ಹಾನಗಲ್ಲ ತಾಲೂಕಿನಲ್ಲಿ ಭ್ರಷ್ಟಾಚಾರದ ಬೃಹತ್ ದರ್ಶನ-ಕಮಡೊಳ್ಳಿ ಟೀಕೆ

KannadaprabhaNewsNetwork |  
Published : Oct 20, 2025, 01:03 AM IST
ಫೋಟೋ : 19ಎಚ್‌ಎನ್‌ಎಲ್1 | Kannada Prabha

ಸಾರಾಂಶ

ಕಂದಾಯ ಇಲಾಖೆಯ 5 ನೌಕರರು ಒಂದೇ ವಾರದಲ್ಲಿ ಲೋಕಾಯುಕ್ತ ಬಲೆಗೆ ಬೀಳುವ ಮೂಲಕ ಹಾನಗಲ್ಲ ತಾಲೂಕಿನಲ್ಲಿ ಭ್ರಷ್ಟಾಚಾರದ ಬೃಹತ್ ದರ್ಶನವನ್ನೇ ಮಾಡಿದಂತಾಗಿದೆ ಎಂದು ಉದ್ಯಮಿ, ಸಮಾಜ ಸೇವಕ ಸಿದ್ದಲಿಂಗಣ್ಣ ಕಮಡೊಳ್ಳಿ ಹರಿಹಾಯ್ದರು.

ಹಾನಗಲ್ಲ: ಕಂದಾಯ ಇಲಾಖೆಯ 5 ನೌಕರರು ಒಂದೇ ವಾರದಲ್ಲಿ ಲೋಕಾಯುಕ್ತ ಬಲೆಗೆ ಬೀಳುವ ಮೂಲಕ ಹಾನಗಲ್ಲ ತಾಲೂಕಿನಲ್ಲಿ ಭ್ರಷ್ಟಾಚಾರದ ಬೃಹತ್ ದರ್ಶನವನ್ನೇ ಮಾಡಿದಂತಾಗಿದೆ ಎಂದು ಉದ್ಯಮಿ, ಸಮಾಜ ಸೇವಕ ಸಿದ್ದಲಿಂಗಣ್ಣ ಕಮಡೊಳ್ಳಿ ಹರಿಹಾಯ್ದರು.

