ಅಕ್ರಮ ಮರಳುದಂಧೆ, ಅಧಿಕಾರಿಗಳ ಎತ್ತಂಗಡಿಗೆ ರಾಯರಡ್ಡಿ ಪತ್ರ

KannadaprabhaNewsNetwork |  
Published : Oct 20, 2025, 01:03 AM IST
19ಕೆಪಿಎಲ್24 ರಾಯರಡ್ಡಿ ಅವರು ಬರೆದಿರುವ ಪತ್ರದ ಪ್ರತಿ  | Kannada Prabha

ಸಾರಾಂಶ

ತುಂಗಭದ್ರಾ ನದಿಯ ಸುಮಾರು ೮೫ ಕಿಮೀ ಪ್ರದೇಶದಲ್ಲಿ ಅನಧಿಕೃತವಾಗಿ ಪ್ರತಿದಿನ ೧೦೦ರಿಂದ ೧೫೦ ಟ್ರಕ್ ಮರಳು ಹಾಗೂ ಜಲ್ಲಿ ಹೊರರಾಜ್ಯಗಳಿಗೆ ಸಾಗಾಟ

ಕೊಪ್ಪಳ: ತುಂಗಭದ್ರಾ ನದಿ, ಹಿರೇಹಳ್ಳದಲ್ಲಿ ಅಕ್ರಮ ಮರಳು ದಂಧೆ ಹಾಗೂ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ಸರ್ಕಾರಕ್ಕೆ ಆಗುವ ಮುಜುಗರ ತಪ್ಪಿಸಿ ಎಂದು ಸಿಎಂ ಸಿದ್ದರಾಮಯ್ಯಗೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಪತ್ರ ಬರೆದು ಅಚ್ಚರಿ ಮೂಡಿಸಿದ್ದಾರೆ.

ಈ ಹಿಂದೆಯೂ ಸರ್ಕಾರದಲ್ಲಿನ ಸಚಿವರು ಶಾಸಕರ ಮಾತು ಕೇಳುತ್ತಿಲ್ಲ, ಗೌರವ ನೀಡುತ್ತಿಲ್ಲ ಎಂದು ಬರೆದಿದ್ದ ಪತ್ರಕ್ಕೆ ಸಹಿ ಹಾಕಿದ್ದ ಅವರು, ಅದಾದ ನಂತರ ಜೆಸ್ಕಾಂ ವ್ಯಾಪ್ತಿಯಲ್ಲಿ ರೈತರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ವಿದ್ಯುತ್ ಪರಿವರ್ತಕ ನೀಡುತ್ತಿಲ್ಲ ಎಂದು ಸರ್ಕಾರದ ವಿರುದ್ಧವೇ ಪತ್ರ ಬರೆದಿದ್ದರು. ಈಗ ತಮ್ಮ ಸರ್ಕಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಅಧಿಕಾರಿಗಳ ಭ್ರಷ್ಟಾಚಾರದಿಂದ ಸರ್ಕಾರಕ್ಕೆ ಬರಬೇಕಾದ ರಾಜಸ್ವ ಬರುತ್ತಿಲ್ಲ. ಅಲ್ಲದೆ ತುಂಗಭದ್ರಾ ನದಿಯ ಒಡಲು ಹಾಳಾಗುತ್ತಿದೆ. ನಿಯಮಾನುಸಾರ ಕ್ರಮಕೈಗೊಳ್ಳಬೇಕಾದ ಕೊಪ್ಪಳ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಶಾಮೀಲಾಗಿ ಸರ್ಕಾರಕ್ಕೆ ನಷ್ಟ ಮಾಡುತ್ತಿದ್ದಾರೆ ಮತ್ತು ಅಕ್ರಮ ಮರಳು ದಂಧೆಗೆ ಶಾಮೀಲಾಗಿದ್ದಾರೆ. ಹೀಗಾಗಿ, ಕೊಪ್ಪಳ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಸೇರಿದಂತೆ ಎಲ್ಲರನ್ನು ವರ್ಗಾವಣೆ ಮಾಡುವಂತೆ ಖುದ್ದು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

ತುಂಗಭದ್ರಾ ನದಿಯ ಸುಮಾರು ೮೫ ಕಿಮೀ ಪ್ರದೇಶದಲ್ಲಿ ಅನಧಿಕೃತವಾಗಿ ಪ್ರತಿದಿನ ೧೦೦ರಿಂದ ೧೫೦ ಟ್ರಕ್ ಮರಳು ಹಾಗೂ ಜಲ್ಲಿ ಹೊರರಾಜ್ಯಗಳಿಗೆ ಸಾಗಾಟವಾಗುತ್ತಿದ್ದು, ಸರ್ಕಾರಕ್ಕೆ ರಾಜಧನ ನಷ್ಟ ಉಂಟಾಗುತ್ತಿದೆ ಎಂದು ಪತ್ರದಲ್ಲಿ ವಿವರಣೆ ಮಾಡಿದ್ದಾರೆ.

ಮರಳು ಮಾಫಿಯಾ ಗ್ಯಾಂಗ್ ಸುಮಾರು ೨೦೦ಕ್ಕೂ ಹೆಚ್ಚು ಜನರೊಂದಿಗೆ ಸಕ್ರಿಯವಾಗಿದ್ದು, ಇಲಾಖೆಯ ಕೆಲ ಅಧಿಕಾರಿಗಳು ಇದರೊಂದಿಗೆ ಸೇರಿಕೊಂಡಿದ್ದಾರೆ ಎಂಬ ಆರೋಪದ ಇದ್ದು, ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಾಗಬೇಕು ಎಂದು ಖುದ್ದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಚಿವ ಶಿವರಾಜ ತಂಗಡಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಯ ಕುರಿತು ಕ್ರಮ ಅಗತ್ಯವಾಗಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಹಿರಿಯ ಭೂವಿಜ್ಞಾನಿ ಪುಷ್ಪಲತಾ ಕವಲೂರು, ಭೂವಿಜ್ಞಾನಿಗಳಾದ ನಾಗರಾಜು, ಸೈಯದ್ ಫಾಜಿಲ್, ಸಹಾಯಕ ಅಭಿಯಂತರ ನವೀನ್ ಕುಮಾರ್, ಅಧೀಕ್ಷಕ ಮಲ್ಲಿಕಾರ್ಜುನ ಕಮ್ಮಾರ್, ಕಿರಿಯ ಅಭಿಯಂತರ ಸಂಪ್ರೀತಾ ಹಿರೇಮಠ, ಪ್ರಥಮ ದರ್ಜೆ ಸಹಾಯಕ ಹರೀಶ. ಬಿ.ಜಿ., ತ್ರಿವೇಣಿ ಬಸವರಾಜ, ದ್ವಿದಸ ಸುಕನ್ಯಾ ಹೊಸಮನಿ ಎಂಬುವವರ ಹೆಸರು ಉಲ್ಲೇಖಿಸಿರುವ ಬಸವರಾಜ ರಾಯರಡ್ಡಿ ತಕ್ಷಣ ಇವರೆಲ್ಲರನ್ನು ಎತ್ತಂಗಡಿ ಮಾಡಿ ಸರ್ಕಾರಕ್ಕೆ ಆಗುವ ಮುಜುಗರ ತಪ್ಪಿಸಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.

ಅವರನ್ನು ಕೊಪ್ಪಳ ಜಿಲ್ಲೆಯಿಂದ ಬೇರೆಡೆ ವರ್ಗಾವಣೆ ಮಾಡಿದರೆ ಈ ಮೂಲಕ ಭ್ರಷ್ಟಾಚಾರದ ವಿರುದ್ಧ ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆಂಬ ಸ್ಪಷ್ಟ ಸಂದೇಶ ರವಾನೆ ಮಾಡಬೇಕಾಗಿದೆ ಎಂದಿದ್ದಾರೆ.

ತಳಕಲ್ ಕೆರೆ ವಿವಾದ

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಪತ್ರ ಬರೆಯಲು ಪ್ರಮುಖವಾಗಿ ಕಾರಣವಾಗಿರುವುದು ಕುಕನೂರು ತಾಲೂಕಿನ ತಳಕಲ್ ಗ್ರಾಮದಲ್ಲಿ ಕೆರೆ ಹೂಳು ತೆಗೆಯುವುದು ಮತ್ತು ಅದನ್ನು ಬೇರೆಡೆ ಸಾಗಿಸುವುದಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ವಿವಾದ ಎನ್ನಲಾಗುತ್ತದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸರ್ಕಾರಕ್ಕೆ ರಾಜಸ್ವ ನಷ್ಟವಾಗುತ್ತಿದೆ. ಅಷ್ಟೇ ಅಲ್ಲ, ಅಕ್ರಮ ಮರಳು ದಂಧೆಯಿಂದ ನದಿ ಮತ್ತು ಹಳ್ಳಗಳು ನಶಿಸಿ ಹೋಗುತ್ತಿವೆ. ಇದಕ್ಕಾಗಿ ಇಂತಹ ಅಧಿಕಾರಿಗಳನ್ನು ಎತ್ತಂಗಡಿ ಮಾಡಬೇಕಾಗಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