ಗದಗ: ಗದುಗಿನ ಶಿಕ್ಷಣಪ್ರೇಮಿ, ತ್ಯಾಗಜೀವಿ ಬಿ.ಜಿ. ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ 2025-26ನೇ ಶೈಕ್ಷಣಿಕ ವರ್ಷದಲ್ಲಿ ಟ್ಯೂಶನ್ ಪಡೆದುಕೊಂಡು ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆಯುವ ಗ್ರಾಮೀಣ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನವು ವಿಶೇಷ ಪುರಸ್ಕಾರವನ್ನು ನೀಡಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಪಾಟೀಲ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಮೊದಲ 10 ರ್‍ಯಾಂಕ್ (ಸ್ಥಾನ)ಗಳಲ್ಲಿ ತೇರ್ಗಡೆಯಾಗುವ ಆಶ್ರಮದಲ್ಲಿ ಟ್ಯೂಶನ್ ಪಡೆದ ಗ್ರಾಮೀಣ ವಿದ್ಯಾರ್ಥಿ/ನಿಗೆ 1 ಲಕ್ಷ ಗಳ ಪುರಸ್ಕಾರ ನೀಡಲಾಗುವುದು. 100 ರ್‍ಯಾಂಕ್ (ಸ್ಥಾನ)ಗಳಲ್ಲಿ ತೇರ್ಗಡೆಯಾಗುವ ವಿದ್ಯಾರ್ಥಿ/ನಿಗೆ 50 ಸಾವಿರ ಪುರಸ್ಕಾರ, 500 ಸ್ಥಾನಗಳಲ್ಲಿ ತೇರ್ಗಡೆಯಾಗುವ ವಿದ್ಯಾರ್ಥಿ/ನಿಗೆ 25 ಸಾವಿರ ಪುರಸ್ಕಾರ ಹಾಗೂ ಒಂದು ಸಾವಿರ ಸ್ಥಾನಗಳಲ್ಲಿ ತೇರ್ಗಡೆಯಾಗುವ ವಿದ್ಯಾರ್ಥಿ/ನಿಗೆ 10 ಸಾವಿರ ರು.ಗಳ ಪುರಸ್ಕಾರ ನೀಡಿ ಗೌರವಿಸಲಾಗುವುದು.ಟ್ಯೂಶನ್ ಹಾಗೂ ಪ್ರತಿಭಾ ಪುರಸ್ಕಾರಗಳಿಂದ ವಂಚಿತರಾಗುವ ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿ/ನಿಯರಿಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕೆಂಬ ಮಹದಾಸೆಯನ್ನು ಹೊಂದಿದ್ದ ಬಿ.ಜಿ. ಅಣ್ಣಿಗೇರಿ ಗುರುಗಳ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರತಿಭಾ ಪ್ರತಿಷ್ಠಾನದ ಗೌರವ ಅಧ್ಯಕ್ಷ ಪೂಜ್ಯ ಜ.ಡಾ. ಸಿದ್ದರಾಮ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ವಿದ್ಯಾರ್ಥಿಗಳು ಈಗಿನಿಂದಲೇ ಅಭ್ಯಾಸದಲ್ಲಿ ತೊಡಗಬೇಕೆಂಬುದು ಪ್ರತಿಷ್ಠಾನದ ಸದಾಶಯವಾಗಿದೆ.
8, 9 ಹಾಗೂ 10 ತರಗತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಏ. 1ರಿಂದ ಬೇಸಿಗೆಯ ಟ್ಯೂಶನ್ ವರ್ಗಗಳನ್ನು ಆರಂಭಿಸಲಿದೆ. ವಿಶೇಷವಾಗಿ 8ನೇ ತರಗತಿಗೆ ಪ್ರವೇಶ ಪಡೆದಿರುವ ಗ್ರಾಮೀಣ ಪ್ರದೇಶದ ಆಯ್ದ 20 ಬಡ ವಿದ್ಯಾರ್ಥಿಗಳಿಗೆ 10ನೇ ತರಗತಿಯವರೆಗೂ ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ ಉಚಿತ ಟ್ಯೂಶನ್‌ದೊಂದಿಗೆ ಉಚಿತ ಊಟ ಮತ್ತು ಉಚಿತ ವಸತಿ ಸೌಲಭ್ಯವಿದೆ. (ವಿದ್ಯಾರ್ಥಿನಿಯರಿಗೆ ವಸತಿಗೆ ಅವಕಾಶವಿಲ್ಲ) ಅನುಭವಿಕ ಶಿಕ್ಷಕ ಶಿಕ್ಷಕಿಯರ ತಂಡವು ಉಚಿತ ಟ್ಯೂಶನ್ ಹೇಳಲಿದ್ದು ಇಚ್ಛಿತ ವಿದ್ಯಾರ್ಥಿ/ನಿಯರು ಬಿ.ಜಿ. ಅಣ್ಣಿಗೇರಿ ಗುರುಗಳ ಆಶ್ರಮ, ಡಾ.ಪಂ.ಪುಟ್ಟರಾಜ ಗವಾಯಿಗಳ ಪುತ್ಥಳಿ ಹತ್ತಿರ (ಭೂಮರಡ್ಡಿ ಸರ್ಕಲ್) ಗದಗ. ಫೋನ್ ನಂ : 9902652860, 9481008700, 9480555766, 8495877018 ಇಲ್ಲಿಗೆ ಸಂಪರ್ಕಿಸಿ ಹೆಸರು ನೋಂದಾಯಿಸಲು ಶಿವಕುಮಾರ ಪಾಟೀಲ ತಿಳಿಸಿದ್ದಾರೆ.