ಪಾಂಡವಪುರ ತಾಲೂಕು ಆಡಳಿತ ಹಾಗೂ ತಾಪಂನಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ, ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಒತ್ತಡಕ್ಕೆ ಒಳಗಾಗಿರುವ ಕೆಲವು ಅಧಿಕಾರಿಗಳು ಕಾನೂನು ವ್ಯಾಪ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಸಲ್ಲಿಸುವ ಅರ್ಜಿಗಳು ಸಕಾಲಕ್ಕೆ ವಿಲೇವಾರಿಯಾಗುತ್ತಿಲ್ಲ. ಸಾರ್ವಜನಿಕರು ನಿತ್ಯ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಸಂಪರ್ಕ ಬರ ನಿರ್ವಹಣೆ ಮಾಡದೇ ತಾಲೂಕು ಕಚೇರಿ, ತಾಪಂ ಕಚೇರಿಯಲ್ಲಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ತಾಲೂಕು ಘಟಕದಿಂದ ಪಟ್ಟಣದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಐದು ದೀಪದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಸೇರಿದ ಸಾವಿರಾರು ಕಾರ್ಯಕರ್ತರು ನಂತರ ತೆರೆದ ವಾಹನದಲ್ಲಿ ತಾಲೂಕು ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿ ತಾಲೂಕು ಕಚೇರಿ ಎದುರಿನ ಶ್ರೀರಂಗಪಟ್ಟಣ-ಜೇವರ್ಗಿ ಮುಖ್ಯರಸ್ತೆ ತಡೆ ಮಾಡಿ ತಾಲೂಕು ಆಡಳಿತ ಹಾಗೂ ತಾಪಂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಈ ವೇಳೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ತಾಲೂಕು ಆಡಳಿತ ಹಾಗೂ ತಾಪಂನಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ, ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಒತ್ತಡಕ್ಕೆ ಒಳಗಾಗಿರುವ ಕೆಲವು ಅಧಿಕಾರಿಗಳು ಕಾನೂನು ವ್ಯಾಪ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಸಾರ್ವಜನಿಕರು ಸಲ್ಲಿಸುವ ಅರ್ಜಿಗಳು ಸಕಾಲಕ್ಕೆ ವಿಲೇವಾರಿಯಾಗುತ್ತಿಲ್ಲ. ಸಾರ್ವಜನಿಕರು ನಿತ್ಯ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಪ್ರಜಾಸೇವಾ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಲ್ಲಿಸುತ್ತಿರುವ ಅರ್ಜಿಗಳ ವಿಲೇವಾರಿ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಬೇಕು. ಗ್ರಾಪಂಗಳಲ್ಲಿ ಒಂದು ಇ-ಸ್ವತ್ತು ಮಾಡಿಸಿಕೊಳ್ಳಲು, ಪಡಿತರ ಪಡೆಯಲು ಇ-ಕೆವೈಸಿ ಮಾಡಿಸುವುದಕ್ಕೆ ಜನರು ಪರದಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಸಚಿವನಾಗಿ ಕೆಲಸ ಮಾಡುತ್ತಿದ್ದಾಗ ನಿರ್ಮಿಸಿರುವ ಏತನೀರಾವರಿ ಯೋಜನೆಗಳನ್ನು ಚಾಲನೆ ಮಾಡಿಲ್ಲ. ಕಳೆದ ನಾಲ್ಕು ವರ್ಷದಿಂದ ಯೋಜನೆಯ ಮೂಲಕ ಕೆರೆಕಟ್ಟೆಗಳನ್ನು ತುಂಬಿಸಿಲ್ಲ. ಅರಳಕುಪ್ಪೆ ಹಳೇಗದ್ದೆಯ ಮೂಲಕ ಕಾರೇಕುರ ಮೂಲಕ ಮೈಸೂರಿಗೆ ಸಂಪರ್ಕಿಸುವ ಕಾವೇರಿ ನದಿಗೆ 100 ಕೋಟಿ ರು. ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ. ಯೋಜನೆಗೆ ಭೂಮಿ ವಶಪಡಿಸಿಕೊಂಡಿರುವ ರೈತರಿಗೆ ಪರಿಹಾರ ಕೊಡಿಸಿಲ್ಲ ಎಂದು ಕಿಡಿಕಾರಿದರು.
ಸಕ್ಕರೆ ಕಾರ್ಖಾನೆಯಲ್ಲಿ 14-15 ತಿಂಗಳಾದರೂ ರೈತರ ಕಬ್ಬು ಕಟಾವು ಮಾಡುತ್ತಿಲ್ಲ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ತಾಲೂಕು ಅಧಿಕಾರಿಗಳು ಕಾರ್ಖಾನೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮವಹಿಸಬೇಕು. ಇವುಗಳನ್ನು ಸರಿಪಡಿಸಿಕೊಂಡು ಜನರ, ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡದೆ ಹೋದರೆ ಜನರು ಉಗ್ರ ಸ್ವರೂಪದಲ್ಲಿ ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.
