ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ
ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಸಹಯೋಗದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲಗುಂಟೆಯ ಎಂಇಐ ಲೇಔಟ್ ಮೈದಾನದಲ್ಲಿ ಆಯೋಜಿಸಿದ್ದ ಮೂರು ದಿನಗಳ ದಾಸರಹಳ್ಳಿ ಸಂಭ್ರಮಕ್ಕೆ ಶಾಸಕ ಎಸ್. ಮುನಿರಾಜು ಅವರು ಶುಕ್ರವಾರ ವಿದ್ಯುಕ್ತ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ಏಷ್ಯಾನೆಟ್ ಸುವರ್ಣ ನ್ಯೂಸ್’ ಮತ್ತು ‘ಕನ್ನಡ ಪ್ರಭ’ದಿಂದ ಈ ಹಿಂದೆ ಎರಡು ವರ್ಷ ಆಯೋಜಿಸಿದ್ದ ದಾಸರಹಳ್ಳಿ ಸಂಭ್ರಮಕ್ಕೆ ಅಭೂತಪೂರ್ವ ಯಶಸ್ಸು ಸಿಕ್ಕಿತ್ತು. ಆದ್ದರಿಂದ ಈ ವರ್ಷವೂ ದಾಸರಹಳ್ಳಿ ಸಂಭ್ರಮ ಆಯೋಜಿಸಬೇಕೆಂದು ಅನೇಕ ನಾಗರಿಕರು ಕೋರಿದ್ದರು. ಆದ್ದರಿಂದ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭದವರನ್ನು ಸಂಪರ್ಕಿಸಿ ಮೂರು ದಿನಗಳು ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಈ ಕಾರ್ಯಕ್ರಮಕ್ಕೆ ಸಾವಿರಾರು ಜನರು ಆಗಮಿಸಲಿದ್ದು, ಆಟದ ಮೈದಾನವು ತುಂಬಿ ತುಳುಕಲಿದೆ. ಈ ಹಿಂದೆ ನಡೆದ ಎರಡೂ ಕಾರ್ಯಕ್ರಮಗಳು ಒಂದು ವರ್ಷ ಕಾಲ ದಾಸರಹಳ್ಳಿ ಕ್ಷೇತ್ರದಲ್ಲಿ ಮನೆ ಮಾತಾಗಿತ್ತು. ಇಂತಹ ಅದ್ಭುತ ಕಾರ್ಯಕ್ರಮ ಇದಾಗಿದೆ. ಕಳೆದ ವರ್ಷ ರಾತ್ರಿ 11.30 ಆದರೂ ಸಹ ಜನರಿಂದ ಇಡೀ ಮೈದಾನ ಭರ್ತಿಯಾಗಿತ್ತು. ವಾರವಿಡೀ ದುಡಿದು ಸುಸ್ತಾಗುವ ಕ್ಷೇತ್ರದ ಜನರಿಗೆ ವೀಕೆಂಡ್ ದಿನಗಳಲ್ಲಿ ಮನರಂಜನೆ ಸಿಗಬೇಕೆನ್ನುವ ಉದ್ದೇಶದಿಂದ ಪ್ರತೀ ವರ್ಷ ದಾಸರಹಳ್ಳಿ ಸಂಭ್ರಮ ಕಾರ್ಯಕ್ರಮ ಆಯೋಜಿಸುತ್ತೇವೆ ಎಂದು ಭರವಸೆ ನೀಡಿದರು.ಹಬ್ಬದ ವಾತಾವರಣ:
ಸೂರಜ್ ಫೌಂಡೇಶನ್ ಸಂಸ್ಥಾಪಕಿ ಸುಜಾತ ಮುನಿರಾಜು ಮಾತನಾಡಿ, ದಾಸರಹಳ್ಳಿ ಕ್ಷೇತ್ರದಲ್ಲಿರುವ ಎಲ್ಲರೂ ಸಂತೋಷದಿಂದ ನಗುನಗುತ್ತಾ ಇರಬೇಕು. ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದ ಸಹಯೋಗದಲ್ಲಿ ಮೂರು ವರ್ಷದಿಂದ ದಾಸರಹಳ್ಳಿ ಸಂಭ್ರಮವನ್ನು ಹಬ್ಬದ ರೀತಿ ಆಯೋಜಿಸಿಕೊಂಡು ಬಂದಿದ್ದಾರೆ. ಕ್ಷೇತ್ರದ ಜನರಿಗೆ ಮನರಂಜನೆ ಸಿಗುತ್ತದೆ. ಅದೂ ಅಲ್ಲದೆ ವಿವಿಧ ಬಗೆಯ ಸ್ಪರ್ಧೆಗಳನ್ನೂ ಆಯೋಜಿಸುತ್ತಿದ್ದಾರೆ. ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು.ದಾಸರಹಳ್ಳಿ ಮಂಡಲ ಬಿಜೆಪಿ ಅಧ್ಯಕ್ಷ ಮೇದರಹಳ್ಳಿ ಸೋಮಶೇಖರ್, ಬಿಜೆಪಿ ಹಿರಿಯ ಮುಖಂಡರಾದ ಗಂಗರಾಜು ಟಿ.ಎಸ್, ಕೃಷ್ಣಮೂರ್ತಿ, ಸುವರ್ಣ ನ್ಯೂಸ್‌ನ ವಿಜಯ್ ಕುಮಾರ್, ಅಮೃತ, ಈವೆಂಟ್ ಮ್ಯಾನೇಜ್ಮೆಂಟ್‌ನ ಹರಿಪ್ರಸಾದ್, ಅರವಿಂದ್ ಶೆಟ್ಟಿ, ಸ್ಥಳೀಯ ಮುಖಂಡರಾದ ಭರತ್ ಸೌಂದರ್ಯ, ಗಂಗಾಧರ್, ಗುರುಪ್ರಸಾದ್, ಅಬ್ಬಿಗೆರೆ ಮಂಜುನಾಥ್ ಗೌಡ ಮತ್ತಿತರರು ಹಾಜರಿದ್ದರು.
