ಲಿಂಗಾಯತ ಮಹಾಸಭೆಯಿಂದ ಬೃಹತ್‌ ಪ್ರತಿಭಟನೆ

KannadaprabhaNewsNetwork |  
Published : Nov 21, 2026, 01:45 AM IST
ಫೋಟೋ | Kannada Prabha

ಸಾರಾಂಶ

ಕಾಂಗ್ರೆಸ್‍ನ ಹಿರಿಯ ನಾಯಕ, ರಾಜ್ಯ ನೀತಿ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಮತ್ತು ಶಾಸಕ ಬಿ.ಆರ್. ಪಾಟೀಲ ಅವರ ವಿರುದ್ಧ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಅವರು ಶ್ವಾನಕ್ಕೆ ಹೋಲಿಕೆ ಮಾಡಿ ಅವಹೇಳನಕಾರಿ ಪದಗಳನ್ನು ಬಳಸಿ ಏಕವಚನದಲ್ಲಿ ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಆಳಂದ ತಾಲೂಕಿನಲ್ಲಿ ರಾಜಕೀಯ ವಾತಾವರಣ ಕಾವೇರಿದೆ.

ಕನ್ನಡಪ್ರಭ ವಾರ್ತೆ ಆಳಂದಕಾಂಗ್ರೆಸ್‍ನ ಹಿರಿಯ ನಾಯಕ, ರಾಜ್ಯ ನೀತಿ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಮತ್ತು ಶಾಸಕ ಬಿ.ಆರ್. ಪಾಟೀಲ ಅವರ ವಿರುದ್ಧ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಅವರು ಶ್ವಾನಕ್ಕೆ ಹೋಲಿಕೆ ಮಾಡಿ ಅವಹೇಳನಕಾರಿ ಪದಗಳನ್ನು ಬಳಸಿ ಏಕವಚನದಲ್ಲಿ ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಆಳಂದ ತಾಲೂಕಿನಲ್ಲಿ ರಾಜಕೀಯ ವಾತಾವರಣ ಕಾವೇರಿದೆ.ಈ ಹೇಳಿಕೆ ಖಂಡಿಸಿ ಶಾಸಕ ಬಿ.ಆರ್. ಪಾಟೀಲ ಅವರ ಬೆಂಬಲಿಗರು ಪತ್ರಿಕಾಗೋಷ್ಠಿ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಬುಧವಾರ ವೀರಶೈವ ಲಿಂಗಾಯತ ಮಹಾಸಭೆಯ ವತಿಯಿಂದ ಆಳಂದ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ಬಸ್ ನಿಲ್ದಾಣ ವೃತ್ತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ವಿವಿಧ ಮುಖಂಡರು ಹರ್ಷಾನಂದ ಗುತ್ತೇದಾರ ಹಾಗೂ ಅವರ ತಂದೆ, ಮಾಜಿ ಶಾಸಕ ಸುಭಾಷ್ ಗುತ್ತೇದಾರ ಅವರ ಹೇಳಿಕೆಗಳು ಮತ್ತು ರಾಜಕೀಯ ಕಾರ್ಯವೈಖರಿಯನ್ನು ಖಂಡಿಸಿ ಮಾತನಾಡಿದರು. ಸಭೆಯ ಕೊನೆಯಲ್ಲಿ ಹರ್ಷಾನಂದ ಗುತ್ತೇದಾರ ಅವರ ಪ್ರತಿಕೃತಿಯನ್ನು ದಹಿಸಲಾಯಿತು.ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ಗುರುಶರಣ ಪಾಟೀಲ ಕೊರಳ್ಳಿ, ಜಿಲ್ಲಾ ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಬಸವರಾಜ ಪವಾಡಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಶರಣಬಸಪ್ಪ ಭೂಸನೂರ, ಸಹಕಾರಿ ಸಂಸ್ಥೆಯ ಪಂಡಿತ್ ಶೇರಿಕಾರ್, ಡಾ. ರಾಜಶೇಖರ ಪಾಟೀಲ ಹೆಬಳಿ, ಹನುಮಂತ ಖ್ಯಾಬ್ದಿ ನೆಲ್ಲೂರ, ಮಲ್ಲಿಕಾರ್ಜುನ ಉಪ್ಪಿನ ಮಾಡ್ಯಾಳ ಹಾಗೂ ಬಸವರಾಜ ಕೊಟ್ಟರಕಿ ಮಾತನಾಡಿದರು. ಶಾಸಕ ಬಿ.ಆರ್. ಪಾಟೀಲ ಅವರು ಕೇವಲ ಆಳಂದ ತಾಲೂಕಿಗೆ ಸೀಮಿತವಾದ ನಾಯಕರಲ್ಲ. ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ರೈತರ ಹೋರಾಟ, ನೀರಾವರಿ ಸಮಸ್ಯೆ ಮತ್ತು ವ್ಯಸನಮುಕ್ತ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ರೈತರು ಹಾಗೂ ನೀರಿನ ಸಮಸ್ಯೆಗಳ ಕುರಿತು ನಿರಂತರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆದಿದ್ದಾರೆ. ಇಂತಹ ಸಮಾಜವಾದಿ ಚಿಂತನೆಯ ಹಿರಿಯ ನಾಯಕರ ಬಗ್ಗೆ ಮಾತನಾಡುವಾಗ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಭಾಷೆಯ ಮಿತಿ ಮತ್ತು ಸಾರ್ವಜನಿಕ ಜೀವನದ ಘನತೆ ಕಾಪಾಡಿಕೊಳ್ಳಬೇಕು ಎಂದು ಮುಖಂಡರು ಅಭಿಪ್ರಾಯಪಟ್ಟರು.ಸಂತೋಷ್ ವಾಲೆ, ಲಿಂಗರಾಜ ಪಾಟೀಲ, ಶಿವಪುತ್ರಪ್ಪ ಪಾಟೀಲ.ಅಪ್ಪಾರಾವ್ ಜವಳಿ, ಶರಣು ಕುಲಕರ್ಣಿ, ಸಿದ್ಧರಾಮ ದೇಸಾಯಿ, ಸಂತೋಷ ಬೀದಿ ಕೊರಳ್ಳಿ. ಸಿದ್ಧಾರಾಮ ಪ್ಯಾಟೆ . ಗಣೇಶ ಪಾಟೀಲ, ತಥಾಗತ ಮೂಲಭಾರತಿ, ದಿಲೀಪ ಕ್ಷೀರಸಾಗರ. ಪ್ರಕಾಶ ಮೂಲಭಾರತಿ ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಹೆದ್ದಾರಿ ದುರಸ್ತಿಗಾಗಿ ರಸ್ತೆತಡೆ
ಅನುದಾನಿತ ಶಾಲಾ ನೌಕರರಿಗೂ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