ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸೋಮವಾರ ನಗರದಲ್ಲಿ ಬೃಹತ್ ರ್‍ಯಾಲಿ ನಡೆಸಿ, ರಾಣಿ ಚೆನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.ಈ ವೇಳೆ ಮಾತನಾಡಿದ ವಾಸುದೇವ ಮೇಟಿ, ದೇಶದ 108 ಕೋಟಿ ರೈತ ಏಳ್ಗೆಗೆ ಬೇಕಿರುವ ಯೋಜನೆ ರೂಪಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂದೇಟು ಹಾಕುತ್ತಿವೆ. ಇದರಿಂದಾಗಿ ಇಂದಿಗೂ ಅನ್ನದಾತ ಸಂಕಷ್ಟದ ಸ್ಥಿತಿಯಲ್ಲಿದ್ದಾನೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ರೈತರ ಸಮಸ್ಯೆ ಪರಿಹರಿಸಲು ಆಸಕ್ತಿ ತೋರುತ್ತಿಲ್ಲ. ಮಹದಾಯಿ ಯೋಜನೆ ಸಲುವಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಯೋಜನೆಯ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ. ಜನಪ್ರತಿನಿಧಿಗಳಿಗೆ ಚುನಾವಣೆಯ ವೇಳೆ ಮಾತ್ರ ಮಹದಾಯಿ ಯೋಜನೆ ನೆನಪಾಗುತ್ತಾಳೆ. ಈಗಲಾದರೂ ಎಚ್ಚೆತ್ತು ರೈತರ ಸಂಕಷ್ಟ ಪರಿಹರಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಆಗ್ರಹಿಸಿದರು.ಹಕ್ಕೊತ್ತಾಯಗಳು:
ಇದೇ ಸಂದರ್ಭದಲ್ಲಿ ಡಾ. ಸ್ವಾಮಿನಾಥನ್ ವರದಿಯನ್ನು ಶೀಘ್ರದಲ್ಲಿಯೇ ಜಾರಿಗೊಳಿಸಬೇಕು. ರಾಜ್ಯಾದ್ಯಂತ ಬರಗಾಲವಿದ್ದು ಸಾಲಮನ್ನಾ ಮಾಡಬೇಕು. ಬೆಳೆ ಪರಿಹಾರ ಬೆಳೆವಿಮೆ ಪರಿಹಾರ ನೀಡಬೇಕು. ಮಹದಾಯಿ ಮತ್ತು ಕಳಸಾ ಬಂಡೂರಿ ಜಾರಿಗೊಳಿಸಬೇಕು. ಬೆಣ್ಣಿಹಳ್ಳ ಯೋಜನೆ ಜಾರಿ ಮಾಡಬೇಕು. ಆಲಮಟ್ಟಿ ಜಲಾಶಯವನ್ನು 524 ಮೀಟರ್‌ಗೆ ಎತ್ತರಿಸಬೇಕು. ಬೆಳೆಗೆ ಸೂಕ್ತ ದರ ನಿಗಧಿ ಪಡಿಸಬೇಕು. ಈ ಬರಗಾಲದಲ್ಲಿ ರೈತರಿಂದ ಬಲವಂತವಾಗಿ ಸಾಲ ವಸೂಲಾತಿ ಮಾಡಬಾರದು.ಟ್ರ್ಯಾಕ್ಟರ್ ಮೇಲಿನ ಸಾಲ ಹಾಗೂ ಸೀಜಿಂಗ್ ಮಾಡಬಾರದು. ಕೊಪ್ಪಳ ಜಿಲ್ಲೆ ನವಲಿ ಬಳಿ ಪರ್ಯಾಯ ಜಲಾಶಯ ನಿರ್ಮಿಸಬೇಕು. ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಹರಿಯುವ ನದಿಗಳ ಯೋಜನೆಗಳನ್ನು ರಾಷ್ಟ್ರೀಯ ನೀರಾವರಿ ಯೋಜನೆಗಳೆಂದು ಕೇಂದ್ರ ಸರ್ಕಾರ ಘೋಷಿಸಬೇಕು. ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆ ