ಕನ್ನಡಪ್ರಭ ವಾರ್ತೆ ಚಾಮರಾಜನಗರಕೇಂದ್ರ ಸರ್ಕಾರ ಜಾರಿ ತರಲು ನಿರ್ಧರಿಸಿರುವ ನೂತನ ಹಿಂಟ್ ಅಂಡ್ ರನ್ ಕಾನೂನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಲಾರಿ ಮಾಲೀಕರ ಹಾಗೂ ಲಾರಿ ಚಾಲಕರ ಸಂಘ ಹಾಗೂ ವಿವಿಧ ಸಂಘಗಳಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಲಾರಿ ನಿಲ್ದಾಣದಿಂದ ಜಿಲ್ಲಾಡಳಿತ ಭವನದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಡಳಿತ ಭವನದ ಆವರಣದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಡಳಿತದ ಮೂಲಕ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ರಸ್ತೆಯಲ್ಲಿ ಟ್ರಕ್‌ಗಳ ಸಂಖ್ಯೆ ಹೆಚ್ಚಿದ್ದರೂ, ಲಭ್ಯವಿರುವ ಚಾಲಕರ ಸಂಖ್ಯೆ ಕ್ಷೀಣಿಸುತ್ತಿದೆ. ಈ ಪರಿಸ್ಥಿತಿಯಲ್ಲಿ, ಕೇಂದ್ರ ಸರ್ಕಾರವು ಹಿಟ್ ಅಂಡ್ ರನ್ ಪ್ರಕರಣಗಳಿಗೆ ಕಠಿಣ ದಂಡವನ್ನು ತಂದಿದೆ, ಅಲ್ಲಿ ಚಾಲಕನಿಗೆ ೧೦ ವರ್ಷಗಳ ಜೈಲು ಶಿಕ್ಷೆ ಮತ್ತು ೭ ಲಕ್ಷ ರೂ.ವರೆಗೆ ದಂಡ ವಿಧಿಸಬಹುದಾಗಿದೆ. ಇದು ನಮಗೆ ಮಾರಕವಾಗಿದೆ ಎಂದು ಆರೋಪಿಸಿದರು.
ಭಾರತೀಯ ನ್ಯಾಯ ಸಂಹಿತೆಯ ಕಲಂ ೧೦೬ ರ ಉಪವಿಧಿ ೧ ಮತ್ತು ೨ ನಮ್ಮ ಉದ್ದಿಮೆಯಲ್ಲಿ ಕೆಲಸ ಮಾಡುವ ಚಾಲಕರು ವೃತ್ತಿಯಿಂದ ಹೊರಗುಳಿಯುವಂತೆ ಮಾಡಿದೆ ಅದನ್ನು ಸಂಪೂರ್ಣವಾಗಿ ಕೈಬಿಡಬೇಕು. ತಕ್ಷಣ ಕೇಂದ್ರ ಸರ್ಕಾರ ಈ ನಿಬಂಧನೆಗಳನ್ನು ಹಿಂಪಡೆಯಬೇಕು ಇಲ್ಲದಿದ್ದರೆ ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ ಎಂದರು.ಸಾರಿಗೆ ಸಚಿವ ರಾಮಲಿಂಗರೆಡ್ಡಿಯವರಲ್ಲಿ ನಮ್ಮ ಮನವಿ ಏನೆಂದರೆ, ನಮ್ಮ ರಾಜ್ಯದ ಗಡಿ ಭಾಗಗಳಲ್ಲಿರುವ ಎಲ್ಲಾ ಸಾರಿಗೆ ಇಲಾಖೆ ತಪಾಸಣೆ ಠಾಣೆಗಳನ್ನು ತೆಗೆದು ಹಾಕಬೇಕು.
