ಜಯ ಮೃತ್ಯುಂಜಯ ಶ್ರೀ ಉಚ್ಛಾಟನೆ ಖಂಡಿಸಿ ಬೃಹತ್ ಪ್ರತಿಭಟನೆ

KannadaprabhaNewsNetwork |  
Published : Sep 25, 2025, 01:00 AM IST
24ಕೆಆರ್ ಟಿ 01 ಜಯ ಮೃತ್ಯುಂಜಯ ಶ್ರೀಗಳ ಉಚ್ಛಾಟನೆ ಖಂಡಿಸಿ ಬೃಹತ್ ಪ್ರತಿಭಟನೆ | Kannada Prabha

ಸಾರಾಂಶ

ಶ್ರೀಗಳ ತೇಜೋವಧೆ ನಿಲ್ಲಿಸಬೇಕು. ಅಷ್ಟೇ ಅಲ್ಲ ಅವರನ್ನು ಮರಳಿ ಪೀಠಕ್ಕೆ ಮರು ನೇಮಕಗೊಳಿಸಿ ತಮ್ಮ ತಪ್ಪಿನ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು

ಕಾರಟಗಿ: ಬಸವ ಜಯಮೃತ್ಯುಂಜಯ ಸ್ವಾಮೀಜಿಯನ್ನು ಕೂಡಲ ಸಂಗಮ ಪಂಚಮಸಾಲಿ ಪೀಠದಿಂದ ಉಚ್ಛಾಟಿಸಿರುವುದನ್ನು ಖಂಡಿಸಿ ಪಂಚಮಸಾಲಿ ಸಮಾಜದ ಕಾರಟಗಿ ತಾಲೂಕು ಘಟಕದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಪೀಠದ ದಾಸೋಹ ಸಮಿತಿ ರಾಜ್ಯಾಧ್ಯಕ್ಷ ಚನ್ನಬಸಪ್ಪ ಸುಂಕದ ಮಾತನಾಡಿ, ರಾಜ್ಯದಲ್ಲಿ ಪಂಚಮಸಾಲಿ ಸಮಾಜದ ಜನತೆಗೆ ಶಕ್ತಿ ನೀಡಿದ, ಸಮಾಜದ ಮಕ್ಕಳ ಭವಿಷ್ಯಕ್ಕೆ ಹೋರಾಟ ನಡೆಸಿ ರಾಜ್ಯವ್ಯಾಪಿ ಸುತ್ತಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಆಗ್ರಹಿಸಿ ಕನಸುಗಳನ್ನು ಬಿತ್ತಿದ ಶ್ರೀಗಳನ್ನು ಇತ್ತೀಚಿಗೆ ಶಾಸಕ ವಿಜಯಾನಂದ ಕಾಶಪ್ಪನವರ ಮತ್ತು ಅವರ ತಂಡ ಪಂಚಮಸಾಲಿ ಸಮಾಜದ ಕೂಡಲಸಂಗಮ ಪೀಠದಿಂದ ಉಚ್ಛಾಟಿಸಿ ಇಡೀ ಸಮಾಜದ ಲಕ್ಷಾಂತರ ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಸಮಾಜದ ಜನತೆಯ ನಂಬಿಕೆಗೆ ದ್ರೋಹವೆಸಗಿದ್ದಾರೆ ಎಂದು ಕಿಡಿಕಾರಿದರು.

