ಕನ್ನಡಪ್ರಭ ವಾರ್ತೆ ತಿಕೋಟಾ
ಬಾಬಾನಗರ ಬಳಿ ಅಂದಾಜು 2000 ಎಕರೆ ಪ್ರದೇಶದಲ್ಲಿ ಹನಿ ನೀರಾವರಿ ಬಳಸಿ ಮಾನವ ನಿರ್ಮಿತ ಬೃಹತ್ ಅರಣ್ಯ ನಿರ್ಮಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ಯಲ್ಲಮ್ಮನ ಹಳ್ಳಕ್ಕೆ ಅಂದಾಜು ₹2.20 ಕೋಟಿ ವೆಚ್ಚದಲ್ಲಿ ಹೊಸ ಜಿನುಗು ಕೆರೆ ನಿರ್ಮಾಣ, ಪೂಜಾರಿ ವಸ್ತಿ ಬಳಿ ₹2 ಕೋಟಿ ವೆಚ್ಚದಲ್ಲಿ ಜಿನುಗು ಕೆರೆ ನಿರ್ಮಾಣಕ್ಕೆ ಭೂಮಿ ಪೂಜೆ, ಯಲ್ಲಮ್ಮನ ಗುಡಿ ಜೀರ್ಣೋದ್ಧಾರ, ಬೂದ ನೀರು ನಿರ್ವಹಣೆ ಮತ್ತು ಒಳಚರಂಡಿ ಕಾಮಗಾರಿ, ಹುಡೇದ ವಸ್ತಿ ಗರಸು ರಸ್ತೆ ನಿರ್ಮಾಣ, ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ, ಕೆಆರ್‌ಐಡಿಎಲ್ ವತಿಯಿಂದ ನಿರ್ಮಿಸಿರುವ ಮರಾಠಾ ಸಮುದಾಯ ಭವನ ಲೋಕಾರ್ಪಣೆ, ನರೇಗಾ ಅಡಿಯಲ್ಲಿ ನಿರ್ಮಿಸಿರುವ ಗ್ರಾಮ ಪಂಚಾಯಿತಿಯ ಎನ್ಆರ್‌ಎಲ್ಎಂ ಕಟ್ಟಡ, ಗೋದಾಮು ಉದ್ಘಾಟನೆ ಹಾಗೂ ₹1.91 ಕೋಟಿ ವೆಚ್ಚದ ಕೆಪಿಎಸ್ ಪ್ರೌಢ ಮತ್ತು ಎಂಪಿಎಸ್ ಶಾಲಾ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ, ಸೇರಿದಂತೆ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನೀರಾವರಿ, ಸುಂದರ ಪರಿಸರದ ಮೂಲಕ ಬಸವನಾಡು ಜನರಿಗಷ್ಟೇ ಅಲ್ಲ ಪಶುಪಕ್ಷಿಗಳಿಗೂ ಸಂಪದ್ಬರಿತವಾಗಬೇಕು ಎಂಬುದು ಶ್ರೀ ಸಿದ್ಧೇಶ್ವರ ಶ್ರೀಗಳ ಕನಸಾಗಿತ್ತು. ಅವರ ಆಶಯಗಳಿಗೆ ಅನುಗುಣವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಈಗ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಸ್ವಗ್ರಾಮ ಬಿಜ್ಜರಗಿ ಪಕ್ಕದಲ್ಲಿರುವ ಬಾಬಾನಗರದ ಬಳಿ ಹನಿ ನೀರಾವರಿ ಬಳಸಿ ಮಾನವ ನಿರ್ಮಿತ ಬೃಹತ್ ಅರಣ್ಯ ಬೆಳೆಸುವ ಮೂಲಕ ಶ್ರೀಗಳಿಗೆ ಗೌರವ ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು. ಅಷ್ಟೇ ಅಲ್ಲ, ರಾಜ್ಯ ಮತ್ತು ದೇಶದ ಸರಾಸರಿಗೆ ಅನುಗುಣವಾಗಿ ವಿಜಯಪುರ ಜಿಲ್ಲೆಯಲ್ಲಿಯೂ ಅರಣ್ಯ ಬೆಳೆಸಲು ಬೆಳೆಸಲು ಎಲ್ಲರೂ ಕೈಜೋಡಿಸೋಣ. ಈ ಮೂಲಕ ಪರಿಸರದಲ್ಲಿ ಲೀನರಾಗಿರುವ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗೌರವ ಸಲ್ಲಿಸೋಣ ಎಂದು ಹೇಳಿದರು.ಬಾಬಾನಗರ ಗ್ರಾಪಂ ಸದಸ್ಯರು ಇತರರಿಗೆ ಮಾದರಿಯಾಗುವಂತೆ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಬದ್ಧತೆಯಿಂದ ಶ್ರಮವಹಿಸಿ ಪ್ರಾಮಾಣಿಕತೆ, ಕಳಕಳಿಯಿಂದ ಗ್ರಾಮದಲ್ಲಿ ಸುಧಾರಣೆ ಮಾಡುವ ಮೂಲಕ ಆದರ್ಶದ ಕೆಲಸ ಮಾಡಿದ್ದಾರೆ. ಶಾಸಕ ಮತ್ತು ಸಚಿವನಾಗಿ ನಾನು ಎಲ್ಲ ಅಭಿವೃದ್ಧಿ ಕೆಲಸಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಭಾವೈಕ್ಯತೆ ಊರಾಗಿರುವ ಬಾಬಾನಗರದಲ್ಲಿ ಪಾಣಿಸಾಹೇಬ ದರ್ಗಾ ಗ್ರಾಮಸ್ಥರ ಆರಾಧನಾ ಸ್ಥಳವಾಗಿದೆ. ಇಲ್ಲಿನ ರೈತರು ಶ್ರಮಜೀವಿಗಳಾಗಿದ್ದು, ಸಂಕಷ್ಟದ ಸಮಯದಲ್ಲಿಯೂ ದ್ರಾಕ್ಷಿ ಬೆಳೆ ಉಳಿಸಿ ಬೆಳೆಸಿದ್ದಾರೆ ಎಂದು ಹೇಳಿದರು.
