ಧಾರವಾಡದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಶುರು

KannadaprabhaNewsNetwork |  
Published : Oct 20, 2025, 01:03 AM IST
19ಡಿಡಬ್ಲೂಡಿ9ದೀಪಾವಳಿ ನಿಮಿತ್ತ ಧಾರವಾಡ ಮಾರುಕಟ್ಟೆಯಲ್ಲಿ ಖರೀದಿಗೆ ಸಿದ್ಧವಾಗಿರುವ ತರಹೇವಾರಿ ಆಕಾಶ ಬುಟ್ಟಿಗಳು | Kannada Prabha

ಸಾರಾಂಶ

ಹಬ್ಬದ ಅಂಗವಾಗಿ ಒಂದು ವಾರ ಮುಂಚೆಯೇ ಧಾರವಾಡ ಮಾರುಕಟ್ಟೆ ಹಬ್ಬದ ವಸ್ತುಗಳಿಂದ ತುಂಬಿದೆ. ಹೊಸ ಬಟ್ಟೆ, ಹೂ, ಹಣ್ಣು, ಆಕಾಶ ಬುಟ್ಟಿ, ಹಣತೆ, ಪಟಾಕಿ ಸೇರಿ ಇತರೆ ವಸ್ತುಗಳನ್ನು ಖರೀದಿ ಜೋರಾಗಿದೆ.

ಧಾರವಾಡ:

ಅಜ್ಞಾನದ ಕತ್ತಲನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಬೀರುವುದೇ ದೀಪಾವಳಿಯ ಸತ್ಯಾರ್ಥ ಎನ್ನಲಾಗುತ್ತದೆ. ಹೀಗಾಗಿ ಭಾರತೀಯರಿಗೆ ಭಾಗ್ಯದ ಬೆಳಕು ತರುವ ಹಬ್ಬ ದೀಪಾವಳಿ. ಇಂತಹ ದೀಪಾವಳಿ ಹಬ್ಬದ ಸಂಭ್ರಮದ ಇದೀಗ ಧಾರವಾಡದಲ್ಲಿ ಶುರುವಾಗಿದೆ.

ಮಹಾನವಮಿ, ದಸರಾ ಮುಗಿಯುತ್ತಿದ್ದಂತೆ ದೀಪಾವಳಿ ಹೊಸ್ತಿಲಲ್ಲಿದ್ದು, ಈಗಾಗಲೇ ಮನೆ, ಕಚೇರಿ, ಅಂಗಡಿ ಮುಗ್ಗಟ್ಟು, ಗುಡಿ-ಗುಂಡಾರ ಸ್ವಚ್ಛಗೊಳಿಸಿ ಅಮವಾಸ್ಯೆ ಹಾಗೂ ಪಾಡ್ಯೆ ಪೂಜೆಗೆ ಧಾರವಾಡ ಜನರು ಸಿದ್ಧರಾಗಿದ್ದಾರೆ. ಮೊದಲ ದಿನ ಅ. 20 ಸೋಮವಾರ ನೀರು ತುಂಬುವ ಹಬ್ಬ ನರಕಚತುರ್ದಶಿ, ಮಂಗಳವಾರ ಅಮವಾಸ್ಯೆ ಹಾಗೂ ಬುಧವಾರ ಬಲಿಪಾಡ್ಯಮಿ ಎಂದು ಮೂರು ದಿನಗಳ ಕಾಲ ದೀಪಾವಳಿ ಆಚರಣೆಯಾಗುತ್ತಿದೆ. ವ್ಯಾಪಾರಸ್ಥರು ತಮ್ಮ ಹಳೆ ಖಾತೆಗಳನ್ನು ಮುಕ್ತಾಯ ಮಾಡಿ ಹೊಸ ಖಾತೆ ಪ್ರಾರಂಭಿಸುವ ಹಬ್ಬವೂ ಇದಾಗಿದೆ. ಧನ ದೇವತೆ `ಲಕ್ಷ್ಮೀ'''''''' ಯನ್ನು ಇದೇ ಸಮಯದಲ್ಲಿ ಆವಾಹನೆ ಮಾಡಿ ಪೂಜಿಸಲಾಗುತ್ತದೆ.

