2ಎ ಮೀಸಲಾತಿ ಹೋರಾಟಗಾರರ ಬೃಹತ್‌ ಪ್ರತಿಭಟನೆ

KannadaprabhaNewsNetwork | Published : Dec 13, 2024 12:46 AM

ಸಾರಾಂಶ

ಬೆಳಗಾವಿಯಲ್ಲಿ 2ಎ ಮೀಸಲಾತಿಗಾಗಿ ಕೂಡಲ ಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಸಿದ್ದ ಪಂಚಮಸಾಲಿಗಳ ಮೇಲೆ ಲಾಠಿ ಚಾರ್ಜ್ ಮಾಡಿ, ದೌರ್ಜನ್ಯ ಎಸಗಿ, ಕ್ರಿಮಿನಲ್ ಕೇಸ್ ದಾಖಲಿಸಿ ಬಂಧಿಸಿರುವ ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಕ್ರಮವನ್ನು ಖಂಡಿಸಿ ನಗರದಲ್ಲಿ ಗುರುವಾರ ಸಮಾಜ ಬಾಂಧವರು ಬೃಹತ್ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆಬೆಳಗಾವಿಯಲ್ಲಿ 2ಎ ಮೀಸಲಾತಿಗಾಗಿ ಕೂಡಲ ಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಸಿದ್ದ ಪಂಚಮಸಾಲಿಗಳ ಮೇಲೆ ಲಾಠಿ ಚಾರ್ಜ್ ಮಾಡಿ, ದೌರ್ಜನ್ಯ ಎಸಗಿ, ಕ್ರಿಮಿನಲ್ ಕೇಸ್ ದಾಖಲಿಸಿ ಬಂಧಿಸಿರುವ ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಕ್ರಮವನ್ನು ಖಂಡಿಸಿ ನಗರದಲ್ಲಿ ಗುರುವಾರ ಸಮಾಜ ಬಾಂಧವರು ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಶ್ರೀ ಜಯದೇವ ವೃತ್ತದಲ್ಲಿ ಸಮಾಜದ ಹಿರಿಯ ಮುಖಂಡ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ ನೇತೃತ್ವದಲ್ಲಿ ಅಶೋಕ ರಸ್ತೆ, ಮಹಾತ್ಮ ಗಾಂಧಿ ವೃತ್ತ, ಹಳೆ ಪಿಬಿ ರಸ್ತೆ ಮಾರ್ಗವಾಗಿ ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಉಪ ಉಪ ವಿಭಾಗಾಧಿಕಾರಿಗಳ ಕಚೇರಿ ಮುಖಾಂತರ ರಾಜ್ಯಪಾಲ, ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ಎಚ್.ಎಸ್. ಶಿವಶಂಕರ, ಬೆಳಗಾವಿಯಲ್ಲಿ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ 2 ಎ ಮೀಸಲಾತಿಗಾಗಿ ಶಾಂತಿಯುತ ಹೋರಾಟ ನಡೆಸಿದ್ದ ಪಂಚಮಸಾಲಿಗಳ ಮೇಲೆ ಲಾಠಿ ಚಾರ್ಜ್‌ ಮಾಡಿದ್ದು ಖಂಡನೀಯ. ಶ್ರೀಗಳ ನೇತೃತ್ವದಲ್ಲಿ ಅಲ್ಲಿ ಸಮಾವೇಶ ಮಾಡಿ, ಸಿಎಂಗೆ ಒತ್ತಡ ಹೇರಲು ನಿರ್ಧರಿಸಲಾಗಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ಹೋರಾಟಗಾರರಿಗೆ ಸ್ಪಂದಿಸಲಿಲ್ಲ. ಸ್ಥಳಕ್ಕೂ ಭೇಟಿ ನೀಡದೇ, ನೆಪ ಮಾತ್ರಕ್ಕೆ ನಾಲ್ಕೈದು ಜನರಿಗೆ ಭೇಟಿಯಾಗುವಂತೆ ಹೇಳುವ ಮೂಲಕ ದುರ್ವರ್ತನೆ ತೋರಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ತನೆಯಿಂದ ಹೋರಾಟಗಾರರ ಸಹನೆಯ ಕಟ್ಟೆಯೊಡೆದಿದೆ. ಆದರೂ, ಶಾಂತ ರೀತಿಯಲ್ಲೇ ಪ್ರತಿಭಟನೆ ಮಾಡುತ್ತಿದ್ದರು. ಸರ್ಕಾರ ಹೋರಾಟಗಾರರ ಮನವೊಲಿಸುವ ಬದಲಿಗೆ, ಪೊಲೀಸರ ಮೂಲಕ ಲಾಠಿ ಪ್ರಹಾರ ಮಾಡಿಸಿದ್ದು ಹಿಟ್ಲರ್ ಸಂಸ್ಕೃತಿಯನ್ನು ತೋರಿಸುತ್ತಿದೆ. ಘಟನೆಯಲ್ಲಿ ಅಮಾಯಕರ ಕೈಗಳು ಮುರಿದಿದ್ದು, ಮತ್ತೆ ಕೆಲವರ ತಡೆಗಳಿಗೆ ತೀವ್ರ ಪೆಟ್ಟಾಗಿ, ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದರು.2ಎ ಮೀಸಲಾತಿ ಬೇಡಿಕೆ ಕುರಿತಂತೆ ಸಿದ್ದರಾಮಯ್ಯ ಉತ್ತರ ನೀಡಬೇಕು. ಕೃಷಿ ಕುಟುಂಬಗಳ ಹಿನ್ನೆಲೆಯ ಪಂಚಮಸಾಲಿಗಳು ರೈತರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ ಮಾಡುವ ಮೂಲಕ ಸಿದ್ದರಾಮಯ್ಯ ಪಂಚಮಸಾಲಿಗಳ ಭಾವನೆಗಳನ್ನೇ ಕದಡಿದ್ದಾರೆ. 2ಎ ಮೀಸಲಾತಿಗಾಗಿ 7 ಹಂತದ ಹೋರಾಟ ನಡೆಸಿದ್ದೇವೆ. ಲಿಂಗಾಯತ ಒಳ ಪಂಗಡಗಳಿಗೆ ಕೇಂದ್ರದ ಓಬಿಸಿ ಮೀಸಲಾತಿಗಾಗಿ 7 ಹಂತದ ಹೋರಾಟ ಮಾಡಿದ್ದೇವೆ. ಇದೀಗ 8ನೇ ಹಂತದ ಹೋರಾಟದಲ್ಲಿ ಬೆಳಗಾವಿ ಸುವರ್ಣಸೌಧ ಚಲೋ ಮೂಲಕ ಪಂಚಮಸಾಲಿ ಸಂಘರ್ಷ ಸಮಾವೇಶ ಆಯೋಜಿಸಿದ್ದೆವು ಎಂದು ತಿಳಿಸಿದರು.

