ವಿಪತ್ತು ನಿಧಿ ನಿರ್ವಹಣೆಯಲ್ಲಿ ಭಾರೀ ಅಕ್ರಮ: ಸಿಎಜಿ ವರದಿ

KannadaprabhaNewsNetwork |  
Published : Dec 18, 2025, 12:45 AM IST
ಸದನ ಕಲಾಪ | Kannada Prabha

ಸಾರಾಂಶ

ಕೋವಿಡ್‌-19 ಸೇರಿದಂತೆ 2017-18ರಿಂದ 2022-23ರವರೆಗಿನ ರಾಜ್ಯ ವಿಪತ್ತು ನಿರ್ವಹಣಾ ನಿಧಿಯ ನಿರ್ವಹಣೆಯಲ್ಲಿ ಸಾಕಷ್ಟು ಅಕ್ರಮ, ಲೋಪಗಳಾಗಿದ್ದು, ಈ ಕುರಿತು ಸಮಗ್ರ ತನಿಖೆಗೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಕರ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಸುವರ್ಣ ವಿಧಾನಸಭೆ

ಕೋವಿಡ್‌-19 ಸೇರಿದಂತೆ 2017-18ರಿಂದ 2022-23ರವರೆಗಿನ ರಾಜ್ಯ ವಿಪತ್ತು ನಿರ್ವಹಣಾ ನಿಧಿಯ ನಿರ್ವಹಣೆಯಲ್ಲಿ ಸಾಕಷ್ಟು ಅಕ್ರಮ, ಲೋಪಗಳಾಗಿದ್ದು, ಈ ಕುರಿತು ಸಮಗ್ರ ತನಿಖೆಗೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಕರ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌ ಅವರು ‘ಕರ್ನಾಟಕದಲ್ಲಿ ವಿಪತ್ತು ನಿರ್ವಹಣಾ ಕಾರ್ಯನಿರ್ವಹಣೆ’ ಹಾಗೂ ‘ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ’ (ಪಿಎಂಕೆಕೆಕೆವೈ)ಯ ಮೇಲಿನ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ (ಡಿಎಂಎಫ್‌ಟಿ) ಕಾರ್ಯನಿರ್ವಣೆ’ ಕುರಿತ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಕರ ವರದಿಯನ್ನು ಮಂಡಿಸಿದರು.

ರಾಜ್ಯ ವಿಪತ್ತು ನಿರ್ವಹಣಾ ನಿಧಿ ನಿರ್ವಹಣೆಯಲ್ಲಿ ಲೆಕ್ಕಪತ್ರ ಮಾನದಂಡಗಳಿಗೆ ವಿರುದ್ಧವಾಗಿ ಹಣಕಾಸು ವಹಿವಾಟುಗಳನ್ನು ಮಾಡಲಾಗಿದೆ. ಅಕ್ರಮ ಪಾವತಿ, ಪರಿಶೀಲನೆ ಮಾಡದೆ ಪರಿಹಾರ ನೀಡಿರುವುದು ಸೇರಿದಂತೆ ಇನ್ನಿತರ ಅಕ್ರಮಗಳಿಗೆ ಕಡಿವಾಣ ಹಾಕಲು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಹೊಣೆಗಾರಿಕೆ ನಿಗದಿ ಮಾಡಬೇಕು. ಜತೆಗೆ ಲೆಕ್ಕಪತ್ರ ಮಾನದಂಡಗಳಿಗೆ ವಿರುದ್ಧವಾಗಿ ಹಣಕಾಸು ವಹಿವಾಟುಗಳ ಕುರಿತು ರಾಜ್ಯ ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಲೆಕ್ಕಪರಿಶೋಧನಾ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ನಿಧಿಗಳ ಅಸಮರ್ಪಕ ಲೆಕ್ಕಾಚಾರ:

2017-18ರಿಂದ 2022-23ನೇ ಸಾಲಿನಲ್ಲಿ ಕೋವಿಡ್‌ 19 ಸೇರಿದಂತೆ ಪ್ರತಿಯೊಂದು ವಿಪತ್ತುಗಳ ನಿರ್ವಹಣೆಯ ನಗದು ಪುಸ್ತಕ ನಿರ್ವಹಣೆಯಲ್ಲಿ ಅಕ್ರಮ ಪಾವತಿಯಾಗಿದೆ. ಅದರ ಜತೆಗೆ ಒಂದೇ ನಮೂದನೆಯಲ್ಲಿ ಹಲವರಿಗೆ ಪರಿಹಾರ ಪಾವತಿ, ಪರಿಹಾರ ಪಾವತಿಯನ್ನು ದೃಢೀಕರಿಸದಿರುವುದು, ಪಾವತಿಯಾಗದೇ ಹಿಂದಿರುಗಿದ ಚೆಕ್‌ಗಳನ್ನು ಸಮರ್ಪಕವಾಗಿ ಲೆಕ್ಕ ಇಟ್ಟುಕೊಳ್ಳದಿರುವ ಅಂಶಗಳು ಪತ್ತೆಯಾಗಿದೆ.

ವಿಪತ್ತು ನಿರ್ವಹಣ ನಿಧಿಗೆ ಸಂಬಂಧಿಸಿದ ಬ್ಯಾಂಕ್‌ ಖಾತೆಗಳ ನಿರ್ವಹಣೆಯಲ್ಲೂ ಅಕ್ರಮ ಎಸಗಲಾಗಿದೆ. ಹಲವು ಬ್ಯಾಂಕ್‌ ಖಾತೆಗಳನ್ನು ನಿರ್ವಹಣೆ ಮಾಡುತ್ತಿರುವುದು ಹಾಗೂ ಹಲವು ಜಿಲ್ಲೆಗಳಲ್ಲಿ ಪಿಡಿ ಖಾತೆಯನ್ನು ತೆರೆಯದೇ ಪ್ರತ್ಯೇಕ ಬ್ಯಾಂಕ್‌ ಖಾತೆ ಮೂಲಕವೇ ನಿಧಿಗಳ ನಿರ್ವಹಣೆ ಮಾಡುತ್ತಿರುವುದು ಪತ್ತೆಯಾಗಿದೆ.

ಅಲ್ಲದೆ, 2017-18ರಿಂದ 2019-20ರವರೆಗೆ ಬರ ನಿರ್ವಹಣೆಗಾಗಿ ₹5,791.47 ಕೋಟಿ ವೆಚ್ಚ ಮಾಡಲಾಗಿದೆ ಎಂದು ತೋರಿಸಲಾಗಿದೆ. ಆದರೆ, ಜಿಲ್ಲಾವಾರು ಬಿಡುಗಡೆ ಮಾಡಿದ ಅನುದಾನ ಮತ್ತು ಅದರ ವೆಚ್ಚ ಮಾಡಿದ ವಿಧಾನಗಳ ಕುರಿತಂತೆ ವಿವರ ಸಲ್ಲಿಸಿಲ್ಲ ಎಂದು ಸಿಎಜಿ ಹೇಳಿದೆ.

ಕೋಟ್ಯಂತರ ರು. ಅನರ್ಹ ವೆಚ್ಚ:

ವಿಪತ್ತು ನಿರ್ವಹಣೆ ಹೆಸರಿನಲ್ಲಿ ಅನರ್ಹ ವೆಚ್ಚ ಮಾಡಿರುವುದೂ ಲೆಕ್ಕಪರಿಶೋಧನೆ ವೇಳೆ ತಿಳಿದುಬಂದಿದೆ. ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರಗಳ ಮೇಲ್ದರ್ಜೆಗೇರಿಸುವ ಉದ್ದೇಶಕ್ಕೆ ₹3.05 ಕೋಟಿ ಅನರ್ಹ ವೆಚ್ಚ ಮಾಡಲಾಗಿದೆ. ಕೇಂದ್ರ ತಂಡವು ರಾಜ್ಯದಲ್ಲಿ ಪರಿಶೀಲನೆಗೆ ಬಂದಾಗ ₹11.22 ಲಕ್ಷಗಳನ್ನು ನೀಡಿ ಚಾರ್ಟರ್ಡ್‌ ವಿಮಾನವನ್ನು ಬಾಡಿಗೆ ಪಡೆದಿರುವುದು ತಿಳಿದುಬಂದಿದೆ.

2017ರಲ್ಲಿ ಏರೋ ಇಂಡಿಯಾದಲ್ಲಿ ವಿಪತ್ತು ನಿರ್ವಹಣೆಗಾಗಿ ₹27.20 ಲಕ್ಷ ಬಿಡುಗಡೆ ಮಾಡಲಾಗಿದ್ದರೂ, ಆ ಅನುದಾಯ ಏತಕ್ಕಾಗಿ ಬಿಡುಗಡೆ ಮಾಡಲಾಗಿದೆ ಎಂಬ ಬಗ್ಗೆ ಸೂಕ್ತ ದಾಖಲೆ ಒದಗಿಸುವಲ್ಲ ಸಂಬಂಧಪಟ್ಟ ಇಲಾಖೆ ವಿಫಲವಾಗಿದೆ. ಹಾಗೆಯೇ, ಬರಗಾಲದ ಸಮಯದಲ್ಲಿ ಮೇವು ಖರೀದಿಗಾಗಿ ₹92 ಕೋಟಿ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಪಶುಸಂಗೋಪನಾ ಇಲಾಖೆ ಆಯುಕ್ತರಿಗೆ ಹೆಚ್ಚುವರಿಯಾಗಿ ₹5 ಕೋಟಿ ಬಿಡುಗಡೆ ಮಾಡಲಾಗಿದೆ. ಅದಕ್ಕೆ ಸೂಕ್ತ ಕಾರಣವನ್ನು ನೀಡಿಲ್ಲ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

---

ತಹಸೀಲ್ದಾರ್ ಸಹಿ ನಕಲು ಮಾಡಿ ಅಕ್ರಮ

ಚಿಂತಾಮಣಿ ತಾಲೂಕು ತಹಸೀಲ್ದಾರ್‌ ಕಚೇರಿಯಲ್ಲಿ 2017-18ರಲ್ಲಿ ಕಚೇರಿ ಸಹಾಯಕನೊಬ್ಬ 59 ಚೆಕ್‌ಗಳಿಗೆ ತಹಸೀಲ್ದಾರ್‌ ಸಹಿ ನಕಲು ಮಾಡಿ ₹18.59 ಲಕ್ಷ ದುರುಪಯೋಗ ಮಾಡಿಕೊಂಡಿದ್ದು ಪತ್ತೆಯಾಗಿದೆ. ಈ ಕುರಿತಂತೆ ಪೊಲೀಸರಿಗೆ ದೂರು ದಾಖಲಾಗಿದ್ದರೂ, ಮುಂದೆ ಯಾವುದೇ ಸಮರ್ಪಕ ಕ್ರಮವಾಗಿಲ್ಲ ಎಂದು ಲೆಕ್ಕಪರಿಶೋಧನಾ ವರದಿಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.ಸಿಎಜಿ ಮಾಡಿರುವ ಪ್ರಮುಖ ಶಿಫಾರಸುಗಳು:

*ಪ್ರವಾಹ, ಬರಗಾಲಗಳ ಸಮರ್ಪಕ ನಿರ್ವಹಣೆ, ನೀರಿನ ಬೇಡಿಕೆ ಮತ್ತು ಪೂರೈಕೆ ಅಂತರ ಪರಿಹರಿಸಲು ರಾಜ್ಯದಲ್ಲಿ ಸಮಗ್ರ ನೀರಿನ ಲೆಕ್ಕಪರಿಶೋಧನೆ ನಡೆಸಬೇಕು. ಜತೆಗೆ ಕಾಲಕಾಲಕ್ಕೆ ಕೊಳವೆಬಾಗಿಗಳ ಗಣತಿಯನ್ನು ಕಡ್ಡಾಯವಾಗಿ ನಡೆಸಬೇಕು

*ಪರಿಶೀಲನೆ ಮಾಡದೇ ಮಳೆಹಾನಿ ಪರಿಹಾರದಲ್ಲೂ ಅಕ್ರಮ ಪಾವತಿ, ಪರಿಶೀಲನೆ ಮಾಡದೆ ಪರಿಹಾರ ನೀಡುವುದನ್ನು ತಪ್ಪಿಸಲು ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು

*ಭೂಕುಸಿತ ಶಮನಗೊಳಿಸುವುದು, ಭೂಕುಸಿತ ನಿರ್ವಹಣೆ, ಸಾಮರ್ಥ್ಯ ವೃದ್ಧಿ, ಜಾಗೃತಿ ಕಾರ್ಯಕ್ರಮಗಳಿಗಾಗಿ ವಿಶೇಷ ಉದ್ದೇಶ ವಾಹಕ ರಚನೆ ಮಾಡಬೇಕು

ಅಂಕಿ-ಅಂಶ *2017-18ರಿಂದ 2022-23ರವರೆಗೆ ವಿಪತ್ತಿನಿಂದ ರಾಜ್ಯದಲ್ಲಿ 1.69 ಕೋಟಿ ರು. ನಷ್ಟ, 347 ಜೀವ ಹಾನಿ, 6,329 ಜಾನುವಾರು ಸಾವು

*2018ರಲ್ಲಿ 30 ಜಿಲ್ಲೆಗಳಲ್ಲಿ ಬರಗಾಲ, 2019ರಲ್ಲಿ 22 ಜಿಲ್ಲೆಗಳಲ್ಲಿ ಪ್ರವಾಹ, 2020ರಲ್ಲಿ 25 ಜಿಲ್ಲೆಗಳಲ್ಲಿ ಪ್ರವಾಹ, 2021ರಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಚಂಡಮಾರುತ, 2022ರಲ್ಲಿ 30 ಜಿಲ್ಲೆಗಳಲ್ಲಿ ಪ್ರವಾಹ ಹಾಗೂ 2023ರಲ್ಲಿ 31 ಜಿಲ್ಲೆಗಳಲ್ಲಿ ಬರ

ಖನಿಜ ಪ್ರತಿಷ್ಠಾನ ಟ್ರಸ್ಟ್‌ಗಳ ಆದಾಯಕ್ಕೆ ಹೊಡೆತ:ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ (ಡಿಎಂಎಫ್‌ಟಿ)ಗಳ ಪ್ರಮುಖ ಹಣಕಾಸು ಮೂಲವಾದ ಗಣಿ ಮತ್ತು ಕಲ್ಲುಗಣಿ ಗುತ್ತಿಗೆ ಹಿಡುವಳಿದಾರರು ನಿಗದಿತ ದರಗಳಲ್ಲಿ ನೀಡುವ ಹಣಕಾಸು ಬಾಕಿ ಮೊತ್ತ ಸಂಗ್ರಹಣೆಯಲ್ಲಿ ನಿಯಂತ್ರಣ ಇಲ್ಲದ ಕಾರಣ ಡಿಎಂಎಫ್‌ಟಿ ಆದಾಯಕ್ಕೆ ಕುತ್ತುಂಟಾಗಿದೆ. ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ ಉದಾಸೀನತೆಯಿಂದ ನಿಶ್ಚಿತ ಅವಧಿ ಠೇವಣಿಗಳಿಂದ ಗಳಿಸಬಹುದಾದ ಬಡ್ಡಿ ನಷ್ಟವನ್ನು ಎದುರಿಸಬೇಕಾಗಿದೆ ಎಂದು ಸಿಎಜಿ ತಿಳಿಸಿದೆ.ಇನ್ನು ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ಗಳು 2023ರ ಮಾರ್ಚ್‌ ಅಂತ್ಯದವರೆಗೆ ₹4,003.51 ಕೋಟಿ ಸಂಗ್ರಹಿಸಿದ್ದು, ಅದರಲ್ಲಿ ₹1,826.46 ಕೋಟಿ ಖರ್ಚು ಮಾಡಿದೆ. ಹಾಗೆಯೇ, 2023ರ ಮಾರ್ಚ್‌ವರೆಗೆ ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ ಅಡಿ 0,856 ಯೋಜನೆಗಳನ್ನು ಮಂಜೂರು ಮಾಡಿದ್ದು, ಅವುಗಳ ಅನುಷ್ಠಾನಕ್ಕೆ ₹3,902 ಕೋಟಿ ಹಣಕಾಸು ಹಂಚಿಕೆ ಮಾಡಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು