ರಾಜ್ಯಪಾಲರ ವಿರುದ್ಧ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ

KannadaprabhaNewsNetwork | Published : Aug 20, 2024 12:46 AM

ಸಾರಾಂಶ

ಮುಡಾ ಸೈಟ್‌ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಖಂಡಿಸಿ ಸೋಮವಾರ ಧಾರವಾಡದಲ್ಲಿ ಬೃಹತ್‌ ಪ್ರತಿಭಟನೆಯನ್ನು ಕಾಂಗ್ರೆಸ್‌ ನಡೆಸಿತು. ಈ ವೇಳೆ ಕೇಂದ್ರ ಸರ್ಕಾರ ಹಾಗೂ ರಾಜ್ಯಪಾಲರ ವಿರುದ್ಧ ಧಿಕ್ಕಾರ ಕೂಗಲಾಯಿತು.

ಧಾರವಾಡ:

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿರುವ ಕ್ರಮ ಖಂಡಿಸಿ ನಗರದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿ ಕಡಪಾ ಮೈದಾನದಿಂದ ಆರಂಭಗೊಂಡು ಜಿಲ್ಲಾಧಿಕಾರಿ ಕಚೇರಿ ತಲುಪಿತು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರ ಹಾಗೂ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ರಾಜಭವನದ ದುರುಪಯೋಗ ಪಡಿಸಿಕೊಂಡು ವಾಮ ಮಾರ್ಗ ಅನುಸರಿಸುತ್ತಿದೆ ಎಂದು ಆರೋಪಿಸಿದರು.ರಾಷ್ಟ್ರಪತಿಗಳು ಈ ಕುರಿತು ಗಂಭೀರವಾಗಿ ಪರಿಗಣಿಸಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿರುವ ರಾಜ್ಯಪಾಲರನ್ನು ಅಮಾನತು ಮಾಡಬೇಕು. ಈ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದು ರಾಜ್ಯಪಾಲರ ಕಪ್ಪು ಭಾವಚಿತ್ರ ಹಿಡಿದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಸಚಿವ ಸಂತೋಷ ಲಾಡ್‌, ರಾಜ್ಯಪಾಲರು ರಾಜಕೀಯ ಪ್ರೇರಿತರಾಗಿ ಪ್ರಾಸಿಕ್ಯೂಶನ್ ಕೊಟ್ಟಿದ್ದಾರೆ. ಸಂವಿಧಾನದ ಭಾಗವಾಗಿರುವ ರಾಜ್ಯಪಾಲರು ಪಾಲಿಟಿಕಲ್ ಟೂಲ್ ಆಗಿ ಕೆಲಸ ಮಾಡುವುದು ನ್ಯಾಯವೇ? ಎಂದು ಪ್ರಶ್ನಿಸಿದರು.ಯಾವ ಆಧಾರದ ಮೇಲೆ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು. ಯಾವುದೇ ರೀತಿಯ ಕಾನೂನು ಅವಕಾಶ ಇರಲಿಲ್ಲ. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ 17 ರಾಜ್ಯದಲ್ಲಿ ಉಗ್ರರ ದಾಳಿ ಆಗಿದೆ. ಇವನ್ನೆಲ್ಲ ಬಿಜೆಪಿ‌ ಮುಚ್ಚಿಟ್ಟಿದೆ. ಅವರಿಗೆ ಇರೋದು ಕಾಂಗ್ರೆಸ್ ಉರುಳಿಸೋದು ಮಾತ್ರ. ಸಿದ್ದರಾಮಯ್ಯ 40 ವರ್ಷದ ಹಾದಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ ಎಂದರು.ಪ್ರಧಾನಿ ವಿರುದ್ಧ ರಾಷ್ಟ್ರಪತಿ ಪ್ರಾಸಿಕ್ಯೂಷನ್ ಕೊಟ್ಟರೆ ಅವರು ರಾಜೀನಾಮೆ ಕೊಡುತ್ತಾರೆಯೇ ಎಂದು ಪ್ರಶ್ನಿಸಿದ ಲಾಡ್‌, ಎಲ್ಲದಕ್ಜೂ ಒಂದು ನಿಯಮ ಇದೆ. ಪ್ರಾಸಿಕ್ಯೂಷನ್ ಕೊಡಲು ಕೇಂದ್ರ ಮಾರ್ಗಸೂಚಿ ಇದೆ. ಮುಡಾ ಲ್ಯಾಂಡ್ ವ್ಯಾಜ್ಯ ಇದೆಯಾ? ಅದರಲ್ಲಿ ಏನೂ ಇಲ್ಲ. ಬಿಜೆಪಿ ಅವಧಿಯಲ್ಲಿಯೇ ಕೊಟ್ಟ ಸೈಟ್‌ ಅದು. ಸಿದ್ದರಾಮಯ್ಯ ಭಾಗಿಯಾಗಿರುವ ಬಗ್ಗೆ ಒಂದಾದರೂ ದಾಖಲೆ ಇದೆಯಾ? ರಾಜೀನಾಮೆ ಕೇಳಲು ಬುನಾದಿ ಇಲ್ಲ ಎಂದು ಲಾಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡರು.

ಪ್ರತಿಭಟನೆಯಲ್ಲಿ ಶಾಸಕ ಎನ್. ಎಚ್. ಕೋನರೆಡ್ಡಿ, ಶಾಸಕ ಪ್ರಸಾದ ಅಬ್ಬಯ್ಯ, ಕಾಂಗ್ರೆಸ್ ಮುಖಂಡ ಈಶ್ವರ ಶಿವಳ್ಳಿ, ಪರಮೇಶ್ವರ ಕಾಳೆ, ವೆಂಕಟೇಶ್ ಸಗ್ಬಾಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Share this article