ಕನ್ನಡಪ್ರಭ ವಾರ್ತೆ ರಾಮನಗರ
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣವಾಗುತ್ತಿರುವ ಬಿಡದಿ ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆಗೆ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ದರ ನಿಗದಿ ಪಡಿಸಲು ಜಿಲ್ಲಾಧಿಕಾರಿಗಳು ಕರೆದಿದ್ದ ಸಭೆಗೆ ಕೆಲವಷ್ಟೇ ಮಂದಿಗೆ ಅವಕಾಶ ನೀಡಿದ್ದನ್ನು ವಿರೋಧಿಸಿ ಗುರುವಾರ ಪ್ರತಿಭಟನೆ ನಡೆಸಿದ ರೈತರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ರೈತರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಜಮಾಯಿಸಿದ್ದರು. ಪೊಲೀಸರು ಕಾವಲನ್ನು ಬೇಧಿಸಿ ಜಿಲ್ಲಾಧಿಕಾರಿಗಳ ಕಚೇರಿಯೊಳಗೆ ನುಗ್ಗಲು ರೈತರು ವಿಫಲ ಪ್ರಯತ್ನ ನಡೆಸಿದರು.ಎಲ್ಲಾ ಭೂಮಾಲೀಕರೊಂದಿಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಬೇಕು ಎಂಬ ಪ್ರತಿಭಟನಾಕಾರರ ಒತ್ತಾಯಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸರು ಮಣಿಯದಿದ್ದಾಗ, ತಾಳ್ಮೆಯ ಕಟ್ಟಡೆಯೊಡೆದು ಜಿಲ್ಲಾಧಿಕಾರಿಗಳ ಕಚೇರಿ ಗೇಟ್ ಬಳಿ ಅಳವಡಿಸಿದ್ದ ಬ್ಯಾರಿಕೇಡ್‌ಗಳು ಮತ್ತು ಗೇಟ್ ಅನ್ನು ತಳ್ಳಿ ಆವರಣದೊಳಗೆ ನುಗ್ಗಲು ಪ್ರಯತ್ನಿಸಿದರು. ಆಗ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕೆಎಸ್ಅರ್‌ಟಿಸಿ ಬಸ್‌ನಲ್ಲಿ ಕರೆದೊಯ್ಯಲು ಪ್ರಯತ್ನಿಸಿದಾಗ ರೈತರು ಬಸ್ಸಿನ ಚಕ್ರಗಳ ಗಾಳಿಯನ್ನು ತೆಗೆಯಲಾರಂಭಿಸಿದರು. ಇನ್ನೊಂದೆಡೆ ಹಿಂಬಾಗಿಲಿನಿಂದ ಪ್ರತಿಭಟನಾಕಾರರನ್ನು ಪೊಲೀಸರು ಬಸ್ಸಿನೊಳಗೆ ತುಂಬಿದರೆ, ರೈತರು ಡ್ರೈವರ್ ಸೀಟ್ ಬಳಿಯ ಬಾಗಿಲಿನಿಂದ ಹೊರ ಬಂದು ಮತ್ತೆ ಪ್ರತಿಭಟನೆಯಲ್ಲಿ ಪಾಲ್ಗೊಂಡರು.ಜಿಲ್ಲಾಧಿಕಾರಿಗಳ ವಿರುದ್ಧ ಆಕ್ರೋಶ:ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಹಿಡಿ ಶಾಪ ಹಾಕಿದರು. ಜನ ಸೇವೆಗೆ ಇರುವ ಜಿಲ್ಲಾಧಿಕಾರಿ ಕಚೇರಿ ಒಳಗೆ ತನಗೆ ಬೇಕಾದವರನ್ನು ಮಾತ್ರ ಬರಲು ಅವಕಾಶ ಕೊಟ್ಟು, ನಿಜವಾದ ರೈತರಾದ ತಮ್ಮನ್ನು ರಸ್ತೆಯಲ್ಲಿ ಬಿಟ್ಟಿದ್ದಾರೆ ಎಂದು ಹರಿಹಾಯ್ದರು.
