ಕುಂದಗೋಳ: ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಖಂಡಿಸಿ ಸೋಮವಾರ ಪಟ್ಟಣದಲ್ಲಿ ಶ್ರೀ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ನೇತೃತ್ವದಲ್ಲಿ ಬೃಹತ್ ಜನಾಗ್ರಹ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜನಜಾಗೃತಿ ಗದಗ ಜಿಲ್ಲಾಧ್ಯಕ್ಷ ಹಾಗೂ ತಾಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷ ಶಿವಾನಂದ ಬೆಂತೂರ, ನಮ್ಮ ಹೋರಾಟ ಸರ್ಕಾರದ ವಿರುದ್ಧವಲ್ಲ, ಧರ್ಮಕ್ಕೆ ಮಸಿ ಬಳಿಯುತ್ತಿರುವ ದುಷ್ಟರ ವಿರುದ್ಧ. ಸರ್ಕಾರ ಇಬ್ಬರನ್ನು ಬಂಧಿಸಿರುವುದು ಕೇವಲ ಕಣ್ಣೊರೆಸುವ ತಂತ್ರ. ಇದರ ಹಿಂದಿರುವ ಪ್ರತಿಯೊಬ್ಬರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಬಳಿಕ ಕಲ್ಯಾಣಪುರದ ಬಸವಣ್ಣಜ್ಜನವರು, ಸಂಶಿ ವಿರಕ್ತಮಠದ ಚನ್ನಬಸವೇಶ್ವರ ದೇವರು ಮಾತನಾಡಿದರು. ಪ್ರತಿಭಟನೆಯ ಆರಂಭದಲ್ಲಿ, ಹುಬ್ಬಳ್ಳಿ- ಲಕ್ಷ್ಮೇಶ್ವರ ರಸ್ತೆಯ ಗಾಳಿ ಮಾರಿಯಮ್ಮ ದೇವಸ್ಥಾನದ ಬಳಿ ಸಮಾವೇಶಗೊಂಡ ಸಾವಿರಾರು ಭಕ್ತರು, ಡಾ. ವೀರೇಂದ್ರ ಹೆಗ್ಗಡೆಯವರಿಗೆ ಶಕ್ತಿ ನೀಡುವಂತೆ ಪ್ರಾರ್ಥಿಸಿ ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆದರು. ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.ವಿವಿಧ ಸಂಘ-ಸಂಸ್ಥೆಗಳು, ಹೋರಾಟಗಾರರು ಮತ್ತು ರೈತ ಸಂಘಟನೆಗಳ ಮುಖಂಡರೂ ಪ್ರತ್ಯೇಕವಾಗಿ ಮನವಿ ಸಲ್ಲಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.