ಇನ್ನು, ಹಬ್ಬದ ಅಂಗವಾಗಿ ಒಂದು ವಾರ ಮುಂಚೆಯೇ ಧಾರವಾಡ ಮಾರುಕಟ್ಟೆ ಹಬ್ಬದ ವಸ್ತುಗಳಿಂದ ತುಂಬಿದೆ. ಹೊಸ ಬಟ್ಟೆ, ಹೂ, ಹಣ್ಣು, ಆಕಾಶ ಬುಟ್ಟಿ, ಹಣತೆ, ಪಟಾಕಿ ಸೇರಿ ಇತರೆ ವಸ್ತುಗಳನ್ನು ಖರೀದಿ ಜೋರಾಗಿದೆ. ಇಲ್ಲಿಯ ಸುಭಾಷ ರಸ್ತೆ, ಸೂಪರ್ ಮಾರುಕಟ್ಟೆ, ಟಿಕಾರೆ ರಸ್ತೆ, ಅಕ್ಕಿ ಪೇಟೆ ಸೇರಿ ಎಲ್ಲೆಡೆ ಚಿತ್ತಾಕರ್ಷಕ ಆಕಾಶ ಬುಟ್ಟಿಗಳ ದೃಶ್ಯ. ಅಲಂಕಾರಿಕ ಲೈಟಿಂಗ್‌ಗಳಿಂದ ಮಾರುಕಟ್ಟೆ ಜಗಮಗಿಸುತ್ತಿದೆ. ಹಬ್ಬದ ಪ್ರಯುಕ್ತ ಚೆಂಡು ಹೂವು ಕೆಜಿಗೆ ₹ 50ರ ಗಡಿ ದಾಟಿದೆ. ಸೇವಂತಿಗೆ, ಕನಕಾಂಬರ, ಮಲ್ಲಿಗೆ, ಕಾಕಡ, ಗುಲಾಬಿ, ಸುಗಂಧರಾಜ ಉತ್ತಮ ದರದಲ್ಲಿ ಮಾರಾಟವಾಗುತ್ತಿದೆ. ಕೆಲ ದಿನಗಳ ಹಿಂದೆ ಹೂವಿನ ದರ ಕಡಿಮೆ ಇತ್ತು. ದೀಪಾವಳಿ ಪ್ರಯುಕ್ತ ಲಕ್ಷ್ಮೀ ಪೂಜೆ, ವಾಹನ, ಮಳಿಗೆಗಳ ಅಲಂಕಾರ ಉದ್ದೇಶಗಳಿಗಾಗಿ ಹೂವು ಮತ್ತು ಹಣ್ಣುಗಳ ಬೇಡಿಕೆ ಹೆಚ್ಚಾಗಿದೆ.

ಕಡಪಾ ಮೈದಾನದಲ್ಲಿ ಪಟಾಕಿ ಮಾರಾಟ ಮಳಿಗೆಗಳು ಹಾಕಲಾಗಿದೆ. ದೀಪಾವಳಿ ಹಬ್ಬಕ್ಕೆ ಸಡಗರ ಹೆಚ್ಚಿಸುವುದಕ್ಕಾಗಿ ಕೆಲವರು ಹಸಿರು ಪಟಾಕಿಗಳನ್ನು ಖರೀದಿಸುತ್ತಿದ್ದಾರೆ. ಮಕ್ಕಳನ್ನು ಸೆಳೆಯಲು ಫ್ಯಾನ್ಸಿ ಪಟಾಕಿಗಳೇ ಈ ಬಾರಿ ಹೆಚ್ಚಿವೆ. ಪಿಜ್ಜಾ, ಫಿಶ್, ಗಿಟಾರ್, ಗೋಲ್ಡನ್ ಡಕ್, ಜಂಗಲ್ ಫ್ಯಾಂಟಸಿ ಪಟಾಕಿಗಳು ಮಕ್ಕಳನ್ನು ಆಕರ್ಷಿಸುತ್ತಿವೆ. ಜೊತೆಗೆ ಬಟ್ಟೆ ಅಂಗಡಿಗಳಲ್ಲಿಯೂ ಗ್ರಾಹಕರ ದಟ್ಟಣೆ ಇದೆ. ಧಾರವಾಡ ಮಾರುಕಟ್ಟೆ ತುಂಬ ವ್ಯಾಪಾರಸ್ಥರೇ ತುಂಬಿದ್ದು, ಪಾರ್ಕಿಂಗ್‌ ಸಮಸ್ಯೆಯೂ ಜನರಿಗೆ ಎದುರಾಗಿದೆ.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