ಬಿಡದಿ ಸಮಗ್ರ ಉಪನಗರ ಯೋಜನೆಗಾಗಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಬಿಡದಿ ಹೋಬಳಿ ಬೈರಮಂಗಲ, ಬನ್ನಿಗಿರಿ, ಹೊಸೂರು, ಕಂಚುಗಾರನಹಳ್ಳಿ, ಕೆಂಪಯ್ಯನಪಾಳ್ಯ, ಕೆ.ಜಿ.ಗೊಲ್ಲರಪಾಳ್ಯ, ಮಂಡಲಹಳ್ಳಿ, ಅರಳಾಳುಸಂದ್ರ, ಹಾರೋಹಳ್ಳಿ ತಾಲೂಕಿನ ವಡೇರಹಳ್ಳಿ ಗ್ರಾಮಗಳಲ್ಲಿ ಭೂಸ್ವಾಧೀನ ಕುರಿತು ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ಈ ಸಂಬಂಧ ಭೂಸ್ವಾಧೀನಗೊಳ್ಳುತ್ತಿರುವ ಸದರಿ ಗ್ರಾಮಗಳ ಭೂಮಾಲೀಕರೊಂದಿಗೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ಷ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ 2013ರನ್ವಯ ಭೂಪರಿಹಾರದ ಬಗ್ಗೆ ಚರ್ಚಿಸಲು ಗುರುವಾರ ಸಭೆ ಕರೆದಿದ್ದರು. ಸಭೆಯ ಸೂಚನೆಯನ್ನು ಹೊರಡಿಸಿದ್ದರು. ಆದರೆ ಜಿಲ್ಲಾಧಿಕಾರಿಗಳು ಕೇವಲ ತಮಗೆ ಬೇಕಾದ 30 ಮಂದಿಯನ್ನು ಮಾತ್ರ ಸಭೆಗೆ ಕರೆದುಕೊಂಡಿದ್ದಾರೆ ಎಂದು ಪ್ರತಿಭಟನಾಕಾರರ ಆಕ್ರೋಶ ವ್ಯಕ್ತಪಡಿಸಿದರು.ಬೆಂಗಳೂರು - ಮೈಸೂರು ಹೆದ್ದಾರಿ ರಸ್ತೆಯಲ್ಲಿ ಧರಣಿ ಕುಳಿತ ರೈತರು, ಜಿಲ್ಲಾಧಿಕಾರಿಗಳು ಕಚೇರಿಯಿಂದ ಹೊರಬಂದು ಬಹಿರಂಗವಾಗಿ ಎಲ್ಲಾ ಭೂಮಾಲೀಕರೊಂದಿಗೆ ಸಭೆ ನಡೆಸಬೇಕು. ಅಲ್ಲಿಯವರೆಗೆ ತಾವೂ ರಸ್ತೆ ಬಿಟ್ಟು ಕದಲುವುದಿಲ್ಲ ಎಂದು ಹಠ ಹಿಡಿದರು. ಇದೇ ವೇಳೆ ಪ್ರತಿಭಟನಾಕಾರರು ಡಿಸಿಎಂ ಡಿ.ಕೆ.ಶಿವಕುಮಾರ್, ಜಿಬಿಎ ಅಧ್ಯಕ್ಷ ಗಾಣಕಲ್ ನಟರಾಜ್ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.ಈ ಮಧ್ಯೆ ಪೊಲೀಸರು ಮತ್ತು ರೈತರ ನಡುವೆ ವಾಗ್ವಾದ ಆರಂಭವಾದಾಗ ತಾಳ್ಮೆಯ ಕಟ್ಟೆಯೊಡೆದು, ರೈತರು ಡೀಸಿ ಕಚೇರಿ ಆವರಣದೊಳಗೆ ನುಗ್ಗಲು ಯತ್ನಿಸಿದರು. ಪ್ರತಿಭಟನೆಯಲ್ಲಿ 100ಕ್ಕೂ ಹೆಚ್ಚು ಮಂದಿ ಮಹಿಳಾ ರೈತರು ಭಾಗವಹಿಸಿದ್ದರು.
