ಸರ್ಕಾರಿ ಪ್ರಾಯೋಜಿತ ಆತ್ಮಹತ್ಯೆ ಹೆಚ್ಚಳ ಆರೋಪ : ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ

KannadaprabhaNewsNetwork |  
Published : Jan 03, 2025, 12:30 AM ISTUpdated : Jan 03, 2025, 12:33 PM IST
2ಕೆಎಂಎನ್ ಡಿ12,13 | Kannada Prabha

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಸರ್ಕಾರಿ ಪ್ರಾಯೋಜಿತ ಆತ್ಮಹತ್ಯೆಗಳು ಅಥವಾ ಸರ್ಕಾರದ ಕುಮ್ಮಕ್ಕಿನ ಆತ್ಮಹತ್ಯೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಸಚಿವರು, ಆಡಳಿತ ಪಕ್ಷದ ಶಾಸಕರ ಕುಮ್ಮಕ್ಕಿನಿಂದ ಇಂತಹ ಸರಣಿ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿದೆ.

 ಮಂಡ್ಯ : ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕಾರಣ ಎಂದು ಆರೋಪಿಸಿ, ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಜಯಚಾಮ ರಾಜೇಂದ್ರ ಒಡೆಯರ್ ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಸ್ತೆ ಬದಿ ಗೋಡೆಗಳಿಗೆ ಪ್ರಿಯಾಂಕ್ ಖರ್ಗೆ ವಿರುದ್ಧ ಪೋಸ್ಟರ್ ಅಂಟಿಸಿ ಪ್ರಾಮಾಣಿಕ ಅಧಿಕಾರಿಗಳಿಗೆ ಸರ್ಕಾರ ಕಿರುಕುಳ ಭಾಗ್ಯ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಸರ್ಕಾರಿ ಪ್ರಾಯೋಜಿತ ಆತ್ಮಹತ್ಯೆಗಳು ಅಥವಾ ಸರ್ಕಾರದ ಕುಮ್ಮಕ್ಕಿನ ಆತ್ಮಹತ್ಯೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಸಚಿವರು, ಆಡಳಿತ ಪಕ್ಷದ ಶಾಸಕರ ಕುಮ್ಮಕ್ಕಿನಿಂದ ಇಂತಹ ಸರಣಿ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿದೆ ಎಂದು ಆರೋಪಿಸಿದರು.

ಟೆಂಡರ್ ಮಾಡಿಕೊಡಲು ಶೇ.5 ದುಡ್ಡಿನ ಬೇಡಿಕೆ ಇಟ್ಟಿರುತ್ತಾನೆ. ನಾನು ಸಚಿವ ಪ್ರಿಯಾಂಕ ಖರ್ಗೆ ಹೇಳಿದ ಮಾತನ್ನು ಮೀರುವುದಿಲ್ಲ. ಸಚಿವರ ಬೆಂಬಲ ಇದೆ ಎಂದು ರಾಜು ಕಪನೂರ್ ಹೇಳಿದ್ದಾಗಿ ಸಚಿನ್ ಡೆತ್‌ನೋಟ್‌ನಲ್ಲಿ ತಿಳಿಸಿದ್ದಾರೆ ಎಂದು ವಿವರಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಆತ್ಮಹತ್ಯೆ ಭಾಗ್ಯ ನೀಡುತ್ತಿದೆ. ಭ್ರಷ್ಟಾಚಾರ ಬಯಲಾದ್ದರಿಂದ ವಾಲ್ಮೀಕಿ ನಿಗಮದ ಅಕೌಟೆಂಟ್ ಚಂದ್ರಶೇಖರ್ ಮೊದಲ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಿಜೆಪಿ ಹೋರಾಟದ ಫಲವಾಗಿ ಸಚಿವ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದರು ಎಂದರು.

ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎ ಹೆಸರು ಬರೆದಿಟ್ಟು ರುದ್ರಣ್ಣ ಯಡವಣ್ಣವರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ದಾವಣಗೆರೆಯಲ್ಲಿ ಗುತ್ತಿಗೆದಾರರೊಬ್ಬರು ಬಾಕಿ ಹಣ ಸಿಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಗಡಿಯಲ್ಲಿ ಕ್ರಷರ್ ಲಾರಿ ಮಾಲೀಕರೊಬ್ಬರು ಲಂಚ ಕೊಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾದಗಿರಿಯಲ್ಲಿ ಪಿಎಸ್‌ಐ ಪರಶುರಾಮ್, ಸ್ಥಳೀಯ ಶಾಸಕನ ಪುತ್ರನ ಒತ್ತಡ ತಡೆಯಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಸಿಬಿಐ ತನಿಖೆಗೆ ಒತ್ತಾಯ:

ಹಿಂದೂ ಸಮಾಜದ ಸಿದ್ದಲಿಂಗ ಸ್ವಾಮೀಜಿ, ಶಾಸಕ ಬಸವರಾಜ ಮತ್ತಿಮೂಡ, ಕಲುಬುರ್ಗಿ ಬಿಜೆಪಿ ನಾಯಕ ಚಂದು ಪಾಟೀಲ್‌, ಮಣಿಕಂಠ ರಾಥೋಡ್ ಅವರ ಕೊಲೆಗೆ ಸಂಚು ರೂಪಿಸಿದ್ದಾಗಿ ಡೆತ್ ನೋಟ್ ತಿಳಿಸಿದೆ. ಸಿದ್ದಲಿಂಗಸ್ವಾಮಿಜಿ ಅವರ ಧ್ವನಿ ಅಡಗಿಸಲು ಮಹಾರಾಷ್ಟ್ರದ ಸುಪಾರಿ ಕಿಲ್ಲರ್‌ಗಳನ್ನು ಬಳಸುವ ವಿಚಾರವೂ ಡೆತ್‌ನೋಟ್‌ನಲ್ಲಿದೆ. ಹಾಗಾಗಿ ಇದೊಂದು ಗಂಭೀರ ವಿಚಾರ. ಆದ್ದರಿಂದ ಇದನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದರು.

ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಮರೆವು ಜಾಸ್ತಿ. ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಈಶ್ವರಪ್ಪ ಅವರ ಮೇಲೆ ಆರೋಪ ಬಂದಾಗ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದನ್ನು ಪ್ರಿಯಾಂಕ್ ಮರೆಯಬಾರದು. ಮಡಿಕೇರಿಯಲ್ಲಿ ಪೊಲೀಸ್ ಅಧಿಕಾರಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಇದೇ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅಂದಿನ ಗೃಹ ಸಚಿವ ಜಾರ್ಜ್ ಸಹ ರಾಜೀನಾಮೆ ಕೊಟ್ಟು ಸಿಬಿಐ ತನಿಖೆ ನಡೆದಿತ್ತು ಎಂದು ದೂರಿದರು.

ಸಚಿನ್ ನಾಪತ್ತೆಯಾಗಿದ್ದ ಬಗ್ಗೆ ದೂರು ನೀಡಲು ಹೋದರೆ ಪೊಲೀಸ್ ಅಧಿಕಾರಿಗಳು ದೂರು ಸ್ವೀಕರಿಸಲಿಲ್ಲ. ಹುಡುಕುವ ಕೆಲಸವನ್ನೂ ಮಾಡಿಲ್ಲ. ಇಂತಹ ಪೊಲೀಸ್ ಅಧಿಕಾರಿಗಳ ವರ್ತನೆಯನ್ನು ಖಂಡಿಸಿದರು.

ಹಿರಿಯ ಕಾಂಗ್ರೆಸ್ ಮುಖಂಡ ಖರ್ಗೆ ಕುಟುಂಬಕ್ಕೆ ಹತ್ತಿರ ಇರುವ ರಾಜು ಕಪನೂರ್ ಈ ಪ್ರಕರಣದ ಹಿಂದಿನ ಪ್ರಮುಖ ಆರೋಪಿ ಎಂಬುದು ಡೆತ್‌ನೋಟ್‌ನಲ್ಲಿದೆ. ಆದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಪೊಲೀಸ್ ಠಾಣೆಗೆ ಹೋದ ಹೆಣ್ಣು ಮಕ್ಕಳ ಜೊತೆಗೆ ಕೆಟ್ಟದಾಗಿ ನಡೆದುಕೊಳ್ಳಲಾಯಿತು. ಅವರ ಮನವಿಗೂ ಸ್ಪಂದಿಸಲಿಲ್ಲ. ಅಧಿಕಾರಿಗಳ ಬೇಜವಾಬ್ದಾರಿ ನಡವಳಿಕೆ ಅಕ್ಷಮ್ಯ ಅಪರಾಧ. ಸಚಿನ್ ಸಾವಿನ ಪ್ರಕರಣ ಸಂಬಂಧ ಮುಖ್ಯಮಂತ್ರಿಗಳು ಸಚಿವ ಪ್ರಿಯಾಂಕ್ ಖರ್ಗೆಯವರ ರಾಜೀನಾಮೆ ಪಡೆದು ಸಿಬಿಐ ತನಿಖೆ ಮಾಡಲು ನೀಡಬೇಕು ಎಂದು ಒತ್ತಾಯಿಸಿದರು.

ಸಚಿನ್ ಅವರ ಕುಟುಂಬಕ್ಕೆ ತಕ್ಷಣದಿಂದ ಹಗಲಿರುಳು ಭದ್ರತೆ ಕೊಡಬೇಕು. ಕುಟುಂಬಕ್ಕೆ 1 ಕೋಟಿ ರು. ಪರಿಹಾರ ನೀಡಬೇಕು. ಸೋದರಿಯರು ವಿದ್ಯಾವಂತರಿದ್ದು, ಕುಟುಂಬಕ್ಕೆ ಒಬ್ಬರು ಸದಸ್ಯರಿಗೆ ನೌಕರಿ ಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮುಖಂಡರಾದ ಡಾ.ಸಿದ್ದರಾಮಯ್ಯ, ಸಚ್ಚಿದಾನಂದ, ವಸಂತ್‌ಕುಮಾರ್, ಎಚ್.ಆರ್.ಅರವಿಂದ್, ಅಶೋಕ್‌ಕುಮಾರ್, ಅಶೋಕ್ ಜಯರಾಂ, ಶ್ರೀಧರ್, ವಿದ್ಯಾ ನಾಗೇಂದ್ರ, ಸಿ.ಟಿ. ಮಂಜುನಾಥ್, ವಿವೇಕ್, ನಾಗಾನಂದ, ಹೊಸಹಳ್ಳಿ ಶಿವು, ಸಿದ್ದರಾಜುಗೌಡ, ಪಿ. ಹಳ್ಳಿ ರಮೇಶ್ ಸೇರಿದಂತೆ ನೂರಾರು ಮಂದಿ ಕಾರ್‍ಯಕರ್ತರು ಭಾಗವಹಿಸಿದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