ಮೀನು ಉತ್ಪಾದನೆಯಲ್ಲಿ ಭಾರೀ ಕುಸಿತ

KannadaprabhaNewsNetwork |  
Published : Jun 06, 2024, 12:32 AM IST
ಕಾರವಾರ ಬೈತಖೋಲ ಬಂದರಿನಲ್ಲಿ ಬೋಟ್‌ಗಳು ಲಂಗರು ಹಾಕಿರುವುದು. | Kannada Prabha

ಸಾರಾಂಶ

ಆಳ ಸಮುದ್ರಕ್ಕೆ ತೆರಳುವ ಪರ್ಶಿಯನ್ ಬೋಟ್‌ಗಳು ಮೀನು ಸಿಗದ ಕಾರಣ ಬಂದರಿನಲ್ಲಿ ಲಂಗರು ಹಾಕಿವೆ.

ಕಾರವಾರ: ಪ್ರಸಕ್ತ ವರ್ಷ ಮತ್ಸ್ಯಕ್ಷಾಮದಿಂದಾಗಿ ಕಳೆದ ವರ್ಷಕ್ಕಿಂತ ಅಂದಾಜು ೧೫,೯೫೭ ಮೆಟ್ರಿಕ್ ಟನ್ ಮೀನು ಉತ್ಪಾದನೆ ಕಡಿಮೆಯಾಗಿದೆ. ₹೫೬ ಕೋಟಿ ವಹಿವಾಟು ಕಡಿಮೆಯಾಗಿದೆ.

ಪ್ರತಿ ವರ್ಷ ಕರಾವಳಿಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ಜೂ. ೧ರಿಂದ ಜು. ೩೧ರವರೆಗೆ ಸಂಪೂರ್ಣ ನಿಷೇಧ ಹೇರಲಾಗುತ್ತದೆ. ಆದರೆ ಈ ವರ್ಷ ಮೀನು ಇಲ್ಲದೇ ಮಾರ್ಚ್ ಅವಧಿಯಲ್ಲೇ ಮೀನುಗಾರಿಕೆ ಬಂದಾಗಿದ್ದು, ಮೀನು ಬೇಟೆ ಸಾಕಷ್ಟು ಕಡಿಮೆಯಾಗಿದೆ. ಆಳ ಸಮುದ್ರಕ್ಕೆ ತೆರಳುವ ಪರ್ಶಿಯನ್ ಬೋಟ್‌ಗಳು ಮೀನು ಸಿಗದ ಕಾರಣ ಬಂದರಿನಲ್ಲಿ ಲಂಗರು ಹಾಕಿವೆ.

₹೫೬ ಕೋಟಿ ವಹಿವಾಟು ಕಡಿಮೆ: ಮತ್ಸ್ಯ ಉತ್ಪಾದನೆಗೂ ಬರ ಎದುರಾಗಿರುವುದು ಇಲಾಖೆಯ ಮೀನು ವಹಿವಾಟಿನ ಅಂಕಿ- ಅಂಶಗಳಿಂದ ತಿಳಿಯುತ್ತದೆ. ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ೧,೧೫,೦೮೨ ಮೆಟ್ರಿಕ್ ಟನ್ ಮೀನು ಉತ್ಪಾದನೆ ಮಾಡಲಾಗಿದ್ದು, ₹೧೦೦೪ ಕೋಟಿ ವಹಿವಾಟು ನಡೆದಿತ್ತು. ೨೦೨೧- ೨೨ರಲ್ಲಿ ೧,೧೭,೨೬೬ ಮೆಟ್ರಿಕ್ ಟನ್, ೨೦೨೦- ೨೧ರಲ್ಲಿ ೧,೦೨,೮೦೦ ಮೆಟ್ರಿಕ್ ಟನ್, ೨೦೨೨- ೨೩ರಲ್ಲಿ ೧,೩೧,೦೩೯ ಮೆಟ್ರಿಕ್ ಟನ್ ಮೀನು ಇಳುವರಿ ಪಡೆದು ₹೧೦೬೦ ಕೋಟಿ ವಹಿವಾಟು ನಡೆಸಲಾಗಿತ್ತು. ಆದರೆ ಕಳೆದ ಬಾರಿಗಿಂತ ಈ ವರ್ಷ ೧೫,೯೫೭ ಮೆಟ್ರಿಕ್ ಟನ್ ಮೀನು ಇಳುವರಿ ಕಡಿಮೆಯಾಗಿದೆ. ಕಾರಣ ₹೫೬ ಕೋಟಿ ವಹಿವಾಟು ಕಡಿಮೆಯಾದಂತಾಗಿದೆ.

