ಕೋಲಿ ಸಮಾಜದ ಬೃಹತ್‌ ಪ್ರತಿಭಟನೆ

KannadaprabhaNewsNetwork |  
Published : Sep 02, 2025, 01:00 AM IST
ಯಾದಗಿರಿ ಜಿಲ್ಲಾ ಕೋಲಿ - ಕಬ್ಬಲಿಗ ಸಮಾಜವು ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ವೇಳೆ, ಇಲ್ಲಿನ ನೇತಾಜಿ ಸುಭಾಶ್ಚಂದ್ರ ಭೋಸ್‌ ವೃತ್ತದಲ್ಲಿ ಕಂಡುಬಂದ ಜನಸಾಗರದ ನೋಟ. (ಚಿತ್ರ : ಮಂಜುನಾಥ್‌ ಬಿರಾದರ್‌, ಸಗರ) | Kannada Prabha

ಸಾರಾಂಶ

ಕೋಲಿ, ಕಬ್ಬಲಿಗ ಸಮಾಜ ಮತ್ತು ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಹಾಗೂ ಕಲಬುರಗಿ ಹೈಕೋರ್ಟ್ ಪೀಠದ ಆದೇಶದಂತೆಯೇ ನಾಯ್ಕ್, ವಾಲ್ಮೀಕಿ, ಬೇಡ, ಬೇಡರ ಜಾತಿಗಳನ್ನು ಅನುಸೂಚಿತ ಬುಡಕಟ್ಟು ಪಟ್ಟಿಯಿಂದ ಕೈಬಿಡಬೇಕು ಎಂಬುದು ಸೇರಿದಂತೆ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಸಮಾಜದ ವಿವಿಧ ಮಠಾಧೀಶರು ಹಾಗೂ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರು ಅವರ ನೇತೃತ್ವದಲ್ಲಿ ಜಿಲ್ಲಾ ಕೋಲಿ - ಕಬ್ಬಲಿಗ ಸಮಾಜವು ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು.

ಯಾದಗಿರಿ: ಕೋಲಿ, ಕಬ್ಬಲಿಗ ಸಮಾಜ ಮತ್ತು ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಹಾಗೂ ಕಲಬುರಗಿ ಹೈಕೋರ್ಟ್ ಪೀಠದ ಆದೇಶದಂತೆಯೇ ನಾಯ್ಕ್, ವಾಲ್ಮೀಕಿ, ಬೇಡ, ಬೇಡರ ಜಾತಿಗಳನ್ನು ಅನುಸೂಚಿತ ಬುಡಕಟ್ಟು ಪಟ್ಟಿಯಿಂದ ಕೈಬಿಡಬೇಕು ಎಂಬುದು ಸೇರಿದಂತೆ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಸಮಾಜದ ವಿವಿಧ ಮಠಾಧೀಶರು ಹಾಗೂ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರು ಅವರ ನೇತೃತ್ವದಲ್ಲಿ ಜಿಲ್ಲಾ ಕೋಲಿ - ಕಬ್ಬಲಿಗ ಸಮಾಜವು ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು.

ಸೋಮವಾರ ಬೆಳಿಗ್ಗೆಯಿಂದಲೇ ಪ್ರತಿಭಟನೆಯ ಕಾವೇರತೊಡಗಿತ್ತು. ಸಮುದಾಯದ ಮಠಾಧೀಶರು, ರಾಜಕೀಯ ಮುಖಂಡರ ಜೊತೆ ಸಾವಿರಾರು ಜನರು ರಸ್ತೆಯುದ್ದಕ್ಕೂ ಸಮಾವೇಶಗೊಂಡಾಗ, ಸಮುದಾಯದ ಭಾರಿ ಶಕ್ತಿ ಪ್ರದರ್ಶನದ ಸಾಕ್ಷಿಯಂತಿತ್ತು.

ಯಾದಗಿರಿ, ಕಲಬುರಗಿ, ಬೀದರ್ ಮತ್ತು ರಾಯಚೂರು ಜಿಲ್ಲೆಗಳಿಂದ ನೂರಾರು ವಾಹನಗಳಲ್ಲಿ ಆಗಮಿಸಿದ್ದ ಕೋಲಿ ಸಮಾಜದ ಸಾವಿರಾರು ಜನರು ತಹಸೀಲ್ದಾರ್‌ ಕಚೇರಿ ಬಳಿ ಜಮಾವಣೆಗೊಂಡರು. ಸಮಾಜದ ಧರ್ಮಗುರುಗಳ, ಹಿರಿಯ ನೇತೃತ್ವದಲ್ಲಿ ದೊಡ್ಡಮಟ್ಟದ ಪಾದಯಾತ್ರೆ ಮೂಲಕ ರಸ್ತೆಯುದ್ದಕ್ಕೂ ಅಂಬಿಗರ ಚೌಡಯ್ಯ ಹೆಸರಿನ ಜೈಘೋಷಗಳನ್ನು ಮೊಳಗಿಸುತ್ತ. ಇಲ್ಲಿನ ನೇತಾಜಿ ಸುಭಾಶ್ಚಂದ್ರ ಭೋಸ್‌ ವೃತ್ತದಲ್ಲಿ ಸೇರಿ, ರಸ್ತೆ ತಡೆಗಟ್ಟಿದ್ದರು. ಕಿ.ಮೀ.ಗಟ್ಟಲೇ ಕೆಂಬಾವುಟ ಹಿಡಿದ ಜನಸಮೂಹ ಹಾಗೂ ಮುಗಿಲು ಮುಟ್ಟುವಂತೆ ಪ್ರತಿಧ್ವನಿಸುತ್ತಿದ್ದ ನಿರಂತರ ಘೋಷಣೆಗಳು‌, ಸಮುದಾಯವನ್ನು ನಿರ್ಲಕ್ಷ್ಯಿಸಿದರೆ ಸರ್ಕಾರಕ್ಕೆ ಬಿಸಿ ಮುಟ್ಟಿಸಿದಂತಿತ್ತು.