ಸಮಾಜದ ಮುಖಂಡರಾದ ಬಿ.ಜಿ. ಅಜಯಕುಮಾರ, ಎನ್. ರಾಜಶೇಖರ ನಾಗಪ್ಪ, ಮಹಾಂತೇಶ ವಿ. ಒಣರೊಟ್ಟಿ, ಮೋತಿ ಶಂಕರಪ್ಪ, ವಕೀಲ ಯೋಗೇಶ, ಕೆ.ಎಂ. ವೀರೇಶ, ಬಾದಾಮಿ ಜಯಣ್, ಅಶೋಕ ಗೋಪನಾಳ, ಕೆರೆಯಾಗಳಹಳ್ಳಿ ಪಾಟೀಲ, ಸೋಗಿ ಮುರುಗೇಶ, ಪ್ರಶಾಂತ ಅಣಜಿ, ಜಯಪ್ರಕಾಶ ಗೌಡ ಸುತ್ತೂರು, ಚನ್ನಬಸವನಗೌಡ, ಮಹೇಶ ಬನ್ನಿಕೋಡು, ಎಸ್ಎನ್. ಮಲ್ಲಿಕಾರ್ಜುನ, ಕಿರಣ ಸೇರಿದಂತೆ ಸಮಾಜ ಬಾಂಧವರು ಪ್ರತಿಭಟನೆಯಲ್ಲಿದ್ದರು.

Share this article