ಎಚ್‌.ಡಿ.ರೇವಣ್ಣ ಕುಟುಂಬದ ವಿರುದ್ಧ ಬೃಹತ್‌ ಪ್ರತಿಭಟನೆ<bha>;</bha> ಭ್ರೂಣದ ಗೊಂಬೆ ಹಿಡಿದು ಆಕ್ರೋಶ

KannadaprabhaNewsNetwork |  
Published : Jan 10, 2024, 01:45 AM IST
9ಎಚ್ಎಸ್ಎನ್15ಎ : ಪ್ರತಿಭಟನೆ ಸಂದರ್ಭದಲ್ಲಿ ಮಹಿಳೆಯೊಬ್ಬರು ಬ್ರೂಣದ ಪ್ರತಿಕೃತಿ ಹಿಡಿದು ಭವಾನಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. | Kannada Prabha

ಸಾರಾಂಶ

ಹಾಸನದಲ್ಲಿ ಎಚ್‌.ಡಿ.ರೇವಣ್ಣ ಕುಟುಂಬದ ದೌರ್ಜನ್ಯ ಮಿತಿಮೀರಿದ್ದು, ತಪ್ಪು ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ನೇತೃತ್ವದಲ್ಲಿ ಮಂಗಳವಾರ ಮಹಿಳೆಯರು ಕೈಯಲ್ಲಿ ಭ್ರೂಣದ ಪ್ರತಿಕೃತಿ ಹಿಡಿದು ಬೃಹತ್ ಪ್ರತಿಭಟನೆ ನಡೆಸಿದರು.

ಭವಾನಿ ರೇವಣ್ಣ ವಿರುದ್ಧ ಕಾರು ಚಾಲಕನ ಪತ್ನಿಗೆ ಹಲ್ಲೆ, ಗರ್ಭಪಾತವಾದ ಆರೋಪ । ಬಿಜೆಪಿಯ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ಧರಣಿಕನ್ನಡಪ್ರಭ ವಾರ್ತೆ ಹಾಸನ

ಜಮೀನು ಬರೆದುಕೊಡುವಂತೆ ಕಿರುಕುಳ ನೀಡಿರುವ ಭವಾನಿ ರೇವಣ್ಣ ಗರ್ಭಿಣಿಗೆ ಹಲ್ಲೆ ನಡೆಸಿದ್ದರಿಂದ ಆಕೆಗೆ ಗರ್ಭಪಾತವಾಗಿದ್ದು, ಭ್ರೂಣಹತ್ಯೆಯ ಆರೋಪ ಹೊತ್ತಿದ್ದಾರೆ. ಜಿಲ್ಲೆಯಲ್ಲಿ ಎಚ್‌.ಡಿ.ರೇವಣ್ಣ ಕುಟುಂಬದ ದೌರ್ಜನ್ಯ ಮಿತಿಮೀರಿದ್ದು, ತಪ್ಪು ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ಮಹಿಳೆಯರು ಕೈಯಲಿ ಭ್ರೂಣದ ಪ್ರತಿಕೃತಿ ಹಿಡಿದು ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ವೇಳೆ ಭವಾನಿ ರೇವಣ್ಣ ವಿರುದ್ದ ಮಹಿಳೆಯರ ಆಕ್ರೋಶ ವ್ಯಕ್ತಪಡಿಸಿದರು. ಭ್ರೂಣದ ಪ್ರತಿಕೃತಿ ಹಿಡಿದು ಅಳಲು ತೋಡಿಕೊಂಡ ಮಹಿಳೆಯರು ಮಗುವನ್ನು ಹತ್ಯೆ ಮಾಡಿದ್ದೀರಿ ಎಂದು ಘೋಷಣೆ ಕೂಗಿದರು. ೨೦೨೩ ಮಾರ್ಚ್ ತಿಂಗಳಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಅವರ ಆಸ್ತಿಯನ್ನು ತಮ್ಮ ಆಪ್ತರಿಗೆ ಬರೆದುಕೊಡಿ ಎಂದು ಒತ್ತಾಯಿಸಿ ಪ್ರಜ್ವಲ್‌ ಹಾಗೂ ಭವಾನಿ ರೇವಣ್ಣ ಪೊಲೀಸರ ಬೆಂಬಲದೊಂದಿಗೆ ಕಾರ್ತಿಕ್‌ ಹಾಗೂ ಅವರ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಗರ್ಭಿಣಿಯಾಗಿದ್ದ ಆಕೆಗೆ ಗರ್ಭಪಾತ ಆಗಿದೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ಹಲ್ಲೆಯಿಂದ ಕಾರ್ತಿಕ್ ಪತ್ನಿ ಶಿಲ್ಪಾಗೆ ಗರ್ಭಪಾತ ಅಗಿರುವ ಬಗ್ಗೆ ದೂರು ನೀಡಿದರೂ ಕ್ರಮಕೈಗೊಂಡಿಲ್ಲ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಲಾಯಿತು.

