ಕಾನೂನಾತ್ಮಕ ಹೋರಾಟ ಇನ್ನೂ ಮುಂದೆ ನಡೆಯಲ್ಲ. ಇನ್ನೇನಿದ್ದರೂ ರಕ್ತ ಕ್ರಾಂತಿಯಂತಹ ಉಗ್ರ ಸ್ವರೂಪದ ಹೋರಾಟ ನಡೆಸಿ ನಮಗೆ ನ್ಯಾಯ ದೊರೆಕಿಸಿಕೊಳ್ಳುವ ಅನಿವಾರ್ಯವನ್ನು ಸರಕಾರವೇ ಸೃಷ್ಟಿ ಮಾಡಲು ಹೊರಟಿರುವುದು ದುರದೃಷ್ಟಕರ.
ಹೋರಾಟಕ್ಕೆ ಸಜ್ಜಾದ ಗ್ರಾಮಸ್ಥರು: ಬಾವಿಕೇರಿಯಲ್ಲಿ ನಿರ್ಣಾಯಕ ಸಭೆ
ಕನ್ನಡಪ್ರಭ ವಾರ್ತೆ ಅಂಕೋಲಾಕಾನೂನಾತ್ಮಕ ಹೋರಾಟ ಇನ್ನೂ ಮುಂದೆ ನಡೆಯಲ್ಲ. ಇನ್ನೇನಿದ್ದರೂ ರಕ್ತ ಕ್ರಾಂತಿಯಂತಹ ಉಗ್ರ ಸ್ವರೂಪದ ಹೋರಾಟ ನಡೆಸಿ ನಮಗೆ ನ್ಯಾಯ ದೊರೆಕಿಸಿಕೊಳ್ಳುವ ಅನಿವಾರ್ಯವನ್ನು ಸರಕಾರವೇ ಸೃಷ್ಟಿ ಮಾಡಲು ಹೊರಟಿರುವುದು ದುರದೃಷ್ಟಕರ ಎಂದು ಗ್ರಾಮದ ಪ್ರಮುಖ ರವಿ ನಾಯಕ ಆಕ್ರೋಶ ವ್ಯಕ್ತಪಡಿಸಿದರು.ಬಾವಿಕೇರಿಯಲ್ಲಿ ಉದ್ದೇಶಿತ ಅಣು ವಿದ್ಯುತ್ ಸ್ಥಾವರ ನಿರ್ಮಾಣ ವಿರೋಧಿಸಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಪ್ರಸ್ತಾವನೆಯ ಕಾರ್ಯ ನಡೆಯುತ್ತಿದೆ ಎನ್ನುವ ಮಾಹಿತಿಯನ್ನು ಆಧರಿಸಿ ಬಾವಿಕೇರಿ ಮಂಡದ ಮನೆ ಎದುರು ಮಂಗಳವಾರ ಗ್ರಾಮದ ಸಾರ್ವಜನಿಕರು ಸಭೆ ನಡೆದ ಸಮಯದಲ್ಲಿ ಅಣುಸ್ಥಾವರಕ್ಕೆ ಭಾರಿ ವಿರೋಧ ವ್ಯಕ್ತವಾಯಿತು.ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಜನ ಹಲವಾರು ಯೋಜನೆಗೆ ಬಲಿಯಾಗಿದ್ದಾರೆ. ಕೈಗಾ ಅಣುಸ್ಥಾವರ, ಸೀಬರ್ಡ್, ವಿಮಾನ ನಿಲ್ದಾಣ, ಕೊಂಕಣ ರೈಲ್ವೆಯಂತಹ ಅನೇಕ ಯೋಜನೆಯಿಂದ ನಿರಾಶ್ರಿತರಾಗಿದ್ದಾರೆ. ಜೊತೆಗೆ ಕಳೆದ ಕೆಲ ವರ್ಷದಿಂದ ಕೇಣಿಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವಾಣಿಜ್ಯ ಬಂದರು ಯೋಜನೆ ನಡೆದಿದ್ದು ಅದರ ಕುರಿತಾಗಿಯೂ ತೀವ್ರ ವಿರೋಧ ನಡೆಯುತ್ತಿರುವಾಗಲೇ ಮತ್ತೊಂದು ಹೊಸ ಯೋಜನೆ ಅಣು ವಿದ್ಯುತ್ ಸ್ಥಾವರದಂತಹ ಪರಿಸರಕ್ಕೆ ಮಾರಕ ಯೋಜನೆ ಬಾವಿಕೇರಿಯಲ್ಲಿ ನಡೆಸಲು ಹುನ್ನಾರ ನಡೆಸಿರುವುದು ಬೇಸರದ ಸಂಗತಿ. ಒಂದು ವೇಳೆ ಈ ಯೋಜನೆ ನಡೆಸಲು ಸರಕಾರ ಮುಂದಾದರೇ ಮುಂದಿನ ದಿನದಲ್ಲಿ ಭಾರಿ ಉಗ್ರ ಹೊರಾಟಕ್ಕೆ ಮುನ್ನುಡಿ ಇಡಬೇಕಾದಿತು ಎನ್ನುವ ಮಾತುಗಳು ಸಭೆಯಲ್ಲಿ ಕೇಳಿ ಬಂದವು.