ಆನ್‌ಲೈನ್‌ ಗೇಮ್‌ಗೆ ಹಣಕ್ಕಾಗಿ ಪಿಜಿ,ಹೋಟೆಲಲ್ಲಿ ಕದಿಯುತ್ತಿದ್ದವನ ಸೆರೆ

KannadaprabhaNewsNetwork |  
Published : Aug 23, 2025, 02:01 AM IST

ಸಾರಾಂಶ

ಪಿಜಿ ಹಾಗೂ ಹೋಟೆಲ್‌ಗಳಲ್ಲಿ ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡುತ್ತಿದ್ದ ಕಿಡಿಗೇಡಿಯೊಬ್ಬನನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪಿಜಿ ಹಾಗೂ ಹೋಟೆಲ್‌ಗಳಲ್ಲಿ ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡುತ್ತಿದ್ದ ಕಿಡಿಗೇಡಿಯೊಬ್ಬನನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದೇವನಹಳ್ಳಿ ನಿವಾಸಿ ನಾಗರಾಜ್ ಬಂಧಿತನಾಗಿದ್ದು, ಆರೋಪಿಯಿಂದ 14 ಮೊಬೈಲ್‌ಗಳು ಹಾಗೂ 4 ಲ್ಯಾಪ್‌ಟಾಪ್‌ಗಳು ಸೇರಿ 6 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಲ್ಯಾಪ್‌ಟಾಪ್‌ ಕಳವು ಸಂಬಂಧ ನಾಗರಾಜ್‌ ತಮಿಳುನಾಡು ಠಾಣೆ ಪೊಲೀಸರಿಂದ ಬಂಧಿತನಾಗಿ ಜೈಲು ಸೇರಿದ್ದ. ಈ ಬಗ್ಗೆ ಮಾಹಿತಿ ಪಡೆದ ತಲಘಟ್ಟಪುರ ಠಾಣೆ ಪೊಲೀಸರು, ನ್ಯಾಯಾಲಯದಲ್ಲಿ ಬಾಡಿ ವಾರೆಂಟ್‌ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದು ನಗರಕ್ಕೆ ತಂದು ವಿಚಾರಣೆ ನಡೆಸಿದಾಗ ಪಿಜಿ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಾಗರಾಜ್ ವಿಪರೀತ ಆನ್‌ಲೈನ್‌ ಗೇಮ್‌ ಆಡುವ ವ್ಯಸನಿ ಆಗಿದ್ದು, ಈ ಚಟಕ್ಕೆ ಹಣ ಹೊಂದಿಸಲು ಆತ ಅಡ್ಡದಾರಿ ತುಳಿದು ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ. ಪಿಜಿಗಳಲ್ಲಿ ವಾಸ್ತವ್ಯ ಹೂಡುತ್ತಿದ್ದ ಆರೋಪಿ, ಪಿಜಿಗಳಲ್ಲಿರುವ ವಿದ್ಯಾರ್ಥಿಗಳು ಹಾಗೂ ಖಾಸಗಿ ಕಂಪನಿ ನೌಕರರು ಹೊರ ಹೋದ ಬಳಿಕ ಅವರ ಕೋಣೆಗಳಲ್ಲಿ ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಕಳವು ಮಾಡುತ್ತಿದ್ದ. ಅದೇ ರೀತಿ ಹೋಟೆಲ್‌ಗಳಲ್ಲಿ ಸಹ ಗ್ರಾಹಕರನ ಸೋಗಿನಲ್ಲಿ ಹೋಗಿ ನಾಗರಾಜ್ ಕೈ ಚಳಕ ತೋರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ವಕೀಲರಿಗೆ ಮಾಹಿತಿ ನೀಡದಿದ್ರೆ ಕ್ರಮ : ಹೈ!
ಉತ್ತರ ಕರ್ನಾಟಕಕ್ಕೆ ₹15,000 ಕೋಟಿ : ಅಜಯ್‌