ಕಪ್ಪು ಪಟ್ಟಿ ಹೆಸರಿನಲ್ಲಿ ವಾಣಿಜ್ಯ ವಾಹನಗಳಿಗೆ ಎಫ್.ಸಿ ಮತ್ತು ಪರ್ಮಿಟ್ ನವೀಕರಣ ಮಾಡಿಕೊಡಲು ನಿರಾಕರಿಸುವುದನ್ನು ನಿಲ್ಲಿಸಬೇಕು. ಡಿ.ಎಸ್.ಎ ಕೇಸುಗಳು ಎಲ್ಲೇ ಇದ್ದರೂ ಸಹ ಅದನ್ನು ವಾಹನ ಮಾಲೀಕರು ತಮ್ಮ ಮೂಲ ಕಚೇರಿಯಲ್ಲಿ ಮುಗಿಸಿಕೊಳ್ಳುವ ಅವಕಾಶ ನೀಡಬೇಕು ಎಂದರು,ಬೆಂಗಳೂರು ನಗರದಲ್ಲಿ ಸರಕು ಸಾಗಾಣಿಕೆ ವಾಹನಗಳ ನಗರ ಪ್ರವೇಶಕ್ಕೆ ದಿನದ ಕೆಲವು ಸಮಯದಲ್ಲಿ ಮಾಡಿರುವ ನಿರ್ಬಂಧವನ್ನು ಸಂಪೂರ್ಣವಾಗಿ ಕೈಬಿಡಬೇಕು. ಅಪಘಾತ ನಡೆದಾಗ ವಾಹನದ ಚಾಲಕನ ಚಾಲನಾ ಪತ್ರವನ್ನು ವಶಪಡಿಸಿಕೊಳ್ಳುವುದನ್ನು ನಿಲ್ಲಿಸಬೇಕು ಹಾಗೂ ಅಪಘಾತ ನಡೆದ ನಂತರ ವಶಪಡಿಸಿಕೊಂಡ ವಾಹನ ಮತ್ತು ಚಾಲಕನನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು ಮತ್ತು ಚಾಲಕನ ಚಾಲನಾ ಪರವಾನಿಗೆಯನ್ನು ಅಮಾನತ್ತಿನಲ್ಲಿಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಪತ್ರ ಬರೆಯುವುದನ್ನು ನಿಲ್ಲಿಸಬೇಕು ಎಂದರು,
ಹೊರ ರಾಜ್ಯಗಳ ವಾಹನಗಳು ನಮ್ಮ ರಾಜ್ಯದಲ್ಲಿ ಅಪಘಾತಕ್ಕೀಡಾದಾಗ, ವಾಹನ ಮತ್ತು ಚಾಲಕನ ಬಿಡುಗಡೆಗೆ ಸ್ಥಳೀಯ ಭದ್ರತೆ ಮತ್ತು ಜಾಮೀನು ಕೇಳುವುದನ್ನು ನಿಲ್ಲಿಸಬೇಕು. ವಾಹನಗಳು ಬ್ರೇಕ್ ಡೌನ್ ಆಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ರಸ್ತೆ ಬದಿಯಲ್ಲಿ ನಿಂತಿದ್ದರೂ ವಾಹನಗಳನ್ನು ವಶಪಡಿಸಿಕೊಂಡು ಕಲಂ ೨೮೩ ರಡಿಯಲ್ಲಿ ಕೇಸು ದಾಖಲಿಸುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.ಹೆದ್ದಾರಿಯಲ್ಲಿ ವಾಹನಗಳ ನಿಲುಗಡೆ ಮಾಡಿದಾಗ ಸರಕುಗಳ ಕಳ್ಳತನ ಮತ್ತು ವಾಹನದ ಡೀಸೆಲ್ ಮತ್ತು ಬಿಡಿ ಭಾಗಗಳು ಕಳ್ಳತನವಾದಾಗ ಮಾಲೀಕರು ಠಾಣಿಗೆ ತೆರಳಿ ದೂರು ನೀಡಿದಾಗ ಅದಕ್ಕೆ ಎಫ್‌ಐಆರ್ ದಾಖಲಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಚಾ.ನಗರ ಡ್ರೈವರ್ ಅಸೋಸಿಯೇಷನ್ ಅಧ್ಯಕ್ಷ ತೌಹಿದ್ ಬೇಗ್, ಲಾರಿ ಮಾಲಿಕರ ಸಂಘದ ಕಾರ್ಯದರ್ಶಿ, ಮುರಳಿಕೃಷ್ಣ, ಜಾಬೀರ್ ಪಾಷ, ಕಲೀಂವುಲ್ಲಾ, ಮಾದೇಶ್, ಆನಂದ್, ಶಫೀ, ಮುಕ್ತಾರ್ ಅಹಮ್ಮದ್, ಸೇರಿದಂತೆ, ಆಟೋ ಮಾಲೀಕರ ಹಾಗೂ, ಚಾಲಕರ ಸಂಘದವರು, ಖಾಸಗಿ ಬಸ್ ಮಾಲೀಕರ ಸಂಘದವರು, ಗೂಡ್ಸ್ ಆಟೋ ಸಂಘದವರು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.