....ಬಾಕ್ಸ್ ...ಪಹಣಿ ಇರುವ ಭೂ ಮಾಲೀಕರ ಸಭೆ ಕರೆಯಿಸಿರಾಮನಗರ:ಬಿಡದಿ ಟೌನ್‌ಶಿಪ್ ಯೋಜನೆಗೆ ಸ್ವಾಧೀನಪಡಿಸಿಕೊಳ್ಳುವ ಭೂಮಿ ದರ ನಿಗಧಿ ಸಭೆಗೆ ಯಾರೋ ಒಂದಿಷ್ಟು ಜನರ ಬಳಿ ಜಿಲ್ಲಾಧಿಕಾರಿಗಳು ಮಾತನಾಡುವುದು ಸರಿಯಲ್ಲ. ಪಹಣಿ ಇರುವ ಎಲ್ಲಾ ಭೂಮಾಲೀಕರನ್ನು ಸಭೆಗೆ ಕರೆಯಬೇಕು ಎಂದು ಮಾಜಿ ಶಾಸಕ ಎ.ಮಂಜುನಾಥ್ ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಅವರು, ಪೊಲೀಸರು ಸಹ ಈ ವಿಚಾರದಲ್ಲಿ ಸಹಕರಿಸಬೇಕು. ಭೂಸ್ವಾಧೀನಕ್ಕೆ ಬಹುತೇಕ ಮಾಲೀಕರು ಒಪ್ಪುತ್ತಿಲ್ಲ. ತಮ್ಮ ಪೂರ್ವಜರ ಆಸ್ತಿಯನ್ನು ಉಳಿಸಿಕೊಳ್ಳಬೇಕು ಅಂತ ಹೋರಾಟ ಮಾಡುತ್ತಿದ್ದಾರೆ. ಬೆರಳೆಣಿಕೆಯಷ್ಟು ಮಂದಿಯ ಬಳಿ ಮಾತನಾಡ್ತೀನಿ ಅಂದರೆ ಆಗುವುದಿಲ್ಲ . ಜಿಲ್ಲಾಧಿಕಾರಿಗಳು ಇಲ್ಲಿಗೇ ಬಂದು ಸಭೆ ಮಾಡಲಿ ಎಂದು ಒತ್ತಾಯಿಸಿದರು.ಭೂಸ್ವಾಧೀನ ವಿಚಾರದಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ಪಾರದರ್ಶಕವಾಗಿ ಸಭೆ ನಡೆಸಬೇಕು, ಇದು ಆಗದಿದ್ದರೆ ಹೋರಾಟ ಮುಂದುವರೆಸುತ್ತೇವೆ. ರೈತರನ್ನು ಜಿಲ್ಲಾಡಳಿತ ಮತ್ತು ಪೊಲೀಸರು ಸರಿಯಾಗಿ ನಡೆಸಿಕೊಳ್ಳದಿದ್ದರೆ ತಾವು ಒಪ್ಪವುದಿಲ್ಲ ಎಂದು ಎಚ್ಚರಿಸಿದರು.----------...ಬಾಕ್ಸ್ ...ಬಿಡದಿ ಟೌನ್ ಶಿಪ್ ಯೋಜನೆ ವ್ಯಾಪ್ತಿಗೆ ಒಳಪಡುವ ಎಲ್ಲಾ ರೈತರು ಸಭೆಗೆ ಬನ್ನಿ ಎಂದು ನೋಟೀಸ್ ನೀಡಿದ್ದ ಹಿನ್ನೆಲೆ ಇಂದು 500ಕ್ಕೂ ಹೆಚ್ಚು ರೈತರು ಡಿಸಿ ಕಚೇರಿ ಬಳಿ ಆಗಮಿಸಿದ್ದರು. ಆದರೆ ಸಭೆಗೆ ಕೇವಲ 30 ಮಂದಿ ರೈತರಿಗೆ ಮಾತ್ರ ಅವಕಾಶ ಕೊಡುವುದಾಗಿ ಜಿಲ್ಲಾಡಳಿತ ತಿಳಿಸಿದ ಹಿನ್ನೆಲೆ ಜಿಲ್ಲಾಧಿಕಾರಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಬೆಂ-ಮೈ ಹಳೇ ಹೆದ್ದಾರಿ ತಡೆದು ಕೆಲಕಾಲ ಪ್ರತಿಭಟನೆ ನಡೆಸಿ ಬಳಿಕ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತಳ್ಳಾಟ-ನೂಕಾಟ ನಡೆದು ಕೆಲ ಪ್ರತಿಭಟನಾಕಾರರನ್ನು ಬಂಧಿಸಲು ಪೊಲೀಸರು ಮುಂದಾದರು. ರೊಚ್ಚಿಗೆದ್ದ ರೈತರು ಬಂಧಿಸಲು ತಂದಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ನಾಲ್ಕು ಚಕ್ರದ ಗಾಳಿ ತೆಗೆದಿದ್ದು ದೊಡ್ಡ ಹೈಡ್ರಾಮಕ್ಕೆ ಸಾಕ್ಷಿಯಾಯಿತು.------6ಕೆಆರ್ ಎಂಎನ್ 3,4,5.ಜೆಪಿಜಿರೈತರ ಪ್ರತಿಭಟನೆ ಚಿತ್ರಗಳು----