲ್ಗೊಂಡಿದ್ದ ನೂರಾರು ಅಧಿಕಾರಿಗಳು, ಇತರರು ಮತದಾನ ಅರಿವು ನಾಮಫಲಕಗಳನ್ನು ಹಿಡಿದು ’ಚುನಾವಣಾ ಪರ್ವ-ದೇಶದ ಗರ್ವ’ ಘೋಷಣೆಗಳನ್ನು ಕೂಗಿ ಜನಜಾಗೃತಿ ಮೂಡಿಸಿದರು.

Share this article