ದಾಂಧಲೆ ಘಟನೆ ಖಂಡಿಸಿ ಬೃಹತ್ ಪ್ರತಿಭಟನೆ

KannadaprabhaNewsNetwork | Published : May 3, 2024 1:02 AM

ಸಾರಾಂಶ

ಬೀದಿಗಿಳಿದ ಮಠಾಧೀಶರು, ಭುಗಿಲೆದ್ದ ಭಕ್ತರ ಆಕ್ರೋಶ ವ್ಯಕ್ತವಾಯಿತು. ಮಾತ್ರವಲ್ಲ, ಶಂಭು ಕಲ್ಲೋಳಿಕರ ಮತ್ತವರ ಬೆಂಬಲಿಗರನ್ನು ಬಂಧಿಸಲು ಆಗ್ರಹಿಸಲಾಯಿತು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಪಟ್ಟಣದ ಧಾರ್ಮಿಕ ಶ್ರದ್ಧಾ ಕೇಂದ್ರವೊಂದರಲ್ಲಿ ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಿಕರ ಮತ್ತವರ ಕಾರ್ಯಕರ್ತರು ಅಕ್ರಮವಾಗಿ ನುಗ್ಗಿ ನಡೆಸಿದ್ದಾರೆ ಎನ್ನಲಾದ ದಾಂಧಲೆ ಪ್ರಕರಣ ಖಂಡಿಸಿ ನಾಡಿನ ವಿವಿಧ ಮಠಾಧೀಶರು ಗುರುವಾರ ಬೀದಿಗಿಳಿದು ಪ್ರತಿಭಟಿಸಿದರು.

ಇದೇ ವೇಳೆ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ಸ್ವಾಮೀಜಿಗಳ ನೇತೃತ್ವದಲ್ಲಿ ಹುಕ್ಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಇದರೊಂದಿಗೆ ಕಳೆದ 4 ದಿನಗಳಿಂದ ಮಡುಗಟ್ಟಿದ ಭಕ್ತರ ಸಿಟ್ಟು ಭುಗಿಲೆದ್ದಿದ್ದು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಇಲ್ಲಿನ ಕೋರ್ಟ್ ಸರ್ಕಲ್ ಬಳಿ ಜಮಾಯಿಸಿದ ಮಠಾಧೀಶರು ಹಾಗೂ ಭಕ್ತ ಸಮೂಹ, ಘಟನೆಗೆ ಕಾರಣವಾದ ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಿಕರ ಮತ್ತವರ ಬೆಂಬಲಿಗ ಕಾರ್ಯಕರ್ತರನ್ನು ಕೂಡಲೇ ಬಂಧಿಸಬೇಕು. ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಲು ಹಿಂದೇಟು ಹಾಕಿದರೆ ಉಗ್ರ ಹೋರಾಟ ಮಾಡಲಾಗುವುದು ಎಚ್ಚರಿಕೆ ನೀಡಿದರು.

ಹೊರವಲಯದ ಕ್ಯಾರಗುಡ್ಡ್ ಬಳಿಯ ಅವುಜೀಕರ ಧ್ಯಾನ ಯೋಗಾಶ್ರಮದ ಮಠದಲ್ಲಿ ಚಿಕ್ಕೋಡಿ ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಿಕರ ಮತ್ತವರ ಕಾರ್ಯಕರ್ತರು ಏಕಾಏಕಿ ನುಗ್ಗಿ ಮನಬಂದಂತೆ ದಾಂಧಲೆ ನಡೆಸಿದ್ದಾರೆ. ಮಠದ ಮಲ್ಲೇಶ್ವರ ಮಹಾರಾಜರೊಂದಿಗೆ ಅಸಭ್ಯವಾಗಿ ವರ್ತಿಸಿ, ಅವ್ಯಾಚ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕೂಡಲೇ ಪಕ್ಷೇತರ ಕಲ್ಲೋಳಿಕರ ಅವರನ್ನು ಸ್ಪರ್ಧಾ ಕಣದಿಂದ ಅಮಾನತುಗೊಳಿಸಿ ಬಂಧಿಸಬೇಕು. ಇಂಥ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಮಠಾಧೀಶರು ಮತ್ತು ಭಕ್ತರು ಆಗ್ರಹಿಸಿದರು.