ಶ್ರೀಗಳ ತೇಜೋವಧೆ ನಿಲ್ಲಿಸಬೇಕು. ಅಷ್ಟೇ ಅಲ್ಲ ಅವರನ್ನು ಮರಳಿ ಪೀಠಕ್ಕೆ ಮರು ನೇಮಕಗೊಳಿಸಿ ತಮ್ಮ ತಪ್ಪಿನ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಕಾಶಪ್ಪನವರ ವಿರುದ್ಧ ಸಮಾಜ ಬಾಂಧವರು ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ ಎಂದ ಅವರು ಇದೇ ವೇಳೆ ಶ್ರೀಗಳಿಗೆ ಅಪಮಾನ ಮಾಡುವ ಮೂಲಕ ಪಂಚಮಸಾಲಿ ಸಮಾಜಕ್ಕೆ ಅವಮಾನ ಮಾಡಿರುವ ವಿಜಯಾನಬಂದ ಕಾಶಪ್ಪನವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪಕ್ಷದಿಂದ ಶಾಸಕ ಸ್ಥಾನದಿಂದ ಉಚ್ಛಾಟಿಸಿ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಜಿಪಂ ಮಾಜಿ ಅಧ್ಯಕ್ಷ ಅಮರೇಶ ಕುಳಗಿ, ಸಮಾಜದ ತಾಲೂಕಾಧ್ಯಕ್ಷ ಪಾಲಾಕ್ಷಪ್ಪ ಕೆಂಡದ, ನಗರ ಘಟಕ ಅಧ್ಯಕ್ಷ ಬಸವರಾಜ ಎತ್ತಿನಮನಿ, ಕೆ. ಪರಮೇಶಗೌಡ ಪೊಲೀಸ್ ಪಾಟೀಲ್, ಸಿದ್ಧನಗೌಡ ಕತ್ತಿ ಮಾತನಾಡಿ ಶಾಸಕ ವಿಜಯಾನಂದ ಕಾಶಪ್ಪನವರು ಹಾಗೂ ಅವರ ಬೆಂಬಲಿಗರ ನಡೆಯನ್ನು ಉಗ್ರವಾಗಿ ಖಂಡಿಸಿದರಲ್ಲದೇ, ಕೂಡಲೇ ಶ್ರೀಗಳನ್ನು ಪೀಠಕ್ಕೆ ಮರು ನೇಮಿಸಿ ರಾಜ್ಯದ ಸಮಾಜ ಬಾಂಧವರ ಮುಂದೆ ಗೌರವ ಉಳಿಸಿಕೊಳ್ಳುವಂತೆ ಒಕ್ಕೂರಲಿನಿಂದ ಆಗ್ರಹಿಸಿದರು.

ಪ್ರತಿಭಟನಾ ಮೆರವಣಿಗೆ ಇದಕ್ಕೂ ಮುನ್ನ ವಿಶೇಷ ಎಪಿಎಂಸಿಯಿಂದ ಮೆರವಣಿಗೆ ಆರಂಭಿಸಿದ ಸಮಾಜ ಬಾಂಧವರು ಹಳೆ ಬಸ್‌ ನಿಲ್ದಾಣದ ಮೂಲಕ ಹೆದ್ದಾರಿಯಲ್ಲಿ ಸಾಗಿ ಕನಕದಾಸ ವೃತ್ತದಲ್ಲಿರುವ ಹೊಸ ಬಸ್ ನಿಲ್ದಾಣದವರೆಗೆ ತೆರಳಿ ಬಹಿರಂಗ ಸಭೆ ಸೇರಿ ಪಂಚಮಸಾಲಿ ಪೀಠದಿಂದ ಶ್ರೀಗಳನ್ನು ಉಚ್ಛಾಟಿಸಿದ ವಿಜಯಾನಂದ ಕಾಶಪ್ಪನವರ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.

ಈ ವೇಳೆ ಪಂಚಸೇನೆ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಶಿವಶರಣಪ್ಪ ಶಿವಪೂಜಿ, ನಗರ ಘಟಕ ಪ್ರಧಾನ ಕಾರ್ಯದರ್ಶಿ ಶರಣಪ್ಪ ಅಂಗಡಿ ಶಾಂತಿನಿಕೇತನ, ಸಮಾಜದ ಹಿರಿಯ ಮುಖಂಡರಾದ ಗುಂಡಪ್ಪ ಕುಳಗಿ, ಡಾ.ಹೆಚ್ ಬಸಪ್ಪ, ಶರಣೇಗೌಡ ಮಾಲಿ ಪಾಟೀಲ್ ಬೂದಗುಂಪಾ, ಶರಣಪ್ಪ ಶಿವಶಕ್ತಿ, ವಿರುಪಾಕ್ಷಿ ತಿಮ್ಮಾಪುರ, ವಿಕಾಸ್ ಇಟ್ಟಂಗಿ, ರಮೇಶ ಅಯೋಧ್ಯ, ಶಿವಕುಮಾರ ಬಜಾರ್, ಭದ್ರಗೌಡ ಪನ್ನಾಪುರ, ಶರಣಪ್ಪ ಮ್ಯಾಗಡೇ, ವೀರೇಶಪ್ಪ ಪನ್ನಾಪುರ , ವಿರುಪಾಕ್ಷಪ್ಪ ಕಟಾಂಬ್ಲಿ ಸೇರಿದಂತೆ ಇತರರಿದ್ದರು.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