ಹೇರಳವಾಗಿ ಸಿಗುತ್ತಿಲ್ಲ: ಪ್ರಸಕ್ತ ಸಾಲಿನ ಆರಂಭದಲ್ಲಿ ಮೀನುಗಾರಿಕೆ ಉತ್ತಮವಾಗಿ ನಡೆದಿತ್ತು. ಅದರಲ್ಲಿಯೂ ಪರ್ಶಿಯನ್ ಬೋಟ್‌ನವರು ಉತ್ತಮ ಮೀನುಗಾರಿಕೆ ಮಾಡಿದ್ದರು. ದಿನ ಕಳೆದಂತೆ ಕಡಲಿನಲ್ಲಿಯೂ ಹೇರಳವಾಗಿ ಮೀನು ಸಿಗದೆ ಖಾಲಿ ಬೋಟ್‌ಗಳು ವಾಪಸ್ಸಾಗುವಂತಾಗಿತ್ತು. ಡಿಸೆಂಬರ್‌ನಿಂದ ಮಾರ್ಚ್‌ವರೆಗೆ ಮೀನುಗಾರಿಕೆಗೆ ಹೇಳಿ ಮಾಡಿಸಿದ ಅವಧಿಯಾಗಿದ್ದು, ಆಳ ಸಮುದ್ರಕ್ಕೆ ಇಳಿದ ಎಲ್ಲ ಬೋಟ್‌ಗಳು ಭರಪೂರ ಮತ್ಸ್ಯ ಬೇಟೆ ಮಾಡಿ ಹಿಂತಿರುಗುತ್ತಿದ್ದವು. ಈ ಬಾರಿ ಆ ಸಮಯಕ್ಕೆ ತೆರಳಿದ ಬೋಟ್‌ಗಳಿಗೆ ಮೀನು ಲಭ್ಯವಾಗದೇ ಇಂಧನದ ವೆಚ್ಚ ಸಹಿತ ಆಗದ ಕಾರಣ ಬಹುತೇಕ ಬೋಟ್‌ಗಳು ಲಂಗರು ಹಾಕಿದೆ. ಭರಪೂರ ಮೀನು ಸಿಕ್ಕರೆ ಮಾತ್ರ ಬೋಟ್ ಮಾಲೀಕರಿಗೆ ಲಾಭವಾಗುತ್ತದೆ. ಒಡಿಶಾ, ಜಾರ್ಖಂಡ್, ಬಿಹಾರ ಮೊದಲಾದ ರಾಜ್ಯಗಳಿಂದ ಕಾರ್ಮಿಕರು ಬೋಟ್‌ನಲ್ಲಿ ಕೆಲಸ ಮಾಡಲು ಆಗಮಿಸುತ್ತಾರೆ. ಇವರ ವೇತನ, ವಸತಿ, ಊಟ ಇತ್ಯಾದಿ ಖರ್ಚು ತೆಗೆದು ಲಾಭ ಮಾಡಿಕೊಳ್ಳಬೇಕಾಗುತ್ತದೆ.

ಮೀನುಗಾರರಲ್ಲಿ ಆತಂಕ: ಪ್ರತಿವರ್ಷ ಜೂನ್- ಜುಲೈ ತಿಂಗಳ ಮಳೆಗಾಲದಲ್ಲಿ ಮೀನುಗಳು ಸಂತಾನೋತ್ಪತ್ತಿಯಲ್ಲಿ ತೊಡಗಿಕೊಳ್ಳುವ ಕಾರಣ ಯಾಂತ್ರೀಕೃತ ಬೋಟ್‌ಗಳ ಮೀನುಗಾರಿಕೆ ಸ್ಥಗಿತಗೊಳಿಸಲಾಗುತ್ತದೆ. ಕೇವಲ ೧೦ ಎಚ್‌ಪಿಗಿಂತ ಕಡಿಮೆ ಸಾಮರ್ಥ್ಯದ ಎಂಜಿನ್ ಬಳಸಿ ಮೀನುಗಾರಿಕೆ ಮಾಡಲು ಅವಕಾಶವಿರುತ್ತದೆ. ಭಾರಿ ಮಳೆ, ಚಂಡಮಾರುತವಿದ್ದರೆ ಸಮುದ್ರಕ್ಕೆ ಇಳಿಯಲು ಸಾಧ್ಯವಾಗುವುದಿಲ್ಲ. ಮೀನು ಉತ್ಸಾದನೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದ್ದು, ಮೀನುಗಾರ ಸಮುದಾಯದಲ್ಲಿ ಆತಂಕಕ್ಕೆ ಕಾರಣವಾಗಿದೆ.

PREV

Recommended Stories

ಲೋಕಾ ಎಸ್ಪಿ ಬದ್ರಿನಾಥ್‌ ಸೇರಿ 19 ಪೊಲೀಸರಿಗೆ ರಾಷ್ಟ್ರ ಪದಕ
ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