ಹೊಸಪೇಟೆ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರಿಗೆ ಅಪಮಾನ ಮಾಡಿದ ವಕೀಲ ರಾಕೇಶ್ ಕಿಶೋರ್ ಎಂಬವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿಜಯನಗರ ಸಂವಿಧಾನ ಸಂರಕ್ಷಣಾ ಸಮಿತಿ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿತು.
ಮುಖಂಡ ಮರಡಿ ಜಂಬಯ್ಯ ಮಾತನಾಡಿ, ದೇಶದ ಅತ್ಯುನ್ನತ ನ್ಯಾಯಾಂಗ ಕಚೇರಿಯ ಅಧಿಕಾರ ಮತ್ತು ಘನತೆ ಕುಗ್ಗಿಸುವ ಉದ್ದೇಶದಿಂದ ಈ ಕೃತ್ಯವೆಸಗಲಾಗಿದೆ. ಇದರಿಂದಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾರ್ವಜನಿಕರ ವಿಶ್ವಾಸ ಅಲುಗಾಡುತ್ತದೆ. ಇದಲ್ಲದೆ, ಸಿಜೆಐ ಅವರ ಖ್ಯಾತಿ ಮತ್ತು ಪಾತ್ರಕ್ಕೆ ಹಾನಿ ಮಾಡುವ ಉದ್ದೇಶದಿಂದ ಸುಳ್ಳು ಮತ್ತು ದುರುದ್ದೇಶಪೂರಿತ ಹೇಳಿಕೆಗಳನ್ನು ಸಾರ್ವಜನಿಕವಾಗಿ ಮಾಡಲಾಗಿದೆ. ಸಾಂವಿಧಾನಿಕ ಸಮಗ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಅಪಾಯವನ್ನುಂಟು ಮಾಡಲಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು. ಈ ಗಂಭೀರ ವಿಷಯವನ್ನು ತಕ್ಷಣವೇ ಗಮನದಲ್ಲಿಟ್ಟುಕೊಂಡು ರಾಕೇಶ್ ಕಿಶೋರ್, ಭಾಸ್ಕರ್ ರಾವ್ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ವಕೀಲ ಅನಿಲ್ ಮಿಶ್ರಾ ಎಂಬವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಗರದ ಅಶೋಕ್ ಬುಕ್ ಸ್ಟಾಲ್ ನಿಂದ ಅಂಬೇಡ್ಕರ್ ವೃತ್ತದವರೆಗೆ ಸಂವಿಧಾನ ಸಂರಕ್ಷಣಾ ಸಮಿತಿ ಪದಾಧಿಕಾರಿಗಳು ಹಾಗೂ ನಾಗರಿಕರು ಬಿ.ಆರ್. ಗವಾಯಿ ಮೇಲೆ ಶೂ ಎಸೆತ ಖಂಡಿಸಿ ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟಿಸಿ; ಹೊಸಪೇಟೆ ತಹಸಿಲ್ದಾರರ ಮೂಲಕ ರಾಷ್ಟ್ರಪತಿಗೆ ಮನವಿ ರವಾನಿಸಿದರು.ಮುಖಂಡರಾದ ನಿಂಬಗಲ್ ರಾಮಕೃಷ್ಣ, ಗುಜ್ಜಲ್ ನಾಗರಾಜ, ಭಾಸ್ಕರ್ ರೆಡ್ಡಿ, ಕರುಣಾನಿಧಿ, ಕೊಟ್ಟಿಗಿನಹಾಳ ಮಲ್ಲಿಕಾರ್ಜುನ, ಎ.ಚಿದಾನಂದ, ಕೃಷ್ಣ, ಎನ್. ವೆಂಕಟೇಶ್, ದುರ್ಗಪ್ಪ ಪೂಜಾರ್, ಸಣ್ಣಮಾರೆಪ್ಪ, ಬಿಸಾಟಿ ತಾಯಪ್ಪ ನಾಯಕ, ಮಂಜುನಾಥ, ಕೊತ್ವಾಲ್ ಎಂಡಿ ಮೋಹ್ಸಿನ್, ಸದ್ದಾಮ್ ಹುಸೇನ್, ರಾಮಚಂದ್ರ, ಕೆ.ಎಂ. ಸಂತೋಷ್, ರಮೇಶ್, ಎಸ್.ಎಂ. ಜಾಫರ್, ಸಲೀಂ, ಓಬಳೇಶ್, ಬಿ.ಎಂ. ಹುಲುಗಪ್ಪ, ಬಿ.ಮಾರಪ್ಪ, ಜೆ.ಶಿವಕುಮಾರ್, ಎಚ್. ತಿಪ್ಪೇಸ್ವಾಮಿ, ರಾಮಕೃಷ್ಣ, ಎಚ್. ಮಹೇಶ್, ಪಿ.ರವಿಕುಮಾರ್, ಇರ್ಫಾನ್ ಕಟಗಿ ಇದ್ದರು.