ಕನ್ನಡಪ್ರಭ ವಾರ್ತೆ ರಾಯಚೂರು
ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಜವಾಬ್ದಾರಿ ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟ ಸಂಗತಿಯಾಗಿದೆ ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿ ಒಂದು ವರ್ಷ ಗತಿಸಿದರು ಸಹ ರಾಜ್ಯದ ಕಾಂಗ್ರೆಸ್ ಸರ್ಕಾರ ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವುದರ ವಿರುದ್ಧ ದಲಿತ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಬೃಹತ್ ಹೋರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಘೋಷಣೆ ಕೂಗಿದರು. ಅರೆಬೆತ್ತಲೆಯಾಗಿ ಸಂಚಾರ ತಡೆ ನಡೆಸಿ, ರಸ್ತೆ ಮೇಲೆ ಕುಳಿತು, ಮಲಗಿ ಕಾಂಗ್ರೆಸ್ ಅನುಸರಿಸುತ್ತಿರುವ ಕಾಲಹರಣ ನಡೆಯನ್ನು ಖಂಡಿಸಿದರು. ನಂತರ ಮುಖ್ಯರಸ್ತೆ ಮುಖಾಂತರ ಹೊಸ ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿ ಮುಖಾಂತರ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆ ಸಮಯದಲ್ಲಿ ಏಕಾಏಕಿ ಸಂಚಾರ ತಡೆ ನಡೆಸಿದ ಹಿನ್ನೆಲೆಯಲ್ಲಿ ಕೆಲಕಾಲ ವಾಹನ ಹಾಗೂ ಸಾರ್ವಜನಿಕರ ಓಡಾಟಕ್ಕೆ ಅಡಚಣೆ ಉಂಟಾಯಿತು.
ಈ ವೇಳೆ ಮಾತನಾಡಿದ ಹೋರಾಟಗಾರರು, ಕಳೆದ ಮೂರು ದಶಕಗಳಿಂದ ಒಳ ಮೀಸಲಾತಿಗಾಗಿ ನಿರಂತರ ಹೋರಾಟ ನಡೆಸುತ್ತಲೇ ಬರಲಾಗುತ್ತಿದೆ ಅದರ ಫಲವಾಗಿಯೇ ಬೇಡಿಕೆ ಈಡೇರಿಕೆ ಪ್ರಕ್ರಿಯೇ ಹಂತಿಮ ಘಟ್ಟ ತಲುಪಿದ್ದು ಆದರೆ, ಕಾಂಗ್ರೆಸ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಪರಮೇಶ್ವರ, ಎಚ್.ಸಿಮಹಾದೇವಪ್ಪ ಸೇರಿದಂತೆ ಅನೇಕರು ಅಡ್ಡಗಾಲು ಆಗುತ್ತಿರುವುದರಿಂದ ಅನುಷ್ಠಾನದಲ್ಲಿ ಮೀನಾಮೇಷ ಎಳಿಸಲಾಗುತ್ತಿದೆ. ನಾನು ಅಹಿಂದ ನಾಯಕ, ಆಧುನಿಕ ದೇವರಾಜ ಅರಸು ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಖುರ್ಚಿಯನ್ನು ಉಳಿಸಿಕೊಳ್ಳಲು ಹೊರಟಿದ್ದಾರೆಯೇ ವಿನಾಃ ಎಸ್ಸಿಗಳ ಬಹುದಿನಗಳ ಬೇಡಿಕೆಯನ್ನು ಈಡೇರಿಸಲು ಮಾತ್ರ ಆಸಕ್ತಿ ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಸುಪ್ರೀಂ ಕೋರ್ಟ್ಆದೇಶ ಹೊರಡಿಸಿ ಸರಿಯಾಗಿ ವರ್ಷ ಕಳೆದರೂ ಸಹ ರಾಜ್ಯ ಸರ್ಕಾರ ಜಾರಿಗೆ ಕ್ರಮ ವಹಿಸದೇ ಕಾಲಹರಣ ಮಾಡುತ್ತಿರುವುದನ್ನು ಇನ್ನು ಮುಂದೆ ಸಹಿಸುವುದಿಲ್ಲ, ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಉದ್ದೇಶದಿಂದ ಹಂತ ಹಂತದ ಹೋರಾಟಗಳನ್ನು ರೂಪಿಸಲಾಗಿದ್ದು, ಅದರ ಭಾಗವಾಗಿಯೇ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸ ಲಾಗುತ್ತಿದೆ. ಒಳ ಮೀಸಲು ಜಾರಿಗಾಗಿ ಸರ್ಕಾರಕ್ಕೆ 15 ದಿನಗಳ ಗಡುವು ವಿಧಿಸಿದ್ದು ಅಷ್ಟರಲ್ಲಿ ಬೇಡಿಕೆ ಈಡೇರಿಸದೇ ಇದ್ದಲ್ಲಿ ಹೋರಾಟದ ಸ್ವರೂಪವನ್ನು ತೀವ್ರ ಹಂತಕ್ಕೆ ತೆಗೆದುಕೊಂಡು ಹೋಗುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಎಂ.ವಿರೂಪಾಕ್ಷಿ, ರವೀಂದ್ರ ಜಲ್ದಾರ್, ತಿಮ್ಮಪ್ಪ ಫಿರಂಗಿ, ಜೆ.ಬಿ.ರಾಜು, ಈರಣ್ಣ ಭಂಡಾರಿ, ನಾಗರಾಜ, ಪಿ.ಯಲ್ಲಪ್ಪ, ಶಂಶಾಲಂ,ಎಸ್.ರಾಜು,ಮಾನಪ್ಪ ಮೇಸ್ತ್ರಿ,ಮೌನೇಶ, ನರಸಪ್ಪ, ಸುಭಾಷ್, ದುಳ್ಳಯ್ಯ ಗುಂಜಳ್ಳಿ, ಸತೀಶ, ರವಿ ಕುಮಾರ,ಭೀಮಣ್ಣ ಮಂಚಾಲ,ಜೆ.ತಿಮ್ಮಪ್ಪ,ಚಂದ್ರು ಭಂಡಾರಿ,ಆಂಜನೇಯ್ಯ ಕುರುಬದೊಡ್ಡಿ ಸೇರಿದಂತೆ ವಿವಿಧ ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು,ಸದಸ್ಯರು, ಸಮಾಜದ ಮುಖಂಡರು,ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.