ಕನ್ನಡಪ್ರಭ ವಾರ್ತೆ ಮಂಗಳೂರು
ಪ್ರತಿಭಟನಾ ಸಭೆ ಮುಕ್ತಾಯವಾಗುತ್ತಿದ್ದಂತೆ ಕೆಲವರು ಖಾಸಗಿ ಬಸ್ಸಿಗೆ ಕಲ್ಲು ತೂರಾಟ ನಡೆಸಿ, ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.
ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ ನೂರಾರು ಮಂದಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಲೇಡಿಹಿಲ್‌ನಲ್ಲಿರುವ ನಾರಾಯಣ ಗುರು ವೃತ್ತದಿಂದ ಮಹಾನಗರ ಪಾಲಿಕೆ ಕಚೇರಿಯವರೆಗೆ ಬೃಹತ್ ಪಾದಯಾತ್ರೆ ನಡೆಸಿದರು. ಬಳಿಕ ಮಹಾನಗರ ಪಾಲಿಕೆ ಎದುರು ಪ್ರತಿಭಟನಾ ಸಭೆ ಜರಗಿತು. ಪ್ರತಿಭಟನಾಕಾರರು ಕೇಂದ್ರ ಸರ್ಕಾರ, ರಾಜ್ಯಪಾಲರ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದರು.ಪ್ರತಿಭಟನಾ ಸಭೆಯಲ್ಲಿ ನಾಯಕರ ಭಾಷಣ ಮುಗಿಯುತ್ತಿದ್ದಂತೆ ಕೆಲವು ಕಾರ್ಯಕರ್ತರು ರಸ್ತೆ ನಡುವೆ ಟಯರ್‌ಗಳನ್ನಿಟ್ಟು ಬೆಂಕಿ ಹಚ್ಚಿದರು, ರಸ್ತೆ ತಡೆ ನಡೆಸಿದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಬೆಂಕಿ ನಂದಿಸಿದರು. ಈ ಸಂದರ್ಭ ಕೆಲವರು ಸ್ಟೇಟ್‌ಬ್ಯಾಂಕ್‌ನಿಂದ ಜೋಕಟ್ಟೆ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ಸಿಗೆ ಕಲ್ಲು ಎಸೆದಿದ್ದರಿಂದ ಬಸ್ಸಿನ ಮುಂಭಾಗದ ಗಾಜು ಪುಡಿಯಾಗಿತ್ತು. ಆದರೆ ಯಾರಿಗೂ ಗಾಯವಾಗಿಲ್ಲ.
ಸರ್ಕಾರ ಅಸ್ಥಿರ ಯತ್ನ:
ರಾಜಕೀಯ ಕಾರಣಕ್ಕಾಗಿ ಸಿದ್ದರಾಮಯ್ಯ ಅವರ ವರ್ಚಸ್ಸು ಕುಗ್ಗಿಸಲು ಮುಂದಾಗಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿ ವಾಪಸ್ ಪಡೆಯುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ರಾಥೋಡ್ ಎಚ್ಚರಿಕೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಿ ಅಧಿಕಾರಕ್ಕೇರುವ ಬಿಜೆಪಿ ಕನಸು ಈಡೇರದು. ಒಂದು ವೇಳೆ ರಾಜ್ಯಪಾಲರನ್ನು ರಾಷ್ಟ್ರಪತಿಯವರು ಹಿಂದಕ್ಕೆ ಕರೆಯಿಸಿಕೊಳ್ಳದಿದ್ದರೆ ಬಾಂಗ್ಲಾ ದೇಶದ ಪ್ರಧಾನ ಮಂತ್ರಿಗೆ ಬಂದ ಪರಿಸ್ಥಿತಿ ರಾಜ್ಯಪಾಲರ ಕಚೇರಿಗೂ ಬರಲಿದೆ. ಅವರ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಂಥ ಕುತಂತ್ರಿ ದೇಶದಲ್ಲಿ ಬೇರೆ ಯಾರೂ ಇಲ್ಲ ಎಂದು ಆರೋಪಿಸಿದರು.
ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಸಿದ್ದಾರ್ಥ್ ಗೋಯಲ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಬಿ.ಪಿ. ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.