ಚಲುವರಾಯಸ್ವಾಮಿ ವಿರುದ್ಧ ಕಿಡಿ:
ಚಲುವರಾಯಸ್ವಾಮಿ ಅವರೇ ನಿಮ್ಮನ್ನು ನೀರಾವರಿ ಸಚಿವರನ್ನಾಗಿ ಮಾಡಿರೋದು ತಮಿಳುನಾಡಿಗೆ ನೀರು ಹರಿಸೋದಕ್ಕಲ್ಲ. ನಮ್ಮ ಜನರ ಹಿತಕಾಯಲು. ತಮಿಳುನಾಡಿಗೆ ನೀರು ಹರಿಸುವುದನ್ನು ಬಿಟ್ಟು ಮೊದಲು ರಾಜ್ಯದ ಜನತೆಯ ಹಿತಕಾಯುವ ಕೆಲಸ ಮಾಡಬೇಕು. ಬರಪರಿಹಾರವಾಗಿ ಎಕರೆ 2500 ರು. ಘೋಷಣೆ ಮಾಡಿರುವುದನ್ನು ಬಿಟ್ಟು ಎಕರೆ 25 ಸಾವಿರ ಹಣವನ್ನು ಪರಿಹಾರ ನೀಡಿ ರೈತರ ಸಂಕಷ್ಟಕ್ಕೆ ನೆರವಾಗಬೇಕು ಎಂದು ಆಗ್ರಹಿಸಿದರು.
ಕಳೆದ ನಾಲ್ಕು ವರ್ಷಗಳಿಂದಲೂ ಸಹಿಸಿಕೊಂಡು ಬಂದಿದ್ದೇವೆ. ಇನ್ನೂ ಮುಂದೆ ಸಹಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಪ್ರತಿ ವಾರ ಒಂದೊಂದು ಪಂಚಾಯ್ತಿಗೆ ತೆರಳಿ ಜನರ ಸಮಸ್ಯೆ ಆಲಿಸುತ್ತೇನೆ. ವಾರದಲ್ಲಿ ಎರಡು ದಿನ ತಾಲೂಕು ಕಚೇರಿಗೂ ಭೇಟಿಕೊಟ್ಟು ಜನರ ಸಮಸ್ಯೆಗೆ ಸ್ಪಂದನೆ ಮಾಡುತ್ತೇನೆ ಎಂದರು.
ವೃದ್ಧೆ ಮಹಿಳೆಯಿಂದ ಆಕ್ರೋಶ:
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪಟ್ಟಣದ ಹಾರೋಹಳ್ಳಿ ಬಡಾವಣೆ ನಿವಾಸಿ ವೃದ್ಧ ಮಹಿಳೆ ಗಿರಿಯಮ್ಮ ನಾನು ಜೀವಂತವಾಗಿದ್ದರೂ ನಾನು ಡೆತ್ ಆಗಿದ್ದೇನೆ ಎಂಬುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಕಳೆದ ಆರು ತಿಂಗಳಿಂದ ರೇಷನ್, ಪಿಂಚಣಿ ಹಣ ಬಂದಿಲ್ಲ. ಮತ್ತೆ ಪಡೆಯಲು ಕಚೇರಿಗೆ ಅಲೆದಾಡುತ್ತಿದ್ದರೂ ಸಮಸ್ಯೆಗೆ ಸ್ಪಂದನೆ ನೀಡುತ್ತಿಲ್ಲ. ಇ-ಕೆವೈಸಿ ಮಾಡಿಸಲು ಹೋದಾಗ ನೀನು ಮರಣ ಹೊಂದಿದ್ದೀಯ ಎಂಬುದಾಗಿ ಹೇಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಇದಕ್ಕೆ ಸ್ಪಂದಿಸಿದ ಮಾಜಿ ಸಚಿವರು ವೃದ್ಧ ಮಹಿಳಿಗೆ ನ್ಯಾಯ ದೊರಕಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಮಹಿಳಾ ಅಧ್ಯಕ್ಷೆ ಅನುಪಮ, ಮುಖಂಡರಾದ ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಮನ್ ಮುಲ್ ನಿರ್ದೇಶಕ ಸಿ.ಶಿವಕುಮಾರ್, ಸಿ.ಪಿ.ಶಿವರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಹೊಸಕೋಟೆಪುಟ್ಟಣ್ಣ, ಮಾಜಿ ನಿರ್ದೇಶಕರಾದ ಪಿ.ಚಲುವರಾಜು, ಗುರುಸ್ವಾಮಿ, ಟಿಎಪಿಸಿಎಂಎಸ್ ನಿರ್ದೇಶಕ ಚಿಕ್ಕಾಡೆ ಗಿರೀಶ್, ಪ್ರಸನ್ನಕುಮಾರ್, ಅನಿಲ್, ಚೇತನ್, ವಿ.ಎಸ್.ನಿಂಗೇಗೌಡ, ಹುಲ್ಕೆರೆಕೊಪ್ಪಲು ಮಧುಸೂಧನ್, ಅರಳಕುಪ್ಪೆ ಮಹದೇವು, ಪಿ.ಎಸ್.ಲಿಂಗರಾಜು, ರಾಧಾಕೃಷ್ಣ, ದ್ಯಾವಪ್ಪ, ಮಹದೇವು, ಸಗಾಯಂ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.