ಬೇಸಿಗೆಯಲ್ಲಿ ಈ ಭಾಗದಲ್ಲಿ ಉಂಟಾಗುವ ನೀರಿನ ಕೊರತೆ ನೀಗಿಸಲು ನಮ್ಮ ಕೋಟಾದಲ್ಲಿ ಲಭ್ಯವಿರುವ ನೀರನ್ನು ಸಂಗ್ರಹಿಸಿ ಬೆಳೆಸಲು ಸರಕಾರಿ ಜಮೀನಿನಲ್ಲಿ ಎರಡು ಕಡೆ ಒಟ್ಟು ಒಂದು ಟಿಎಂಸಿ ಸಾಮರ್ಥ್ಯ ನೀರು ಸಂಗ್ರಹಿಸಲು ಸ್ಟೋರೇಟ್ ಟ್ಯಾಂಕ್ ನಿರ್ಮಿಸುವ ಯೋಜನೆ ಇದೆ. ಈ ಭಾಗದಲ್ಲಿ ಭೂಮಿಗೆ ಈಗ ಬಂಗಾರದ ಬೆಲೆ ಬಂದಿದ್ದು, ಯಾರೂ ಭೂಮಿ ಮಾರಿಕೊಳ್ಳಬೇಡಿ ಎಂದು ಹೇಳಿದರು.ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮೋಟಗಿ ಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಮಾತನಾಡಿ, ಸಚಿವ ಎಂ.ಬಿ.ಪಾಟೀಲ ಅವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆಶಯಗಳಿಗೆ ತಕ್ಕಂತೆ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕೈಗೊಂಡು ರೈತರ ಬಾಳು ಹಸನಾಗಿಸಿದ್ದಾರೆ. ಈ ಮೂಲಕ ಅವರ ಕೆಲಸ ಕಾರ್ಯಗಳು ಇತರರಿಗೂ ಮಾದರಿಯಾಗಿವೆ. ಸದಾ ಜನಪರ ಚಿಂತನೆ ನಡೆಸುವ ಸಚಿವರ ಭವಿಷ್ಯ ಉಜ್ವಲವಾಗಿದ್ದು, ಅವರಿಗೆ ಒಳ್ಳೆಯದಾಗಲಿ ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮುಖಂಡರಾದ ಎಂ.ಎಸ್.ರುದ್ರಗೌಡರ, ಈರನಗೌಡ ರುದ್ರಗೌಡರ, ಆರ್.ಎಸ್.ಪಾಟೀಲ, ರಾಮನಿಂಗ ಮಸಳಿ, ಜಕ್ಕಪ್ಪ ಎಡವೆ, ಸತೀಶ ಕಾಡಶೆಟ್ಟಿಹಳ್ಳಿ, ಯಾಕೂಬ್ ಜತ್ತಿ, ಸೋಮನಾಥ ಬಾಗಲಕೋಟ, ಅಶೋಕ ರುದ್ರಗೌಡರ, ಗ್ರಾ.ಪಂ.ಅಧ್ಯಕ್ಷೆ ಸಾಹೇರಾಬಾನು ಕರೀಂ ಯಳ್ಳಾಪುರ, ಘೋಣಸಗಿ ಗ್ರಾ.ಪಂ.ಅಧ್ಯಕ್ಷ ಸುರೇಶ ಪವಾರ, ಯಲ್ಲಪ್ಪ ಹೊನಕಟ್ಟಿ, ಪಿ.ಆರ್.ಆಯತವಾಡ, ಯಲ್ಲಾಲಿಂಗ ಹೊನವಾಡ, ಅಣ್ಣಾಸಾಹೇಬ ಬಿರಾದಾರ, ಜಗನು ಮಹಾರಾಜ, ಗುರುಲಿಂಗ ಮಾಳಿ, ಆರ್.ಜಿ.ಯರನಾಳ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.