ಮಧ್ಯಾಹ್ನ 12ರಿಂದ ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಪ್ರತಿಭಟನಾ ಸಭೆ ನಡೆಸಿದ ಸಮಾಜದ ಗುರುಗಳು, ಮುಖಂಡರು, ಕಳೆದ ನಲವತ್ತು ವರ್ಷಗಳಿಂದ ಹೋರಾಟ ನಡೆಸಿದರೂ ಬೇಡಿಕೆಗಳು ಈಡೇರುತ್ತಿಲ್ಲ ಎಂದು ಸರ್ಕಾರಗಳ ಬಗ್ಗೆ ಬೇಸರ, ಆಕ್ರೋಶ ಹೊರಹಾಕಿದರು.

ಅಲ್ಲದೆ, ಇತ್ತೀಚೆಗೆ ನಡೆದ ವಾಲ್ಮೀಕಿ ಸಮಾಜದ ಹೋರಾಟದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಬಗ್ಗೆ ಹಾಗೂ ಸಮಾಜದ ಬಗ್ಗೆ ಅವಹೇಳನಕಾರಿ ಮಾತುಗಳು ಆಡಿದವರ ವಿರುದ್ಧ ಭಾರಿ ಆಕ್ರೋಶ ಪ್ರತಿಭಟನೆಯ ವೇಳೆ ವ್ಯಕ್ತವಾಯಿತು. ಇನ್ನು, ಈ ಪ್ರತಿಭಟನೆಯಿಂದಾಗಿ ರಸ್ತೆ ಸಂಚಾರ ಸ್ಥಗಿತಗೊಂಡು ಅನೇಕರು ಪರದಾಡಬೇಕಾಯಿತು. ಎಲ್ಲೆಡೆ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಎಸ್ಪಿ ಪ್ರಥ್ವಿಕ್‌ ಶಂಕರ್ ಅವರು ವೇದಿಕೆಗೆ ಆಗಮಿಸಿ, ಧರ್ಮಗುರುಗಳ, ಮುಖಂಡರಿಂದ ಮನವಿ ಸ್ವೀಕರಿಸಿದರು.

ತೊನಸನಹಳ್ಳಿ ಶ್ರೀಗಳು, ನಿಜಶರಣ ಅಂಬಿಗರ ಚೌಡಯ್ಯ ಪೀಠದ ಗುರುಗಳು ಹಾಗೂ ಮಾಜಿ ಸಚಿವ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ಬಾಬುರಾವ ಚಿಂಚನಸೂರ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್, ಹಿರಿಯ ಮುಖಂಡ ಮೌಲಾಲಿ ಅನಪುರ, ನಗರಸಭೆ ಅಧ್ಯಕ್ಷರಾದ ಲಲಿತಾ ಅನಪುರ, ಸಾಯಿಬಣ್ಣಾ ಬೋರಬಂಡಾ, ಅವಣ್ಣ ಮ್ಯಾಕೇರಿ, ಬಸವರಾಜ ಬೂದಿಹಾಳ, ಶೋಭಾ ಬಾಣಿ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಗೋಸಿ, ನಾಗರತ್ನ ಅನಪುರ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ ಇತರರು ಮಾತನಾಡಿದರು.

ಕೋಲಿ ಸಮಾಜದ ಬೇಡಿಕೆಗಳು

- ನಿಜಶರಣ ಅಂಬಿಗರ ಚೌಡಯ್ಯ ಅವರನ್ನು ಮತ್ತು ಕೋಲಿ ಸಮಾಜವನ್ನು ಅವಮಾನಿಸಿದವರನ್ನು ಗಡಿಪಾರು ಮಾಡಬೇಕು.

- ಕೋಲಿ, ಕಬ್ಬಲಿಗ ಸಮಾಜ ಮತ್ತು ಪರ್ಯಾಯ ಪದಗಳನ್ನು ಎಸ್ಟಿ ಜಾತಿಗೆ ಸೇರಿಸಬೇಕು.

- ಕಲಬುರಗಿ ಹೈಕೋರ್ಟ್ ಪೀಠದ ಆದೇಶದಂತೆ ನಾಯ್ಕ್, ವಾಲ್ಮೀಕಿ, ಬೇಡ, ಬೇಡರ ಜಾತಿಗಳನ್ನು ಅನುಸೂಚಿತ ಬುಡಕಟ್ಟು ಪಟ್ಟಿಯಿಂದ ಈ ಕೂಡಲೇ ಕೈಬೀಡಬೇಕು.

- ಜಾತಿಗಳ ನಡುವೆ ಜಗಳ ಹಚ್ಚಿ ಸಮಾಜದಲ್ಲಿ ಶಾಂತಿ ಕದಡುತ್ತಿರುವ ಶ್ರವಣಕುಮಾರ ಔರಾದಿ ಹಾಗೂ ಮರೆಪ್ಪ ನಾಯಕ್ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು,

- ಕೋಲಿ ಸಮಾಜದ ಸರ್ಕಾರಿ ನೌಕರರ ಮೇಲೆ ನಿರಂತರ ದಬ್ಬಾಳಿಕೆ ನಡೆಸುತ್ತಿರುವವರ ಮೇಲೆ ಕ್ರಮ ಆಗಬೇಕೆಂಬ ಪ್ರಮುಖ ಬೇಡಿಕೆಗಳಿಗೆ ಕೋಲಿ ಸಮಾಜದ ಮುಖಂಡರು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು