ನೇಹಾ ಹತ್ಯೆ ಖಂಡಿಸಿ ಬೃಹತ್‌ ಪ್ರತಿಭಟನೆ

KannadaprabhaNewsNetwork | Published : Apr 20, 2024 1:04 AM

ಸಾರಾಂಶ

ನೇಹಾ ಹಿರೇಮಠ ಹತ್ಯೆ ಖಂಡಿಸಿ ಎಬಿವಿಪಿ ಕಾಲೇಜು ಬಂದ್‌ಗೆ ಕರೆ ನೀಡಿತ್ತು. ಅದರಂತೆ ನಗರದ ಎಲ್ಲ ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಬೀದಿಗಿಳಿದಿದ್ದರು.

ಹುಬ್ಬಳ್ಳಿ:

ನಗರದ ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಎಬಿವಿಪಿ, ದಲಿತ ವಿಮೋಚನಾ ಸಮಿತಿ, ಹಿಂದೂ ಜಾಗರಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ವಿದ್ಯಾರ್ಥಿ ಸಮೂಹ ಬೃಹತ್‌ ಪ್ರತಿಭಟನೆ ನಡೆಸಿತು. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂಬ ಕೂಗು ಮುಗಿಲುಮುಟ್ಟಿತ್ತು.

ನೇಹಾ ಹಿರೇಮಠ ಹತ್ಯೆ ಖಂಡಿಸಿ ಎಬಿವಿಪಿ ಕಾಲೇಜು ಬಂದ್‌ಗೆ ಕರೆ ನೀಡಿತ್ತು. ಅದರಂತೆ ನಗರದ ಎಲ್ಲ ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಬೀದಿಗಿಳಿದಿದ್ದರು. ಬಿವಿಬಿ ಕಾಲೇಜು ಎದುರಿಗೆ ಜಮೆಯಾಗಿ ಬೃಹತ್‌ ಪ್ರತಿಭಟನೆ ನಡೆಸಿದ ಸಹಸ್ರಾರು ವಿದ್ಯಾರ್ಥಿಗಳು, ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.

ಜಸ್ಟಿಸ್‌ ಫಾರ್‌ ನೇಹಾ, ಫಯಾಜ್‌ಗೆ ಗಲ್ಲು ಶಿಕ್ಷೆ ವಿಧಿಸಿ ಎಂಬ ಇತ್ಯಾದಿ ಭಿತ್ತಿಪತ್ರ ಪ್ರದರ್ಶಿಸಿ ನ್ಯಾಯಕ್ಕಾಗಿ ಆಗ್ರಹಿಸಿ, ಜೈಶ್ರೀರಾಮ, ಭಾರತ ಮಾತಾಕೀ ಜೈ ಘೋಷಣೆ ಕೂಗಿದರು. ಹುಬ್ಬಳ್ಳಿ-ಧಾರವಾಡ ಮುಖ್ಯ ರಸ್ತೆಯಲ್ಲಿ ಧರಣಿ ಕುಳಿತು, ಬರೋಬ್ಬರಿ ಎರಡುವರೆ ಗಂಟೆಗೂ ಅಧಿಕ ಕಾಲ ರಸ್ತೆ ತಡೆ ನಡೆಸಿದರು. ವಾಹನಗಳ ಸಂಚಾರ ಸ್ಥಗಿತಗೊಳಿಸಿದರು.‌ ಇದರಿಂದ ಎರಡು ಬದಿಗಳಲ್ಲಿ ಸಾಲುಗಟ್ಟಿ ವಾಹನಗಳೆಲ್ಲ ನಿಂತವು. ಕಾಲೇಜ್ ಬಂದ್ ಕರೆ ಹಿನ್ನೆಲೆಯಲ್ಲಿ ನಗರದ ಬಹುತೇಕ ಕಾಲೇಜುಗಳು ಬಂದ್ ಆಗಿದ್ದವು. ರಸ್ತೆ ಮಧ್ಯೆ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲ ಕಾಲ ಗೊಂದಲದ ವಾತಾವರಣವೂ ಸೃಷ್ಟಿಯಾಗಿತ್ತು.

ಮಾತಿನ ಚಕಮಕಿ:

ಈ ವೇಳೆ ಪ್ರತಿಭಟನೆಯಿಂದ ಹಿಂದೆ ಸರಿಯಿರಿ ಎಂದು ಪೊಲೀಸ್‌ ಅಧಿಕಾರಿಗಳು ಸಮಾಧಾನ ಪಡಿಸಲು ಯತ್ನಿಸಿದರು. ಆದರೆ ಪೊಲೀಸ್‌ ಕಮಿಷನರ್‌ ಇಲ್ಲಿಗೆ ಬರಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಧರಣಿ ಮುಂದುವರಿಸಿದರು. ಈ ವೇಳೆ ಕೆಲಕಾಲ ಪ್ರತಿಭಟನಾಕಾರರು ಪೊಲೀಸರ ಮಧ್ಯೆ ಮಾತಿನಚಕಮಕಿ ಕೂಡ ನಡೆಯಿತು.

ಕಳೆದ ಒಂದು ತಾಸಿನಿಂದ ಧರಣಿ ನಡೆಸುತ್ತಿದ್ದೇವೆ. ಕಮಿಷನರ್ ಇನ್ನೂ ಬಂದಿಲ್ಲ. ಇಲ್ಲಿಗೆ ಬಂದು ನಮಗೆ ಉತ್ತರ ಕೊಡಲಿ. ನಮಗೆ ರಕ್ಷಣೆ ಕೊಡುವವರು ಯಾರು ಎಂದು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದರು. ಕಮಿಷನರ್ ಕೂಡಾ ಒಬ್ಬ ಮಹಿಳೆ. ಹೆಣ್ಣು ಮಗುವಿನ ಭೀಕರ ಹತ್ಯೆಗೆ ಉತ್ತರಿಸಲು ಬರಲು ಆಗುವುದಿಲ್ಲವೇ? ಎಂದು ಎಬಿವಿಪಿ ವಿದ್ಯಾರ್ಥಿ ಸಂಘಟನೆ ಮುಖಂಡರು ಆಕ್ರೋಶ ಹೊರಹಾಕಿದರು.

ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸ್‌ ಕಮಿಷನರ್‌ ರೇಣುಕಾ ಸುಕುಮಾರಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ಕಮಿಷನರ್, ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ. ಕಾನೂನು ಮೂಲಕ ಸೂಕ್ತ ಕ್ರಮಕೈಗೊಳ್ಳಲಾಗುವುದು. ಎಲ್ಲರೂ ಸಮಾಧಾನದಿಂದ ಇರಬೇಕು ಎಂದು ವಿನಂತಿಸಿದರು. ಆ ಬಳಿಕವಷ್ಟೇ ಪ್ರತಿಭಟನಾಕಾರರು ಶಾಂತರಾಗಿ ಪ್ರತಿಭಟನೆಯಿಂದ ಹಿಂಪಡೆದರು.

ಸ್ಥಳದಲ್ಲಿ ಡಿಸಿಪಿ ರಾಜೀವ್ ಎಂ. ಹಾಗೂ ಪೊಲೀಸ್ ಹಿರಿಯ ಅಧಿಕಾರಿಗಳು ಹಾಗೂ ಭದ್ರತಾ ಪಡೆ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆಗೊಂಡಿದ್ದರು.

ಪ್ರತಿಭಟನಾ ಮೆರವಣಿಗೆ:

ಈ ನಡುವೆ ಹಿಂದೂ ಜಾಗರಣ ವೇದಿಕೆ ಸಂಘಟನೆ ಸದಸ್ಯರು ''''''''ಲವ್ ಜಿಹಾದ್ ನಡೆಸಿರುವ ಫಯಾಜ್''''''''ನನ್ನು ಗಲ್ಲಿಗೇರಿಸಬೇಕು'''' ಎಂದು ಒತ್ತಾಯಿಸಿದರು. ಕರ್ನಾಟಕ ದಲಿತ ವಿಮೋಚನಾ ಸಮಿತಿ ಸದಸ್ಯರು ಚೆನ್ನಮ್ಮ ವೃತ್ತದಿಂದ ಬಿವಿಬಿ ಕಾಲೇಜ್ ಮುಂಭಾಗದ ವರೆಗೆ, ತಮಟೆ ಬಾರಿಸುತ್ತ ಪ್ರತಿಭಟನಾ ಮೆರವಣಿಗೆ ನಡೆಸಿದರು‌. ಹೀಗೆ ಸರಿಸುಮಾರ ಎರಡುವರೆ ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಯಿತು.

Share this article