ಭಾನುವಾರ ಹಾನಗಲ್ಲಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಆಡಳಿತ ತೀರ ಹದಗೆಟ್ಟಿದೆ. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಸಣ್ಣಪುಟ್ಟ ಕೆಲಸಗಳಿಗಾಗಿಯೂ ಅಲೆದಾಡಿ, ಕಚೇರಿಗಳ ಬಾಗಿಲು ಕಾಯ್ದು ಬೇಸತ್ತಿದ್ದಾರೆ. ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಲಂಚಾವತಾರವೇ ಎದ್ದು ಕಾಣುತ್ತಿದೆ. ಇದಕ್ಕೆ ಕಡಿವಾಣ ಹಾಕುವಲ್ಲಿ ಜನಪ್ರತಿನಿಧಿಗಳು ಸೋತಿದ್ದಾರೆ. ಸಾರ್ವಜನಿಕರ ಅಳಲು ಅಹವಾಲು ಕೇಳುವವರಿಲ್ಲದೆ ಜನ ಬೇಸತ್ತಿದ್ದಾರೆ ಎಂದರು.ಬೊಮ್ಮನಹಳ್ಳಿಯ ಕಂದಾಯ ಇಲಾಖೆಯಲ್ಲಿ ಉಪತಹಸೀಲ್ದಾರ್‌ ಹಾಗೂ ಡಾಟಾ ಎಂಟ್ರಿ ಅಪರೇಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇದರ ಬೆನ್ನಲ್ಲೆ ಹಾನಗಲ್ಲ ಕಂದಾಯ ಮುಖ್ಯ ಕಚೇರಿಯ ಶಿರಸ್ತೇದಾರ ಹಾಗೂ ಇಬ್ಬರು ಸಿಬ್ಬಂದಿ ಒಂದು ಕೆಲಸಕ್ಕೆ ₹20 ಸಾವಿರಗಳಿಗೆ ಬೇಡಿಕೆ ಇಟ್ಟು, ₹12 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತಕ್ಕೆ ಸರಂಡರ್ ಆಗಿದ್ದಾರೆ. ಇದನ್ನೆಲ್ಲ ನೋಡಿದರೆ ಪ್ರತಿ ಕಚೇರಿಗಳಲ್ಲಿ ಇಂತಹ ಹಲವು ಕಾನೂನು ಬಾಹಿರ ವ್ಯವಹಾರಗಳು ನಡೆಯುತ್ತಿರುವುದು ಎಲ್ಲ ಸಾರ್ವಜನಿಕರ ಗಮನದಲ್ಲಿದೆ. ಒಂದೆರಡು ದಿನಗಳಲ್ಲಿ ಆಗುವ ಕೆಲಸಕ್ಕೆ ವರ್ಷಗಳಷ್ಟು ಓಡಾಡಿಸುವ ದಯನೀಯ ವ್ಯವಸ್ಥೆ ಇಲ್ಲಿಯದಾಗಿದೆ. ರೈತರ ಬೆಳೆವಿಮೆ ಸಕಾಲಿಕವಾಗಿ ಸಿಗುತ್ತಿಲ್ಲ. ಬೆಳೆಹಾನಿ ಪರಿಹಾರವಿಲ್ಲ ಎಂದು ಕಾರವಾಗಿ ತಿಳಿಸಿದರು.ಉತಾರಗಳಲ್ಲಿ ಸರ್ಕಾರಿ-ಸರ್ಕಾರಿ ಸಮಸ್ಯೆಗೆ ರೈತರು ಬೇಸತ್ತು ಹೋಗಿದ್ದಾರೆ. ರೈತರ ಭೂಮಿ ಮೋಜಣಿ, ವಿವಿಧ ರೈತರ ಕೆಲಸಕ್ಕೆ ಪರವಾನಗಿ, ಹೊಲದ ನಕಾಶ ತಿದ್ದುಪಡಿ ಸೇರಿದಂತೆ ಯಾವುದೇ ಕೆಲಸಗಳು ರೈತರಿಗೆ ಸುಲಭವಾಗಿ ದಕ್ಕುತ್ತಿಲ್ಲ. ಇದಕ್ಕೆ ಈಗ ನಡೆದಿರುವ ಲೋಕಾಯುಕ್ತ ದಾಳಿಗಳೇ ಸಾಕ್ಷಿ. ಸರ್ಕಾರದ ಹುಲ್ಲುಗಾವಲು ಹಾಗೂ ಇತರ ಆಸ್ತಿಗಳು ಯಾರು ಯಾರದೋ ಪಾಲಾಗುತ್ತಿವೆ ಎಂದರು.ಹಾನಗಲ್ಲ ತಾಲೂಕಿನ ರಸ್ತೆಗಳ ಗುಂಡಿ ಮುಚ್ಚಲು ಸರ್ಕಾರದಿಂದ ಆಗುತ್ತಿಲ್ಲ. ವಾಹನ ಚಾಲಕರು, ಮಾಲೀಕರು ನಿತ್ಯ ಶಾಪ ಹಾಕುತ್ತ ಸಂಚಾರ ಮಾಡುತ್ತಿದ್ದಾರೆ. ಇದರೊಂದಿಗೆ ರಸ್ತೆ ಅವ್ಯವಸ್ಥೆಯಿಂದ ರಸ್ತೆ ಅವಗಡಗಳು ಹೆಚ್ಚುತ್ತಿವೆ. ಗ್ಯಾರಂಟಿ ಹೆಸರಿನಲ್ಲಿ ಸಾರ್ವಜನಿಕರ ಸುಲಿಗೆ ನಡೆದಿದೆ. ₹20 ಬಾಂಡ್ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ₹200 ಆಗಿದೆ. ರೈತರಿಗಾಗಿ ಬೇಕಾದ ಬಿತ್ತನೆ ಬೀಜ, ಗೊಬ್ಬರ ಬೆಲೆ ಗಗನಕ್ಕೇರಿದೆ. ಮಹಿಳೆಯರಿಗೆ ಉಚಿತ ಬಸ್ ಎಂದು ಹೇಳಿ ಇನ್ನೊಂದೆಡೆ ವಿಪರೀತ ಬೆಲೆ ಏರಿಕೆ ಮಾಡಿ ಸುಲಿಗೆ ನಡೆದಿದೆ. ಇಂತಹ ಸರ್ಕಾರದ ಹಲವು ಸಂಗತಿಗಳನ್ನು ವಿರೋಧಿಸಿ ಯಾವುದೇ ಮುಲಾಜಿಲ್ಲದೆ, ಪಕ್ಷಾತೀತವಾಗಿ ನಾವು ಹೋರಾಟಕ್ಕೆ ಸಿದ್ಧವಾಗಿದ್ದೇವೆ ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಗುರುಸಿದ್ದಯ್ಯ ಹಿರೇಮಠ, ಬಸವರಾಜ ಹಾದಿಮನಿ ಇದ್ದರು.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