ಎನ್.ಆರ್. ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಸಮಯ ರಸ್ತೆ ತಡೆ ನಡೆಸಿದ ನಂತರ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲಾಯಿತು. ಪ್ರತಿಭಟನಾಕಾರರನ್ನ ಉದ್ದೇಶಿಸಿ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ, ‘ಹದಿಮೂರು ಎಕರೆ ಜಮೀನನ್ನು ಹಿಂಸೆ ಕೊಟ್ಟು ಬರೆಸಿಕೊಂಡಿದ್ದಾರೆ. ಇವರು ರೈತರಾ...? ಇವರು ಬೇನಾಮಿ ರೈತರು. ರೈತರಿಗೆ ವಂಚನೆ ಮಾಡೋಕೆ ಇರೋರು ಇವರು. ರೈತರ ಅನ್ನಕ್ಕೆ ಕನ್ನಾ ಹಾಕುವ ಜನ ಇವರು. ಕಾರ್ತಿಕ್ ಘಟನೆ ಬಗ್ಗೆ ಎಲ್ಲವನ್ನೂ ಹೇಳಿದ್ದಾರೆ. ಕಾರ್ತಿಕ್ ಗೆ ಆಸ್ತಿ ಬರೆದುಕೊಡು ಅಂದರೂ ನಾನು ಬರೆದುಕೊಟ್ಟಿಲ್ಲ. ಮಧ್ಯರಾತ್ರಿ ಕಾರ್ತಿಕ್ ಪತ್ನಿಯನ್ನು ಕರೆಸಿ ಹಲ್ಲೆ ಮಾಡಿದರು. ಅಲ್ಲಿನ ಸಬ್ ಇನ್‌ಸ್ಪೆಕ್ಟರ್ ಕಾರ್ತಿಕ್ ಪತ್ನಿಯನ್ನ ಕರೆತಂದಿದ್ದಾರೆ’ ಎಂದು ಹೇಳಿದರು.

ಕಿರಣ್ ರೆಡ್ಡಿ ಎನ್ನುವವರ ಹೆಸರಿಗೆ ಜಮೀನು ಬರೆಸಿದ್ದಾರೆ. ಇವರು ರಾಜ್ಯಸಭೆ ಸದಸ್ಯರಾಗಿ ಮಾಡಿದ್ದ ಪ್ರಭಾಕರ್ ರೆಡ್ಡಿ ಮಗ. ಅವರು ಇಲ್ಲಿಯವರೆಗೆ ಕೋರ್ಟ್‌ಗೆ ಹಾಜರಾಗಿಲ್ಲ. ಬೈಕಿಗೆ ಗುದ್ದಿದ ಒಂದೂವರೆ ಕೋಟಿ ರು. ಮೌಲ್ಯದ ಕಾರು ಕೂಡ ಇದೇ ಕಿರಣ್ ರೆಡ್ಡಿ ಹೆಸರಿನಲ್ಲಿ ಇದೆ. ನ್ಯಾಯ ಕೊಡಬೇಕಾದ ಪೊಲೀಸರೇ ಇದರಲ್ಲಿ ಆರೋಪಿಗಳಾಗಿದ್ದಾರೆ. ನ್ಯಾಯ ಕೊಡುವ ದೇವರೇ ಕಲ್ಲಾಗಿಬಿಟ್ಟರೆ ನ್ಯಾಯ ಎಲ್ಲಿ ಸಿಗುತ್ತದೆ ಎಂದು ಪೊಲೀಸರು ಹಾಗೂ ರೇವಣ್ಣ ಕುಟುಂಬ ವಿರುದ್ಧ ಎ.ಟಿ ರಾಮಸ್ವಾಮಿ ಹರಿಹಾಯ್ದರು.

‘ನಾನು ಅಲ್ಲೇ ಇದ್ದುಕೊಂಡು ನಿಮ್ಮನ್ನ ವಿರೋಧಿಸಿಕೊಂಡು ಬಂದಿದ್ದೆ. ಈಗ ಎಲ್ಲರಿಗೂ ಗೊತ್ತಾಗಿದೆ. ಮುತ್ಸದ್ಧಿ ದೇವೇಗೌಡ, ಚೆನ್ನಮ್ಮರ ಹೊಟ್ಟೆಯಲ್ಲಿ ಎಂತಹವರು ಹುಟ್ಟಿಬಿಟ್ಟರು. ದೇವೇಗೌಡರು ಉತ್ಸವ ಮೂರ್ತಿ ಇದ್ದ ಹಾಗೆ. ಹೊತ್ತರೆ ಹೆಗಲ ಮೇಲೆ, ಇಳಿಸಿದ್ರೆ ಕೆಳಗೆ ಇರ್ತಾರೆ. ಅಂತಹವರು ಅವರು. ಇವರು ಅವರ ಹೊಟ್ಟೆಯಲ್ಲಿ ಹುಟ್ಟಿ ಕಳಂಕ ತಂದಿದ್ದಾರೆ’ ಎಂದು ಜರಿದರು.

ರೈತರಿಗೆ ಸರ್ಕಾರದ ಸಹಾಯಧನದ ರಿಯಾಯಿತಿ ಬೆಲೆಯಲ್ಲಿ ಒದಗಿಸುತ್ತಿರುವ ಯೂರಿಯಾವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡು, ರೈತರಿಗೆ ಮೋಸ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ವಾಣಿಜ್ಯ ಉದ್ದೇಶ ವ್ಯವಹಾರಗಳಿಗೆ ರಿಯಾಯಿತಿ ದರದ ಯೂರಿಯಾ ಬಳಸಿಕೊಳ್ಳುವುದರ ಮೂಲಕ ರೈತರಿಗೆ ಸಮರ್ಪಕವಾಗಿ ಸಕಾಲದಲ್ಲಿ ಯೂರಿಯಾ ದೊರೆಯುತ್ತಿಲ್ಲ. ವಾಣಿಜ್ಯ ಉದ್ದೇಶಕ್ಕೆ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಅನ್ನಪೂರ್ಣ, ರಾಜೇಶ್, ಜಗದೀಶ್, ಹರೀಶ್ ಗೌಡ ಇತರರು ಉಪಸ್ಥಿತರಿದ್ದರು.

ಭವಾನಿ ರೇವಣ್ಣ ವಿರುದ್ಧ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