ಕಾಂಗ್ರೆಸ್‌ ಸರ್ಕಾರ ವಿರುದ್ಧ 18ಕ್ಕೆ ಬೃಹತ್‌ ಪ್ರತಿಭಟನೆ

KannadaprabhaNewsNetwork | Published : Dec 16, 2023 2:01 AM

ಸಾರಾಂಶ

ಆಡಳಿತ ವೈಫಲ್ಯ, ಬೆಳೆ ಪರಿಹಾರ ನೀಡದ್ದು ಖಂಡಿಸಿ ಬಿಜೆಪಿ ಮೆರವಣಿಗೆ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

ಆಡಳಿತ ವೈಫಲ್ಯ, ಬೆಳೆ ಪರಿಹಾರ ನೀಡದ್ದು ಖಂಡಿಸಿ ಬಿಜೆಪಿ ಮೆರವಣಿಗೆ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಫಲ್ಯ ಹಾಗೂ ರೈತರಿಗೆ ಬೆಳೆ ಪರಿಹಾರ ನೀಡದಿರುವುದು ಖಂಡಿಸಿ ತಾಲೂಕು ಬಿಜೆಪಿ ಘಟಕ ನೇತೃತ್ವದಲ್ಲಿ ಡಿ.18ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.

ಬೃಹತ್ ಪ್ರತಿಭಟನೆ ಅಂಗವಾಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಹುಬ್ಬಳಿಯಲ್ಲಿ ನಡೆದ ಮೌಲ್ವಿಗಳ ಸಭೆಯಲ್ಲಿ ₹10 ಸಾವಿರ ಕೋಟಿ ಅನುದಾನ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೆ ರೈತರು ಮಳೆ ಇಲ್ಲದೆ ಬೆಳೆಗಳೆಲ್ಲ ಒಣಗಿ ಸುಮಾರು 450 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಮನೆಗಳಿಗೆ ತೆರಳಿ ಸಾಂತ್ವನ ಹೇಳಲು ಇವರಿಗೆ ಸಮಯವಿಲ್ಲ. ನಮಗೆ ಅನ್ನ ಕೊಡುವ ರೈತರಿಗಿಂತ ಮುಸ್ಲಿಮರೇ ಕಾಂಗ್ರೆಸ್‌ ಸರ್ಕಾರಕ್ಕೆ ಹೆಚ್ಚಾಗಿದೆ ಎಂದು ರೇಣುಕಾಚಾರ್ಯ ಕಿಡಿಕಾರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಪರಿಶಿಷ್ಟ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣ ತಮ್ಮ ಗ್ಯಾರಂಟಿ ಯೋಜನೆಗಳಿಗೆ ಬಳಸಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೋಸ ಎಸಗಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಸೋಮವಾರ ರಾಜ್ಯ ಸರ್ಕಾರದ ವೈಫಲ್ಯಗಳ ಖಂಡಿಸಿ ನಡೆಸುವ ಬೃಹತ್ ಪ್ರತಿಭಟನೆಯು ಸರ್ಕಾರಿ ಐ.ಬಿ.ಯಿಂದ ತಾಲೂಕು ಕಚೇರಿವರೆಗೂ ಪ್ರತಿಭಟನೆ ಮೆರವಣಿಗೆ ನಡೆಯಲಿದೆ. ತಾಲೂಕು ಕಚೇರಿ ಮುಂಭಾಗ ಪ್ರತಿಭಟನಾಕಾರರ ಉದ್ದೇಶಿಸಿ ಮಾತನಾಡಿ ನಂತರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್ ಮಾತನಾಡಿದರು. ಮುಖಂಡರಾದ ಡಿ.ಜಿ.ರಾಜಪ್ಪ,ನೆಲಹೊನ್ನೆ ಮಂಜುನಾಥ್, ದಿಡಗೂರು ಪಾಲಕ್ಷಪ್ಪ, ಕೆ.ಪಿ.ಕುಬೇರಪ್ಪ, ಎಂ.ಎಸ್.ಪಾಲಕ್ಷಪ್ಪ, ಶಿವುಹುಡೇದ್, ಸುರೇಂದ್ರನಾಯ್ಕ್, ಮಾರುತಿನಾಯ್ಕ್, ಶಿವಾನಂದ್, ಕುಳಗಟ್ಟೆ ರಂಗನಾಥ್, ಪುರಸಭಾ ಮಾಜಿ ಅಧ್ಯಕ್ಷರಾದ ಕೆ.ವಿ.ಶ್ರೀಧರ್, ಬಾಬು ಹೋಬಳದಾರ್, ರಂಗನಾಥ್ ಹಾಗೂ ಇತರರಿದ್ದರು.ಪ್ರತಿ ರೈತರಿಗೆ ₹25 ಸಾವಿರ ಪರಿಹಾರ ಕೊಡಿ

