ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಬೃಹತ್‌ ಪ್ರತಿಭಟನೆ

KannadaprabhaNewsNetwork |  
Published : Oct 09, 2025, 02:02 AM IST
ಬೆಳಗಾವಿ | Kannada Prabha

ಸಾರಾಂಶ

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಉದ್ಯೋಗ ಆಕಾಂಕ್ಷಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಯುವಕರು, ವಿದ್ಯಾರ್ಥಿಗಳು ಬೃಹತ್‌ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಉದ್ಯೋಗ ಆಕಾಂಕ್ಷಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಯುವಕರು, ವಿದ್ಯಾರ್ಥಿಗಳು ಬೃಹತ್‌ ಪ್ರತಿಭಟನೆ ನಡೆಸಿದರು. ನಗರದ ಚನ್ನಮ್ಮ ವೃತ್ತದಲ್ಲಿ ಬುಧವಾರ ಸೇರಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ಸಾಗಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಡಳಿತ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸರ್ಕಾರ ನೇಮಕಾತಿ ಪ್ರಕ್ರಿಯೆ ಚುರುಕುಗೊಳಿಸುವ ಮೂಲಕ 2025 ರೊಳಗಾಗಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಬೇಕು. ಎಲ್ಲ ಹಂತದ ಹುದ್ದೆಗಳಿಗೆ ಕನಿಷ್ಠ ವಯೋಮಿತಿ 5 ವರ್ಷದವರೆಗೆ ಸಡಲಿಕೆ ಮಾಡಬೇಕು. ಶಾಲೆಗಳಲ್ಲಿ ಸಂಗೀತ, ಚಿತ್ರಕಲೆ ಮತ್ತು ದೈಹಿಕ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕು. ಗುತ್ತಿಗೆ ಆಧಾರಿತ ಹುದ್ದೆಗಳನ್ನು ರದ್ದುಪಡಿಸಿ ಉದ್ಯೋಗ ಭದ್ರತೆ ಖಾತ್ರಿಪಡಿಸಬೇಕು. ಕೆಪಿಎಸ್‌ಸಿ ಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಈ ವೇಳೆ ಉದ್ಯೋಗ ಆಕಾಂಕ್ಷಿಗಳ ಹೋರಾಟ ಸಮಿತಿ ಮುಖಂಡ ಸಿದ್ದಲಿಂಗಪ್ಪ ಬಾಗೇವಾಡಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಿಕೊಳ್ಳಬೇಕು. ಕೆಪಿಎಸ್‌ಸಿಯಲ್ಲಿ ಅಧಿಸೂಚನೆ ಹೊರಡಿಸಿ ಹಲವು ವರ್ಷಗಳಾದರು ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುತ್ತಿಲ್ಲ. ಹೀಗಾಗಿ ಯುಪಿಎಸ್‌ಸಿ ಮಾದರಿಯಲ್ಲಿ ಪ್ರತಿ ವರ್ಷವೂ ನೇಮಕಾತಿ ಪ್ರಕ್ರಿಯೆ ನಡೆಯುವಂತೆ ನೋಡಿಕೊಳ್ಳಬೇಕು. ಅಲ್ಲದೆ, ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಎಂದರು. ಪ್ರತಿಭಟನೆಯಲ್ಲಿ ರಾಜು ಗಾಣಿಗ, ವಿನಾಯಕ ಸಾರಥಿ, ಸಿದ್ದು ಪಾಟೀಲ, ಪ್ರೀತಿ ಸಿಂಗಾಡೆ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

PREV

Recommended Stories

ದಲಿತರಿಗೆ ದಿಲ್ಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ : ಜಾರಕಿಹೊಳಿ
ತೀವ್ರ ಚಳಿ, ಜ್ವರ : ದೇವೇಗೌಡ ಆಸ್ಪತ್ರೆಗೆ, ಐಸಿಯುನಲ್ಲಿ ಚಿಕಿತ್ಸೆ