ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ವಿರುದ್ಧ ಜಾರಿಗೊಳಿಸಿದ್ದ ಸಮನ್ಸ್ ರದ್ದುಪಡಿಸಿರುವ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂಬ ಜಾರಿ ನಿರ್ದೇಶನಾಲಯದ (ಇ.ಡಿ) ಮಧ್ಯಂತರ ಮನವಿ ಕುರಿತ ತೀರ್ಪನ್ನು ವಿಭಾಗೀಯ ಪೀಠ ಕಾಯ್ದಿರಿಸಿದೆ.
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮುಡಾ ಅಕ್ರಮವಾಗಿ ಬದಲಿ ನಿವೇಶನ ಹಂಚಿಕೆ ಮಾಡಿದ ಪ್ರಕರಣದಲ್ಲಿ ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ವಿರುದ್ಧ ಜಾರಿಗೊಳಿಸಿದ್ದ ಸಮನ್ಸ್ ರದ್ದುಪಡಿಸಿರುವ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂಬ ಜಾರಿ ನಿರ್ದೇಶನಾಲಯದ (ಇ.ಡಿ) ಮಧ್ಯಂತರ ಮನವಿ ಕುರಿತ ತೀರ್ಪನ್ನು ವಿಭಾಗೀಯ ಪೀಠ ಕಾಯ್ದಿರಿಸಿದೆ.
ಇ.ಡಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ ಮಧ್ಯಂತರ ಆದೇಶವನ್ನು ಕಾಯ್ದಿರಿಸಿತು.
ಇದಕ್ಕೂ ಮುನ್ನ ಡಿ.ಬಿ.ನಟೇಶ್ ಪರ ಸುಪ್ರೀಂ ಕೋರ್ಟ್ ಹಿರಿಯ ವಕೀಲ ದುಷ್ಯಂತ್ ದವೆ ವಾದ ಮಂಡಿಸಿ, ಮುಡಾ ಪ್ರಕರಣದಲ್ಲಿ ನಟೇಶ್ ಅವರಿಗೆ ಇ.ಡಿ ಸಮನ್ಸ್ ಜಾರಿಗೊಳಿಸಿರುವುದು ದುರುದ್ದೇಶಪೂರಿತ ಕ್ರಮ. ಸಿದ್ದರಾಮಯ್ಯ ಅವರ ಪತ್ನಿಗೆ ಸೇರಿದ ಜಮೀನು ವಶಪಡಿಸಿಕೊಂಡಿರುವುದಕ್ಕೆ ಬದಲಿಯಾಗಿ 14 ಸೈಟ್ ಹಂಚಿಕೆ ಮಾಡಿರುವುದು ಅಪರಾಧ ಸಂಪತ್ತು ಎನ್ನಲು ಸಾಧ್ಯವೇ? ಕರ್ನಾಟಕದ ಮಾಜಿ ಸಿಎಂ ಒಬ್ಬರು ಲೋಕಾಯುಕ್ತದಲ್ಲಿ 11 ಪ್ರಕರಣಗಳ ವಿಚಾರಣೆ ಎದುರಿಸುತ್ತಿದ್ದಾರೆ. ಅವರ ವಿರುದ್ಧ ಇ.ಡಿ ಸಮನ್ಸ್ ಜಾರಿ ಮಾಡದೆ ಈ ಪ್ರಕರಣದಲ್ಲಿ ಮಾತ್ರ ಬಹಳ ಆಸಕ್ತಿ ವಹಿಸಿ ನಟೇಶ್ ಅವರಿಗೆ ಸಮನ್ಸ್ ಮಾಡಿರುವ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದರು.
ಬಿಜೆಪಿ ಇರುವ ರಾಜ್ಯಗಳಲ್ಲೇಕೆ ಇಲ್ಲ?:
ಕರ್ನಾಟಕದ ಮೂರು ಪ್ರಮುಖ ರಾಜಕೀಯ ಪಕ್ಷಗಳ 38 ಹಿರಿಯ ರಾಜಕಾರಣಿಗಳ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣಗಳು ದಾಖಲಾಗಿದ್ದು, 30 ವರ್ಷಗಳಿಂದ ವಿಚಾರಣಾ ಹಂತದಲ್ಲಿವೆ. ಅ ಪ್ರಕರಣಗಳ ಆರೋಪಿಗಳ ವಿರುದ್ಧ ಕ್ರಮ ಜರುಗಿಸುವುದು ಇ.ಡಿಗೆ ಬೇಕಾಗಿಲ್ಲ. ಆದರೆ, ಮುಡಾ ಪ್ರಕರಣದಲ್ಲಿ ತನಿಖೆ ನಡೆಸಬೇಕಿದೆ ಎಂದು ಇ.ಡಿ ಹೇಳುತ್ತಿದೆ. ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಏಕೆ ಈ ಮಾದರಿಯ ನೋಟಿಸ್‌ಗಳನ್ನು ಇ.ಡಿ ಏಕೆ ಜಾರಿ ಮಾಡುತ್ತಿಲ್ಲ? ಬಿಜೆಪಿಯ ವಿರೋಧ ಪಕ್ಷಗಳು ಆಡಳಿತದಲ್ಲಿರುವ ಕರ್ನಾಟಕ, ಜಾರ್ಖಂಡ್ ಮತ್ತು ತಮಿಳುನಾಡಿನಲ್ಲಿ ಮಾತ್ರ ಏಕೆ ನೋಟಿಸ್ ನೀಡುತ್ತಿದೆ ಎಂಬ ದೊಡ್ಡ ಪ್ರಶ್ನೆ ನಮ್ಮನ್ನು ಕಾಡುತ್ತಿದೆ ಎಂದರು.
ಇ.ಡಿ ಈ ನಡೆ ಅಧಿಕಾರ ದುರುಪಯೋಗಕ್ಕೆ ಉತ್ತಮ ಉದಾಹರಣೆ. ಈ ಬೆಳವಣಿಗೆಗಳು ದೇಶದಲ್ಲಿ ಯಾರೂ ಸುರಕ್ಷಿತರಲ್ಲ ಎಂಬಂತಾಗಿದೆ ಎಂದು ಆಕ್ಷೇಪಿಸಿದ ದುಷ್ಯಂತ್ ದವೆ, ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಬಾರದು. ಏಕಸದಸ್ಯ ಪೀಠದ ಆದೇಶ ಸರಿಯಾಗಿದೆ. ಇ.ಡಿ ಸಲ್ಲಿಸಿರುವ ಮೇಲ್ಮನವಿ ವಜಾಗೊಳಿಸಬೇಕು ಎಂದು ಕೋರಿದರು.
ಇ.ಡಿ ಪರ ವಾದ ಮಂಡಿಸಿದ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಅರವಿಂದ ಕಾಮತ್, ಮುಡಾ ಪ್ರಕರಣದಲ್ಲಿ ಡಿ.ಬಿ.ನಟೇಶ್ ಸೇರಿ ಇತರೆ ಅಧಿಕಾರಿಗಳು ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿದ್ದಾರೆ. ನಿವೇಶನ ಹಂಚಿಕೆಯಲ್ಲಿ ಅಕ್ರಮಗಳ ನಡೆದಿದೆ ಎಂದು ಲೋಕಾಯುಕ್ತ ಪೊಲೀಸರ ತನಿಖಾ ವರದಿಯಲ್ಲೂ ಉಲ್ಲೇಖವಾಗಿದೆ. ಇ.ಡಿ ತನಿಖೆ ಮುಂದುವರಿಸಲು ಮೂಲ ಪ್ರಕರಣ ಸಾಬೀತಾಗಬೇಕಾದ ಅಗತ್ಯವಿಲ್ಲ. ಹಣ ಅಕ್ರಮ ವರ್ಗಾವಣೆ ಅಪರಾಧ ಮಾಡಿದರೆ ಅಥವಾ ಆ ಅಪರಾಧ ಎಸಗಲು ಪ್ರಯತ್ನಿಸಿದರೂ ತನಿಖೆ ನಡೆಸಬಹುದು. 5 ಸಾವಿರ ಕೋಟಿ ಮೌಲ್ಯದ ಆಸ್ತಿಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ಇದರಿಂದ ಇ.ಡಿಯು ಇಸಿಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದು, ಅದನ್ನು ಮುಂದುವರಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಪ್ರಕರಣದಲ್ಲಿ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿರುವುದರಿಂದಲೇ ನಟೇಶ್ ಅವರಿಗೆ ಇ.ಡಿ ಸಮನ್ಸ್ ಜಾರಿ ಮಾಡಿದೆ. ಏಕಸದಸ್ಯ ಪೀಠವು ಸಮನ್ಸ್ ರದ್ದು ಮಾಡಿರುವುದರಿಂದ ಇ.ಡಿ ತನಿಖೆ ಸ್ಥಗಿತವಾಗಿದೆ. ನಟೇಶ್ ಬಳಿ ಮಾಹಿತಿ ಪಡೆಯಲು ಅವರು ಇ.ಡಿ ವಿಚಾರಣೆಗೆ ಹಾಜರಾಗಬೇಕಿದೆ. ಲೋಕಾಯುಕ್ತ ಪೊಲೀಸರು ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಲಾಗಿದೆ ಎಂದು ನಟೇಶ್ ಪರ ವಕೀಲರು ಹೇಳುತ್ತಿದ್ದಾರೆ. ಆದರೆ, ನಟೇಶ್ ವಿರುದ್ಧ ಬಿ ರಿಪೋರ್ಟ್ ಸಲ್ಲಿಕೆಯಾಗಿಲ್ಲ. ನಟೇಶ್ ವಿರುದ್ಧ ಲೋಕಾಯುಕ್ತ ಪೊಲೀಸರ ತನಿಖೆ ಮುಂದುವರೆಸಿದೆ. 50:50 ಅನುಪಾತದಲ್ಲಿ ಸೈಟ್ ಹಂಚಿಕೆಯಲ್ಲಿ ಅಕ್ರಮ ನಡೆದಿದ್ದು, ಆ ಕುರಿತು ತನಿಖೆ ಮುಂದುವರೆಯುತ್ತದೆ ಎಂಬುದಾಗಿ ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ. ಆದ್ದರಿಂದ ಏಕಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು.