ಬೆಂಗಳೂರು : ಡ್ರಗ್ಸ್ ಮಾಫಿಯಾ ವಿರುದ್ಧ ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಕಂದಾಯ ಜಾರಿ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಒಟ್ಟು 72 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಜಪ್ತಿ ಮಾಡಿದ್ದಾರೆ.
‘ವೀಡ್ ಔಟ್’ ಹೆಸರಿನಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಬೆಂಗಳೂರಿನ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಹೋಟೆಲ್ ಮತ್ತು ಮಧ್ಯಪ್ರದೇಶ ರಾಜ್ಯದ ಭೂಪಾಲ್ ನಗರದ ರೈಲ್ವೆ ನಿಲ್ದಾಣದಲ್ಲಿ ಪ್ರತ್ಯೇಕವಾಗಿ ನಾಲ್ವರು ಪೆಡ್ಲರ್‌ಗಳು ಡಿಆರ್‌ಐ ಬಲೆಗೆ ಬಿದ್ದಿದ್ದಾರೆ. ಅಲ್ಲದೆ ಈ ಜಾಲದ ಮಾಸ್ಟರ್ ಮೈಂಡ್ ದೆಹಲಿಯಲ್ಲಿ ಸಿಕ್ಕಿಬಿದ್ದಿದ್ದಾನೆ. ಬಂಧಿತರಿಂದ 72 ಕೋಟಿ ರು. ಮೌಲ್ಯದ ಹೈಡ್ರೋಫೋನಿಕ್ ಗಾಂಜಾ ಹಾಗೂ 1.04 ಕೋಟಿ ರು. ನಗದು ಜಪ್ತಿಯಾಗಿದೆ ಎಂದು ಗೊತ್ತಾಗಿದೆ.
ಬುಧವಾರ ಬೆಂಗಳೂರಿನ ಕೆಎಸ್‌ಆರ್ ರೈಲ್ವೆ ನಿಲ್ದಾಣದಿಂದ ದೆಹಲಿಗೆ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊರಟಿದ್ದ ಪೆಡ್ಲರ್ ಬಳಿ 29.88 ಕೆಜಿ ಹೈಡ್ರೋಫೊನಿಕ್ ಗಾಂಜಾ ಸಿಕ್ಕಿದ್ದರೆ, ಅತ್ತ ಆ.19 ರಂದು ಭೂಪಾಲ್‌ನಿಂದ ಬೆಂಗಳೂರಿಗೆ ಅದೇ ರಾಜಧಾನಿ ರೈಲಿನಲ್ಲಿ ಬರುತ್ತಿದ್ದ ಇಬ್ಬರು ಪೆಡ್ಲರ್‌ಗಳ ಬಳಿ 24.186 ಕೆಜಿ ಹೈಡ್ರೋಪೊನಿಕ್ ಗಾಂಜಾ ಸಿಕ್ಕಿದೆ. ಈ ಗಾಂಜಾ ಸಾಗಾಣಿಕೆ ಬಗ್ಗೆ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಲಾಯಿತು ಎಂದು ಡಿಆರ್‌ಐ ಪ್ರಕಟಣೆಯಲ್ಲಿ ಹೇಳಿದೆ.
ಅಲ್ಲದೆ ದೆಹಲಿಯಲ್ಲಿ ಈ ಗಾಂಜಾ ಸಾಗಾಣಿಕೆ ಜಾಲದ ಮಾಸ್ಟರ್ ಮೈಂಡ್ ಸಿಕ್ಕಿಬಿದ್ದಿದ್ದು, ಆತನ ಬಳಿ 1.04 ಕೋಟಿ ರು. ನಗದು ಜಪ್ತಿಯಾಗಿದೆ. ಈತನ ವಿಚಾರಣೆ ವೇಳೆ ಲಭ್ಯವಾದ ಮಾಹಿತಿ ಮೇರೆಗೆ ಗುರುವಾರ ಥೈಲ್ಯಾಂಡ್ ದೇಶದಿಂದ ಆಗಮಿಸಿ ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ತಂಗಿದ್ದ ಪೆಡ್ಲರ್‌ನನ್ನು ಬಂಧಿಸಿ 17.95 ಕೆಜಿ ಗಾಂಜಾ ಜಪ್ತಿಯಾಗಿದೆ. ಈ ಮೂರು ಹಂತದ ಕಾರ್ಯಾಚರಣೆಯಲ್ಲಿ ಒಟ್ಟು 72 ಕೋಟಿ ರು. ಮೌಲ್ಯದ 72.02 ಕೆಜಿ ಹೈಡ್ರೋಫೋನಿಕ್ ಗಾಂಜಾ ಜಪ್ತಿಯಾಗಿದೆ ಎಂದು ಡಿಆರ್‌ಐ ವಿವರಿಸಿದೆ.
ಗಾಂಜಾ ಸಾಗಾಣಿಕೆ ಹೇಗೆ?
ಥಾಯಲ್ಯಾಂಡ್‌ನಿಂದ ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾ ಮೂಲಕ ಬೆಂಗಳೂರಿಗೆ ವಿಮಾನದಲ್ಲಿ ಹೈಡ್ರೋಫೋನಿಕ್ ಗಾಂಜಾ ಸಾಗಾಣಿಕೆ ಮಾಡಲಾಗಿತ್ತು. ಆನಂತರ ರೈಲುಗಳಲ್ಲಿ ದೆಹಲಿ ಸೇರಿದಂತೆ ಇತೆರೆಡೆ ಗಾಂಜಾ ಪೂರೈಕೆಯನ್ನು ಡ್ರಗ್ಸ್ ದಂಧೆಕೋರರು ನಡೆಸುತ್ತಿದ್ದರು. ಈ ಜಾಲದ ಬಗ್ಗೆ ಖಚಿತ ಮಾಹಿತಿ ಪಡೆದ ಡಿಆರ್‌ಐ, ಮೂರು ದಿನಗಳ ಹಿಂದೆ ದಿಢೀರನೇ ದಾಳಿ ನಡೆಸಿ ಮಾದಕ ವಸ್ತು ಪೂರೈಕೆ ಸಿಂಡಿಕೇಟ್ ಅನ್ನು ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.