ಶಿಕಾರಿಪುರ: ಇಲ್ಲಿನ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಹಾಗೂ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಮೂಡಬಿದಿರೆ ಸಂಯುಕ್ತಾಶ್ರಯದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರ ಹುಟ್ಟುಹಬ್ಬದ ಅಂಗವಾಗಿ ಫೆ.20 ಹಾಗೂ 21 ರಂದು ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದರು.
ಜನವರಿ 17 ಹಾಗೂ ಫೆಬ್ರವರಿ 2 ರಂದು ಶಿಕಾರಿಪುರ ಪಟ್ಟಣ ಹಾಗೂ ಅಂಜನಾಪುರ ಹೋಬಳಿ, ಜನವರಿ 24 ಹಾಗೂ ಫೆಬ್ರವರಿ 16ಕ್ಕೆ ಹೊಸೂರು ಹೋಬಳಿ, ಜನವರಿ 31 ಹಾಗೂ ಫೆಬ್ರವರಿ 14ಕ್ಕೆ ಉಡುಗಣಿ ಹೋಬಳಿ, ತಾಳಗುಂದ ಹೋಬಳಿ ಹಾಗೂ ಶಿರಾಳಕೊಪ್ಪ ಪಟ್ಟಣದಲ್ಲಿ ಮಾಹಿತಿ ಶಿಬಿರಗಳು ನಡೆಯಲಿವೆ. ಉದ್ಯೋಗ ಮೇಳಕ್ಕೆ ಪೂರಕವಾಗಿ ನಡೆಯಲಿರುವ ಶಿಬಿರಗಳಲ್ಲಿ ಭಾಗವಹಿಸಿ ವಿದ್ಯಾವಂತ ಯುವಕ, ಯುವತಿಯರು ಸದುಪಯೋಗ ಪಡೆದುಕೊಳ್ಳಲು ಕೋರಿದರು.
ಆಳ್ವಾಸ್ ವಿದ್ಯಾ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಸಂಸದ ಬಿ. ವೈ. ರಾಘವೇಂದ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ರವರ ಅಪೇಕ್ಷೆಯ ಮೇರೆಗೆ ತಾಲೂಕಿನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಕಳೆದ 17ವರ್ಷಗಳಿಂದ ಹಲವಾರು ಉದ್ಯೋಗ ಮೇಳಗಳನ್ನು ಆಯೋಜಿಸಿದ ಅಪಾರ ಅನುಭವ ಹೊಂದಿದ್ದೇವೆ. ಇದುವರೆಗೂ ಅಂದಾಜು 36 ಸಾವಿರ ಜನರಿಗೆ ಉದ್ಯೋಗ ಲಭಿಸಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಯುವಕರಿಗೆ ಕಾಳಜಿ ವಹಿಸಿ ಉದ್ಯೋಗಗಳು ದೊರಕಿಸಿಕೊಡಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಫೆಬ್ರವರಿ 20 ಹಾಗೂ 21ರಂದು ನಡೆಯುವ ಉದ್ಯೋಗ ಮೇಳದ ಮುನ್ನ ನಡೆಯುವ ಮಾಹಿತಿ ಕಾರ್ಯಗಾರಗಳಲ್ಲಿ ಭಾಗವಹಿಸಿದ್ದಲ್ಲಿ ಮೇಳದಲ್ಲಿ ಪಾಲ್ಗೊಂಡು ಸದುಪಯೋಗಪಡಿಸಿಕೊಳ್ಳಲು ಹೆಚ್ಚಿನ ಸಹಕಾರಿಯಾಗಲಿದೆ ಎಂದರು.ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಹಾಗೂ ಆಳ್ವಾಸ್ ವಿದ್ಯಾಸಂಸ್ಥೆ ಮೂಡಬಿದಿರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.