ಕೊಪ್ಪಳ: ಭವ್ಯ ಭಾರತ ಭವಿಷ್ಯಕ್ಕೆ ಕಾಂಗ್ರೆಸ್ ಬೆಂಬಲಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ್ ಹಿಟ್ನಾಳ ಅವರನ್ನು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ನಾಯಕ ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಆರ್ಥಿಕವಾಗಿ ಸದೃಢವಾಗಬೇಕೆಂಬ ಉದ್ದೇಶದಿಂದ ಯುಪಿಎ ಅನೇಕ ಕಲ್ಯಾಣ ಕಾರ್ಯಕ್ರಮ ಜಾರಿಗೊಳಿಸಿ ಇಡೀ ದೇಶದ ಬಡತನ ನಿರ್ಮೂಲನೆಗೆ ಶ್ರಮಿಸಿದೆ. ದೇಶದ ಅಭಿವೃದ್ಧಿ ಕೇವಲ ಒಬ್ಬ ವ್ಯಕ್ತಿಯಿಂದ ಮಾತ್ರ ಸಾಧ್ಯವಿಲ್ಲ. ಎಲ್ಲರೂ ಕೈಜೋಡಿಸಿದಾಗ ಮಾತ್ರ ಯೋಜನೆ ಸಾಕಾರಗೊಳ್ಳಲಿದೆ. ಜನಪರವಾಗಿರುವ ಕಾಂಗ್ರೆಸ್‌ಗೆ ಈ ಬಾರಿ ರಾಜ್ಯದಲ್ಲಿ ಹೆಚ್ಚಿನ ಸ್ಥಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, ದೇಶದ ಜನತೆಗೆ ಸುಳ್ಳಿನ ಕಂತೆಗಳ ಮೂಲಕ ದಾರಿತಪ್ಪಿಸುವ ಪ್ರಧಾನಿ ಮೋದಿ ಅವರ ಆಟ ಇನ್ಮುಂದೆ ನಡೆಯಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ದೇಶದ ಜನತೆಯ ಹೃದಯ ಗೆದ್ದಿವೆ. ಹೀಗಾಗಿ ಬಿಜೆಪಿ ನಾಯಕರು ಸೋಲಿನ ಹತಾಶೆಯಿಂದ ಗ್ಯಾರಂಟಿ ಯೋಜನೆ ಲೋಕಸಭಾ ಚುನಾವಣೆ ಆನಂತರ ನಿಲ್ಲಿಸುತ್ತಾರೆ ಎಂಬ ವದಂತಿ ಸೃಷ್ಟಿಸುತ್ತಿದ್ದಾರೆ. ಮತದಾರರು ಸುಳ್ಳು ಹೇಳಿಕೆಗೆ ಕಿವಿಗೊಡಬೇಡಿ ಎಂದರು.ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಗವಿ ಹೂಗಾರ, ನವೀನ್ ಅಬ್ಬಿಗೇರಿ, ಅಕ್ಬರ್ ಸಾಬ್, ಅಜಗರ ಅಲಿ, ಅಲ್ತಾಫ್, ಪ್ರಶಾಂತ, ಸುರೇಶ, ಗುರುಮೂರ್ತಿ ಹಾಗೂ ತಾಲೂಕಿನ ಅಬ್ಬಿಗೇರಿ, ನೀರಲಗಿ, ಕವಲೂರು, ನಗರದ ದೇವರಾಜ್ ಅರಸ್ ಕಾಲನಿ, ಫಿರ್ದೋಸ್ ನಗರ, ಭಾಗ್ಯನಗರದ ಬೇಂದ್ರೆ ಕಾಲನಿಯ ಅನೇಕ ಯುವಕರು ಕಾಂಗ್ರೆಸ್ ಸೇರಿದರು.