ತಕ್ಷಣ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಿಕೊಂಡು ಜಿಲ್ಲಾಧಿಕಾರಿ ಬಳಿ ಮನವಿ ಸಲ್ಲಿಸೋಣ, ಅಲ್ಲಿ ಅವರಿಗೂ ಮನವರಿಕೆ ಮಾಡಿ ಯೋಜನೆಯನ್ನು ಇಲ್ಲಿ ಬಾರದ ರೀತಿಯಲ್ಲಿ ತಮ್ಮಿಂದ ವರದಿ ಸಲ್ಲಿಸಲು ಮನವಿ ಮಾಡೋಣ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.ಜನಪ್ರತಿನಿಧಿಗಳಿಗೆ ಮನವಿ ಮಾಡೋಣ, ನಮ್ಮಲ್ಲಿ ಸಭೆ ಕರೆದು ಸಂಪೂರ್ಣವಾಗಿ ಮಾಹಿತಿ ಪಡೆಯೋಣ. ಅವರನ್ನು ವಿಶ್ವಾಸಕ್ಕೆ ಪಡೆದು ಮುಂದಿನ ಹೋರಾಟ ನಡೆಸೋಣ. ಅವರು ಇಲ್ಲಿ ಬಾರದಿದ್ದರೆ ಹೋರಾಟ ಎಲ್ಲಿಯೂ ಆಗಬಾರದು ಅಂತಹ ಹೋರಾಟಕ್ಕೆ ಮುನ್ನುಡಿಯಾಗೋಣ ಎನ್ನುವ ಮಾತು ಕೇಳಿಬಂದವು.ಸಭೆಯಲ್ಲಿ ಉದಯ ನಾಯಕ, ಸಂಜಯ ನಾಯ್ಕ, ರಾಮಕೃಷ್ಣ ನಾಯಕ, ಸಂಜೀವ ಬಲೇಗಾರ, ಶಂಕರ ಬಲೇಗಾರ, ಮಹೇಶ ಗೌಡ ಸೇರಿದಂತೆ ಹಲವರು ಇದ್ದರು.ಅಣು ವಿದ್ಯುತ್ ಸ್ಥಾವರ ತೂಗುಗತ್ತಿ: ಅಶೀಸರಅಂಕೋಲಾ ತಾಲೂಕಿನ ಬಾವಿಕೇರಿಯಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಸ್ಥಳ ಸೂಕ್ತತೆ ಹಾಗೂ ಭೂವೈಜ್ಞಾನಿಕ ಸಮೀಕ್ಷೆಗೆ ಎನ್‌ಟಿಪಿಸಿ ಮುಂದಾಗಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಪರಿಸರವಾದಿ ಅನಂತ ಹೆಗಡೆ ಅಶೀಸರ ಕಳವಳ ವ್ಯಕ್ತಪಡಿಸಿದ್ದಾರೆ.ರಾಜ್ಯದ ಐದು ಕಡೆಗಳಲ್ಲಿ ಇದೇ ರೀತಿ ಪ್ರಸ್ತಾವನೆ ಮಾಡಲಾಗಿದೆ. ಈಗಾಗಲೇ ಶಿವಮೊಗ್ಗದಲ್ಲಿ ಜನತೆ ಪ್ರತಿಭಟನಾ ಸಭೆಯನ್ನೂ ನಡೆಸಿದ್ದಾರೆ. ಉತ್ತರ ಕನ್ನಡದಲ್ಲಿ ಈಗಾಗಲೇ ಪರಿಸರಕ್ಕೆ ಮಾರಕವಾದ ಹಲವು ಯೋಜನೆಗಳು ಬಂದಿವೆ. ಕೈಗಾದಲ್ಲಿ ಅಣು ವಿದ್ಯುತ್ ಯೋಜನೆ ಇದೆ. ಕೈಗಾದ ತಲಾ 700 ಮೆ.ವ್ಯಾ.ಗಳ 5 ಹಾಗೂ 6ನೇ ಘಟಕ ನಿರ್ಮಾಣ ಕಾಮಗಾರಿ ಆರಂಭವಾಗಿರುವ ಸಂದರ್ಭದಲ್ಲಿ ಮತ್ತೆ ಪರಮಾಣು ಸ್ಥಾವರದ ಬಗ್ಗೆ ಸ್ಥಳ ಸೂಕ್ತತೆ ಬಗ್ಗೆ ಪರಿಶೀಲನೆ ಪ್ರಸ್ತಾಪ ಮಾಡಿರುವುದು ಗಂಭೀರ ವಿಷಯವಾಗಿದೆ. ಇಲ್ಲಿನ ಜನತೆ ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಅವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.