ಸಾವಿರಾರು ಜನರ ಆಗಮನಮೊದಲ ದಿನವಾದ ಶುಕ್ರವಾರ ಮಧ್ಯಾಹ್ನ 3ಕ್ಕೆ ಆರಂಭಗೊಂಡ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು. ಮಕ್ಕಳ ವೇಷಭೂಷಣ ಸ್ಪರ್ಧೆ, ದಾಸರಹಳ್ಳಿ ಸಾಧಕರಿಗೆ ಸನ್ಮಾನ, ಗಾಯನ, ಸಂಗೀತ ಸಂಜೆ, ಬೀಟ್ ಬಾಕ್ಸಿಂಗ್, ನೃತ್ಯ ಮತ್ತಿತರ ಮನರಂಜನಾ ಕಾರ್ಯಕ್ರಮಗಳು ಜನರ ಮನಸೂರೆಗೊಂಡವು. ಶ್ರೀ ಸ್ಟಾರ್ ಗೋಲ್ಡ್ ಕಂಪನಿಯಿಂದ ಲಕ್ಕಿ ಡ್ರಾ ಮೂಲಕ ಆಯ್ಕೆಯಾದ 9 ಜನರಿಗೆ ಮೂರು ದಿನವೂ ಬೆಳ್ಳಿ ನಾಣ್ಯ ನೀಡಲಾಗುವುದು.
ಇಂದು ಏನೆಲ್ಲಾ ಉಂಟುಬೆಳಗ್ಗೆ 11ಕ್ಕೆ ಮುದ್ದು ಮಗು ಮತ್ತು ಮಕ್ಕಳಿಗೆ ವೇಷ ಭೂಷಣ ಸ್ಪರ್ಧೆ, ಮಧ್ಯಾಹ್ನ 12 ಕ್ಕೆ ಮಹಿಳೆಯರಿಗೆ ಅಡುಗೆ ಮಹಾರಾಣಿ, 2 ಕ್ಕೆ ಓಪನ್ ಸ್ಟೇಜ್ ಮತ್ತು ಗಾಯನ, ಸಂಜೆ 6 ಕ್ಕೆ ಮಿನಿಟ್- ಟು- ವಿನ್- ಇಟ್ -ಗೇಮ್ಸ್, ಸಂಜೆ 6.30 ಕ್ಕೆ ದಾಸರಹಳ್ಳಿ ಸಾಧಕರಿಗೆ ಸನ್ಮಾನ, ಸಂಜೆ 7.30 ಕ್ಕೆ ಮಿಮಿಕ್ರಿ ಗೋಪಿ ಅವರಿಂದ ಹಾಸ್ಯ ಸಂಜೆ, ರಾತ್ರಿ 8 ಕ್ಕೆ ರಾಮ ಮತ್ತು ತಂಡದವರಿಂದ ಮ್ಯೂಸಿಕಲ್ ನ್ಯೆಟ್ಸ್, 9 ಕ್ಕೆ ನೃತ್ಯ ಹಾಗೂ ದಾಸರಹಳ್ಳಿ ಪ್ರತಿಭೆಗಳಿಂದ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಭರಪೂರ ಮನರಂಜನೆಅಯ್ಯಂಗಾರ್ ಪುಳಿಯೋಗರೆ, ಆರಾಧ್ಯ ಕರದಂಟು, ಸಿಮ್ಮಾ ಮಿರ್ಚಿ ಬಜ್ಜಿ, ಅಮೆರಿಕನ್ ಸ್ವೀಟ್ ಕಾರ್ನ್, ಐಸ್‌ಕ್ರೀಂ, ತೆಂಗಿನಕಾಯಿ ಮೊಳಕೆ ಹೂವು, ಕೇರಳ ಹಲ್ವಾ, ರಾಗಿ ಪಾಪಡ್, ದಾವಣಗೆರೆ ಬೆಣ್ಣೆದೋಸೆ, ಗಿರ್ಮಿಟ್, ಡೆಲ್ಲಿ ಮಸಾಲ ಪಾಪಡ್, ಬಂಗಾರಪೇಟೆ ಚಾಟ್ಸ್, ಸಿದ್ಧ ಮಸಾಲಗಳು ಒಳಗೊಂಡತೆ ವಿವಿಧ ಖಾಧ್ಯಗಳು ಭೋಜನ ಪ್ರಿಯರಿಗೆ ಇಷ್ಟವಾದವು. ಮಕ್ಕಳು-ಮಹಿಳೆಯರಿಗೆ ಡ್ರೆಸ್, ಅಲಂಕಾರಿಕ ವಸ್ತು, ಮ್ಯಾಜಿಕ್ ಟಾಯ್ಸ್, ಗೃಹೋಪಯೋಗಿ ಉಪಕರಣಗಳು ಶಾಪಿಂಗ್ ಪ್ರಿಯರನ್ನು ಆಕರ್ಷಿಸಿದವು. ವಯಸ್ಕರು-ಮಕ್ಕಳಿಗಾಗಿ ಆಯೋಜಿಸಿದ್ದ ಸ್ಪರ್ಧೆಗಳು ಭರಪೂರ ಮನರಂಜನೆ ನೀಡಿದವು.