ಕನ್ನಡಪ್ರಭ ಚಿತ್ರದುರ್ಗ
ರಾಜ್ಯದಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಮುಸ್ಲಿಂ ಸಮುದಾಯಕ್ಕೆ ನ್ಯಾಯ ಸಮ್ಮತವಾಗಿ ಸಿಗಬೇಕಿರುವ 2ಬಿ ಅಡಿಯಲ್ಲಿ ಮೀಸಲಾತಿ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಸರ್ಕಾರಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ಮುಸ್ಲಿಂ ಸಂಘದ ಅಧ್ಯಕ್ಷ ಎಲ್.ಎಸ್. ಬಷೀರ್ ಅಹಮದ್ ಹೇಳಿದರು.ಇಲ್ಲಿನ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ಮುಸ್ಲಿಂ ಸಂಘದ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಮುಸ್ಲಿಂ ಜನಾಂಗದ ಹಲವು ಸಮಸ್ಯೆ ಮತ್ತು ಸಮುದಾಯಕ್ಕೆ ಸಿಗಬೇಕಿರುವ ನ್ಯಾಯಯುತ ಹಕ್ಕುಗಳ ಕುರಿತು ಗಂಭೀರ ಚರ್ಚೆ ನಡೆಸಲಾಗಿದೆ. ಶಿಕ್ಷಣದಲ್ಲಿಯೂ ಮೀಸಲಾತಿ ಸಿಗುವಂತಾಗಬೇಕು. ರಾಜಕೀಯ ಪ್ರಾತಿನಿಧ್ಯದ ಜೊತೆಗೆ ಸಮಾಜದ ಶಿಕ್ಷಣ ಸಂಸ್ಥೆಗಳು ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ಹಜ್‌ಯಾತ್ರೆಗೆ ಅನುದಾನ ಮುಂದುವರೆಸಬೇಕು. ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಒತ್ತಾಯಿಸುವ ಸಲುವಾಗಿ ಕೂಡ್ಲಗಿಯಲ್ಲಿ ರಾಜ್ಯ ಮಟ್ಟದ ಬೃಹತ್ ಸಮಾವೇಶ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.ದೇಶದಲ್ಲಿಯೇ ಮುಸ್ಲಿಂ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿದ್ದು, ಬಡತನ, ನಿರುದ್ಯೋಗದಂತಹ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಮಕ್ಕಳಿಗೆ ಸರಿಯಾದ ಶಿಕ್ಷಣ ಇಲ್ಲ. ಆಳುವ ಸರ್ಕಾರಗಳು ಮತಬ್ಯಾಂಕ್‌ಗಳನ್ನಾಗಿ ಬಳಕೆ ಮಾಡಿಕೊಳ್ಳುತ್ತಿವೆ ಎಂದರು.
ಕೇವಲ ರಾಜಕೀಯ ಲಾಭಕ್ಕಾಗಿ ಜನಾಂಗವನ್ನು ಬಳಕೆ ಮಾಡಿಕೊಂಡಿರುವ ಪಕ್ಷಗಳು, ಆ ವರ್ಗಗಳ ಆಗುಹೋಗುಗಳ ಬಗ್ಗೆ ಕಿಂಚತ್ತೂ ಕಾಳಜಿವಹಿಸುವುದಿಲ್ಲ.ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಸಮಾಜವನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ಚುನಾವಣೆಯಲ್ಲೂ ಅವಕಾಶ ನೀಡುತ್ತಿಲ್ಲ. ಈ ಕಾರಣಕ್ಕಾಗಿ ನಾವು ಸರ್ಕಾರಗಳಿಗೆ ಎಚ್ಚರಿಕೆ ನೀಡಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಹಿರಿಯ ವಕೀಲ ಸಾದಿಕ್ ಉಲ್ಲಾ ಮಾತನಾಡಿ, ದೇಶದಲ್ಲಿ ದ್ವೇಷದ ಭಾವನೆ ಹೆಚ್ಚುತ್ತಿರುವುದು ಬೇಸರದ ಸಂಗತಿ. ಭಾರತ ಯಾವುದೇ ಜಾತಿ, ಧರ್ಮಕ್ಕೆ ಸೇರಿದ್ದಲ್ಲ. ಪ್ರಜೆಗಳು ದೇಶದ ಸಂವಿಧಾನ, ಕಾನೂನು ಪಾಲನೆ ಮಾಡಬೇಕು. ಮುಸ್ಲಿಂ ಜನಾಂಗ ಸರ್ವ ರೀತಿಯಲ್ಲಿ ಪ್ರಗತಿ ಕಾಣಬೇಕಾಗಿದೆ. ವಕ್ಛ್ ಬೋರ್ಡ್ ಸಂಸ್ಥೆ ಜನಾಂಗದ ಶ್ರೇಯಸ್ಸಿಗೆ ಯೋಜನೆಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.ಸಭೆಯಲ್ಲಿ ಸಮಾಜ ಮುಖಂಡರಾದ ಸಂಘದ ಕಾರ್ಯಾದ್ಯಕ್ಷ ಎ.ಜಾಕೀರ್ ಹುಸೇನ್, ಎಂ.ಖಾದರ್ ಸಾಬ್, ಟಿಪ್ಪು ಖಾಸಿಂ, ತವಕಲ್ ಮಸ್ತಾನ್ ದರ್ಗಾ ಪೀಠಾಧಿಪತಿ ಸೈಯದ್ ಆಶೀಫ್ ಷಾ ಖಾದ್ರಿ, ಕರ್ನಾಟಕ ಮುಸ್ಲಿಂ ಸಂಘದ ಪದಾಧಿಕಾರಿಗಳಾದ ಮಹಮದ್ ವಜೀರ್ ಸಾಬ್, ಕೂಡ್ಲಗಿ ಮುನ್ನಾ ಷಹಿನಾ ಷರೀಫ್, ಯುಸೂಫ್ ಸಾಬ್, ಸಿರಾಜ್, ಅಕ್ರಮ್, ದಾವಣಗೆರೆಯ ಮುಬಾರಕ್, ಬೆಂಗಳೂರು, ಚಿಕ್ಕಬಳ್ಳಾಪುರ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಕೋಲಾರ ಇನ್ನಿತರೆ ಜಿಲ್ಲೆಗಳಿಂದ ಆಗಮಿಸಿದ್ದ ಕರ್ನಾಟಕ ಮುಸ್ಲಿಂ ಸಂಘದ ಪದಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಮುಖ್ಯಸ್ಥರು ಪಾಲ್ಗೊಂಡಿದ್ದರು.