ಭೀಕರ ಬರಗಾಲದಿಂದ ಮಳೆ ಇಲ್ಲದೆ ಬೆಳೆಗಳೆಲ್ಲ ಹಾಳಾಗಿದೆ, ರೈತರು ಕಂಗಲಾಗಿದ್ದಾರೆ. ಪ್ರತಿ ರೈತರಿಗೆ ₹2 ಸಾವಿರ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ, ಆದರೆ ಈ ವರೆಗೂ ಯಾವ ರೈತನಿಗೂ ಬಿಡಿಗಾಸು ಪರಿಹಾರ ಬಿಡುಗಡೆ ಮಾಡಿಲ್ಲ. ಈಗಲಾದರೂ ಸರ್ಕಾರ ಪ್ರತಿ ರೈತರಿಗೆ ₹25 ಸಾವಿರ ಪರಿಹಾರ ನೀಡಲಿ.

ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ

ಸಚಿವ ಜಮೀರ್ ಕ್ಷುಲ್ಲಕ ಹೇಳಿಕೆಗಳ ಕೈ ಬಿಡಲಿ

ಸಚಿವ ಜಮೀರ್ ಅಹ್ಮದ್ ತೆಲಂಗಾಣದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅಧಿವೇಶನದಲ್ಲಿ ಮುಸ್ಲಿಂ ಸಭಾಧ್ಯಕ್ಷರಿಗೆ ಬಿಜೆಪಿ ಸದಸ್ಯರೂ ನಮಸ್ಕಾರ ಮಾಡಿ ಒಳ ಬರಬೇಕು. ಅದು ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯವಾಗಿದೆ. ಅದಕ್ಕಾಗಿ ಕಾಂಗ್ರೆಸ್‍ಗೆ ಮತ ನೀಡಿದರೆ ಮುಸ್ಲಿಮರ ಗೌರವ ಹೆಚ್ಚಲಿದೆ ಎಂದು ಹೇಳಿದ್ದನ್ನು ಬಿಜೆಪಿ ಖಂಡಿಸುತ್ತದೆ. ಸಂವಿಧಾನದಲ್ಲಿ ಮುಸ್ಲಿಂ ಸಭಾಧ್ಯಕ್ಷ ಎಂದು ಇಲ್ಲ, ಸಭಾಧ್ಯಕ್ಷ ಪೀಠಕ್ಕೆ ಗೌರವ ನೀಡುತ್ತಾರೆ ಹೊರತು ಯು.ಟಿ.ಖಾದರ್‌ ಎಂದು ಹೇಳಿ ಅಲ್ಲ, ಆದ್ದರಿಂದ ಜಮೀರ್ ಇಂತಹ ಕ್ಷುಲ್ಲಕ ಹೇಳಿಕೆಗಳ ನೀಡುವುದು ಕೈ ಬಿಡಬೇಕು. ಇಲ್ಲದಿದ್ದರೆ ಅವರ ವಿರುದ್ಧವೂ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೀಡಿದ ಔತಣಕೂಟಕ್ಕೆ ಬಿಜೆಪಿಯ ಇಬ್ಬರು ಶಾಸಕರು ಮಾತ್ರ ಹೋಗಿದ್ದಾರೆ ಹೊರತು ಅವರು ಕಾಂಗ್ರೆಸ್ ಪಕ್ಷದ ಸಭೆಗೆ ಹೋಗಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.--------------

Share this article