ಕನ್ನಡಪ್ರಭ ವಾರ್ತೆ ವಿಜಯಪುರ
ಹಿಂದುತ್ವವಾದಿ ನಾಯಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿ ಉಚ್ಛಾಟಿಸಿದ್ದನ್ನು ಖಂಡಿಸಿ ಪಂಚಮಸಾಲಿ ಸಮಾಜದ ಮುಖಂಡರು ಹಾಗೂ ಅಭಿಮಾನಿಗಳು ಬೃಹತ್ ಪ್ರತಿಭಟನೆ ನಡೆಸಿದರು.ನಗರದ ಗಾಂಧಿ ಚೌಕ್‌ನಲ್ಲಿ ಗುರುವಾರ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಮಾನವ ಸರಪಳಿ ನರ್ಮಿಸಿ, ಕೆಲಕಾಲ ರಸ್ತೆ ಸಂಚಾರ ಬಂದ್ ಮಾಡಿದರು.
ಈ ವೇಳೆ ಮಾತನಾಡಿದ ಸಮಾಜದ ಮುಖಂಡ ಎಂ.ಎಸ್.ರುದ್ರಗೌಡ್ರ ಅವರು, ಯತ್ನಾಳರು ಎಂದಿಗೂ ಪಕ್ಷದ ವಿರುದ್ಧ ಮಾತನಾಡಿಲ್ಲ. ಪಕ್ಷದಲ್ಲಿನ ಕೆಲವರ ಅಡ್ಜಸ್ಟ್‌ಮೆಂಟ್, ಭ್ರಷ್ಟಾಚಾರ, ಕುಟುಂಬ ರಾಜಕಾರಣ ವಿರೋಧಿಸಿದ್ಧಕ್ಕೆ ಈ ರೀತಿ ಅವಮಾನ ಮಾಡಲಾಗಿದೆ. ಕೇವಲ ಉತ್ತರ ಕರ್ನಾಟಕ ಮಾತ್ರವಲ್ಲ ರಾಜ್ಯದ ಮೂಲೆ ಮೂಲೆಯಲ್ಲೂ ಲಕ್ಷಾಂತರ ಅಭಿಮಾನಿಗಳು ಹೈಕಮಾಂಡ್ ತೆಗೆದುಕೊಂಡ ತಪ್ಪು ನಿರ್ಧಾರಕ್ಕೆ ನೊಂದಿದ್ದು, ಕೆಲವೇ ದಿನಗಳಲ್ಲಿ ಪಕ್ಷ ಪಶ್ಚಾತ್ತಾಪ ಅನುಭವಿಸುವುದು ನಿಶ್ಚಿತ. ಹೀಗಾಗಿ ಕೂಡಲೇ ತಮ್ಮ ನಿರ್ಧಾರ ಬದಲಿಸಬೇಕು ಎಂದು ಆಗ್ರಹಿಸಿದರು.ಮುಖಂಡ ಬಿ.ಎಸ್.ಪಾಟೀಲ ನಾಗರಾಳ ಹುಲಿ ಮಾತನಾಡಿ, ಕುಟುಂಬ ರಾಜಕಾರಣ ಮುಕ್ತ, ಹಿಂದುತ್ವ ಸಿದ್ಧಾಂತದ ಪಕ್ಷ ಎನ್ನುವ ಹೈಕಮಾಂಡ್ ಮತ್ಯಾಕೆ ಕುಟುಂಬದ ಹಿತ ಬೇಕೆನ್ನುವ ಅಪ್ಪ ಮಕ್ಕಳ ಷಡ್ಯಂತ್ರಕ್ಕೆ ಮಣಿದು ತಪ್ಪು ನಿರ್ಧಾರ ತೆಗೆದುಕೊಂಡಿದೆ? ಬಸನಗೌಡ ಪಾಟೀಲರನ್ನು ಉಚ್ಛಾಟನೆ ಮಾಡಿದ್ದು ಏಕೆ?, ಕೇವಲ ಲಿಂಗಾಯತರು ಮಾತ್ರವಲ್ಲ, ಸಮಸ್ತ ಹಿಂದೂ ಸಮುದಾಯ ಯತ್ನಾಳರ ಹಿಂದಿದೆ. ಉಚ್ಛಾಟನೆಯಾಗಿ 24 ಗಂಟೆಯಲ್ಲೇ ರಾಜ್ಯಾದ್ಯಂತ 23 ಲಕ್ಷ ಬಿಜೆಪಿ ಸದಸ್ಯರು ಪ್ರಾಥಮಿಕ ಸದಸ್ಯತ್ವ ರದ್ದುಪಡಿಸಿಕೊಂಡಿದ್ದಾರೆ ಎಂದು ಹೇಳಿದರು.
ನಾಯಕಿ ಲಕ್ಷ್ಮೀ ಕನ್ನೊಳ್ಳಿ, ಎಲ್ಲ ಸಮುದಾಯಗಳ ಧ್ವನಿಯಾದ ಬಸನಗೌಡ ಅವರ ಉಚ್ಛಾಟನೆಯಿಂದ ನೋವಿನಿಂದ ನಾವೆಲ್ಲರೂ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದೇವೆ. ಇದು ಕೇವಲ ಒಬ್ಬ ನಾಯಕನಿಗೆ ಮಾಡಿರುವ ಅನ್ಯಾಯವಲ್ಲ. ಇಡೀ ಹಿಂದುಗಳಿಗೆ, ಉತ್ತರ ಕರ್ನಾಟಕಕ್ಕೆ ಅಪಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.ಪಂಚಮಸಾಲಿ ಸಮಾಜದ ಮುಖಂಡರಾದ ಅಶೋಕ ಗಂಗಣ್ಣವರ, ಡಾ.ಸಿ.ಎಸ್.ಸೋಲಾಪುರ, ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ, ಸಿದ್ದು ಹಂಜಿ, ಈಶ್ವರ ಸಾರವಾಡ, ಅಪ್ಪು ಜಿರಲಿ, ನಿಂಗನಗೌಡ ಸೋಲಾಪುರ, ಎಸ್.ಆರ್.ಬುಕ್ಕಣ್ಣಿ, ಸಂಗಮೇಶ ಬಬಲೇಶ್ವರ, ರವಿ ಪಾಟೀಲ, ಸಂತೋಷ ಪಾಟೀಲ, ಸಂತೋಷ ಮಂಜಣ್ಣಿ, ದಾನೇಶ ಅವಟಿ ಸೇರಿ ವಿವಿಧ ಸಂಘಟನೆಗಳು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.