ಶ್ರೀಮಠದ ಮಲ್ಲೇಶ್ವರ ಸ್ವಾಮೀಜಿ, ಶ್ರೀಮಠದ ಉತ್ತರಾಧಿಕಾರಿ ಅಭಿನವ ಮಂಜುನಾಥ ಸ್ವಾಮೀಜಿ, ಬೆಳವಿ ಮೃತ್ಯುಂಜಯ ಸ್ವಾಮೀಜಿ, ಶಿವಾಪುರದ ಕಾಡಸಿದ್ದೇಶ್ವರ ಸ್ವಾಮೀಜಿ, ನೂಲದ ಗುರುಸಿದ್ದೇಶ್ವರ ಸ್ವಾಮೀಜಿ, ಝಂಗಟಿಹಾಳ ಚಂದ್ರಶೇಖರ ಸ್ವಾಮೀಜಿ, ಮಾಜಿ ಸಚಿವ ಶಶಿಕಾಂತ ನಾಯಿಕ, ಮುಖಂಡರಾದ ಶಿವರಾಜ ನಾಯಿಕ, ಕೆ.ಬಿ.ಬಡಿಗೇರ, ಮಹೇಶ ಬಡಗಾಂವಿ, ಋತುರಾಜ ಕೋಟೇವಾಲೆ, ಶಿವಾನಂದ ಪಾಟೀಲ, ಶಾಂತಿನಾಥ ಚೌಗಲಾ, ಕಿರಣ ಗೂಡಸೆ, ಶಿವಪ್ಪ ಮಗದುಮ್ಮ ಮತ್ತಿತರರು ಉಪಸ್ಥಿತರಿದ್ದರು.

ತಹಸೀಲ್ದಾರ್‌ ಬಲರಾಮ ಕಟ್ಟಿಮನಿ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಕೋರ್ಟ್ ಸರ್ಕಲ್ ಬಳಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ಹೊರಹಾಕಿದರು. ಇದರಿಂದ ಕೆಲ ವಾಹನ ಮತ್ತು ಜನ ಸಂಚಾರಕ್ಕೆ ತೀವ್ರ ಅಡಚಣೆಯಾಯಿತು.

-------------

ಕೋಟ್‌...

ಕಲ್ಲೋಳಿಕರ ಮತ್ತು ಅವರ ಬೆಂಬಲಿಗರು ಮಠದೊಳಗೆ ಅಸಭ್ಯ ವರ್ತನೆ ತೋರಿ ದುಂಡಾವರ್ತನೆ ಮೆರೆದಿದ್ದಾರೆ. ಮಠದ ಆಸ್ತಿ-ಪಾಸ್ತಿ ಹಾನಿಗೂ ಯತ್ನಿಸಿದ್ದಾರೆ. ಈ ಮೂಲಕ ಶ್ರೀಮಠದ ಪರಂಪರೆ ಮತ್ತು ಹಿಂದು ಧರ್ಮಕ್ಕೆ ಅವಮಾನ ಮಾಡಿದ್ದಾರೆ. ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೇ ಇಂಚಗೇರಿ ಸಂಪ್ರದಾಯ ಹೊಂದಿದ ನಾಡಿನ ಮೂರು ಸಾವಿರ ಮಠಗಳಿಂದ ಉಗ್ರ ಹೋರಾಟ ಮಾಡಲಾಗುವುದು.

-ಅಭಿನವ ಮಂಜುನಾಥ ಸ್ವಾಮೀಜಿ, ಶ್ರೀಮಠದ ಉತ್ತರಾಧಿಕಾರಿ.

Share this article