ಧಾರವಾಡ: ಜನರಲ್ಲಿ ಅಡಗಿರುವ ಮೌಢ್ಯ, ಯುವ ಸಬಲೀಕರಣ, ಬಡತನ ನಿರ್ಮೂಲನೆ, ಸಾಕ್ಷರತೆ ಮಹತ್ವ ಸೇರಿದಂತೆ ಹಲವಾರು ವಿಚಾರಗಳ ಕುರಿತು ಅರಿವು ಮೂಡಿಸಿ ಸಮಾಜದಲ್ಲಿ ಬದಲಾವಣೆ ತರುವಲ್ಲಿ ರಂಗಭೂಮಿ ಪ್ರಮುಖ ಪಾತ್ರ ವಹಿಸಿದೆ ಎಂದು ರಾಜ್ಯ ಶಾಲಾ ನಾಯಕತ್ವ, ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣಾ ಸಂಸ್ಥೆಯ ನಿರ್ದೇಶಕ ಡಾ. ಬಿ.ಕೆ.ಎಸ್ ವರ್ಧನ ಹೇಳಿದರು.
ಇಂದಿನ ಜಾಗತಿಕ ಮಟ್ಟದಲ್ಲಿ ಪರಿಸರ ಹಾಗೂ ಮನುಕುಲ ಸಂಕಷ್ಟದಲ್ಲಿದೆ. ಕೋಮು ಗಲಭೆ, ಯುದ್ದಗಳು, ರಾಜಕೀಯ ಹುನ್ನಾರ ಸೇರಿದಂತೆ ಹಲವಾರು ಆತಂಕಕಾರಿ ಘಟನೆಗಳು ಸಮಾಜದಲ್ಲಿ ನಡೆಯುತ್ತಿವೆ. ಇವುಗಳ ಕುರಿತು ಜನರಿಗೆ ಅರಿವನ್ನು ನೀಡುವಂತಹ ಕಾರ್ಯ ರಂಗಭೂಮಿ ಮಾಡುತ್ತಿದೆ.ವ್ಯಕ್ತಿ ನಿರ್ಮಾಣ, ಅಭಿವ್ಯಕ್ತಿ ಕೌಶಲ್ಯ ಬೆಳೆಸುವಲ್ಲಿ ರಂಗಭೂಮಿಯು ಸಹಕಾರಿ ಎಂದರು.
ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಂಗಭೂಮಿಯು ಸಂಸ್ಕೃತಿಯನ್ನು ಚಿತ್ರಿಸುವ ಕಲೆ ಹೊಂದಿದೆ. ಸಮಾಜದಲ್ಲಿನ ಗಂಭೀರ ವಿಷಯಗಳತ್ತ ಬೆಳಕು ಚೆಲ್ಲುವಂತಹ ಸಂದೇಶ ರವಾನಿಸುತ್ತವೆ. ಹಲವಾರು ಕಲಾವಿದರು ರಂಗಭೂಮಿಯಿಂದ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.ರಂಗಾಯಣ ಆಡಳಿತಾಧಿಕಾರಿಗಳಾದ ಶಶಿಕಲಾ ಹುಡೇದ ಸ್ವಾಗತಿಸಿದರು. ಆಕಾಶವಾಣಿ ಕಲಾವಿದ ಬಸವರಾಜ ಭಂಟನೂರ ಅವರು ರಂಗಸಂಗೀತವನ್ನು ಪ್ರಸ್ತುತ ಪಡಿಸಿದರು. ನಂತರ ಪಂ.ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಸತ್ತವರ ನೆರಳು ನಾಟಕವನ್ನು ರಂಗಾಯಣದ ತಾತ್ಕಾಲಿಕ ರೆಪರ್ಟರಿ ಕಲಾವಿದರು ಪ್ರದರ್ಶಿಸಿದರು.