ಕನ್ನಡಪ್ರಭ ವಾರ್ತೆ ಮಳವಳ್ಳಿ
ಒಳ ಮೀಸಲಾತಿ ಜಾರಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅವರ ಆಯೋಗ ಸಲ್ಲಿಸಿರುವ ವರದಿಯನ್ನು ವಿರೋಧಿಸಿ ಪಟ್ಟಣದಲ್ಲಿ ಬುಧವಾರ ಹೊಲಯ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಆವರಣದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಎಚ್.ಎನ್. ನಾಗಮೋಹನ್ ದಾಸ್ ಆಯೋಗದ ವಿರುದ್ಧ ಘೋಷಣೆ ಕೂಗಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ತಾಲೂಕು ಕಚೇರಿ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು.
ನಿವೃತ್ತ ಪ್ರಾಧ್ಯಾಪಕ ಬೆಳಕವಾಡಿ ರಂಗಸ್ವಾಮಿ ಮಾತನಾಡಿ, ಆಯೋಗ ನಡೆಸಿರುವ ಸಮೀಕ್ಷೆ ಸಮರ್ಪಕವಾಗಿಲ್ಲ. ಬಲಗೈ ಸಮುದಾಯಕ್ಕೆ ಸೇರಿದ ಪರೈಯ್ಯ, ಪರವನ್ ಸೇರಿದಂತೆ ಅನೇಕ ವರ್ಗವನ್ನು ಎಡಗೈ ಪಂಗಡಕ್ಕೆ ಸೇರಿಸಿ ಬಲಗೈ ಸಮುದಾಯದ ಛಲವಾದಿ ಮತ್ತಿತರ ಹೆಸರಿನ ಜನರನ್ನು ಪ್ರತ್ಯೇಕಿಸಿ ಬಲಗೈ ಸಮುದಾಯದ ಸಂಖ್ಯೆ ಕಡಿಮೆ ತೋರಿಸಿ ಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯವಾಗುವಂತೆ ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ನಿರ್ನಾಮ ಮಾಡಲು ಷಡ್ಯಂತ್ರ ನಡೆಸಲಾಗಿದೆ ಎಂದು ಕಿಡಿಕಾರಿದರು.ಮುಖಂಡರಾದ ಎಂ.ಎನ್.ಜಯರಾಜು, ಸುರೇಶ್ ಮಾತನಾಡಿ, ಆಯೋಗ ಸಲ್ಲಿಸಿರುವ ವರದಿ ಅವೈಜ್ಞಾನಿಕ ಹಾಗೂ ತಪ್ಪು ಮಾಹಿತಿಯಿಂದ ಕೂಡಿದೆ. ಹಲವು ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸದೆ ಹೊಲಯ ಜಾತಿಗೆ ಸೇರಿದ ಹಲವು ಸಮುದಾಯಗಳನ್ನು ಬೇರೆ ವರ್ಗಕ್ಕೆ ಸೇರಿಸಿ 1.47 ಕೋಟಿ ಜನಸಂಖ್ಯೆ ಹೊಂದಿರುವ ನಮ್ಮ ಸಮುದಾಯವನ್ನು 1.16 ಕೋಟಿ ಎಂದು ತಪ್ಪಾಗಿ ಅಂಕಿ ಅಂಶ ನೀಡಿ ಬಲಗೈ ಸಮುದಾಯಕ್ಕೆ ಮೋಸ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಸರ್ಕಾರ ವರದಿಯನ್ನು ಅಂಗೀಕರಿಸಬಾರದು ಎಂದು ಆಗ್ರಹಿಸಿದರು.
ಆಯೋಗ ಪ್ರತ್ಯೇಕವಾಗಿ ಗುರುತಿಸಿರುವ ಹೊಲಯ, ಛಲವಾದಿ, ಆದಿ ಕರ್ನಾಟಕ, ಪರೈಯನ್, ಆದಿ ದ್ರಾವಿಡ ಈ ಎಲ್ಲ ಗಣತಿಯನ್ನು ಹೊಲಯ ಸಮುದಾಯಕ್ಕೆ ಒಗ್ಗೂಡಿಸಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.ನಂತರ ತಹಸೀಲ್ದಾರ್ ಎಸ್.ವಿ.ಲೋಕೇಶ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಪುರಸಭಾ ಸದಸ್ಯರಾದ ಆರ್.ಎನ್.ಸಿದ್ದರಾಜು, ಸಂತೋಷ್, ಮುಖಂಡರಾದ ಮಹಾದೇವಸ್ವಾಮಿ, ಸಿ.ಎಂ.ವೇದಮೂರ್ತಿ, ಎಚ್.ಎಂ.ಮಹೇಶ್, ಕಿರಣ್ ಶಂಕರ್, ಬಿಎಸ್ಪಿ ನಂಜುಂಡಸ್ವಾಮಿ, ಯತೀಶ್, ಶಾಂತರಾಜು, ನಾರಾಯಣ, ಕುಮಾರಸ್ವಾಮಿ, ಕಾಂತರಾಜು, ಕಲ್ಕುಣಿ ನಂಜುಂಡಸ್ವಾಮಿ, ಡಿ.ಎಸ್.ನಾಗರಾಜು, ವೇದಾವತಿ, ಮಹದೇವಯ್ಯ, ಜಯರಾಜು, ಸುರೇಶ್, ಕೆಂಪಯ್ಯ ಪಾಲ್ಗೊಂಡಿದ್ದರು.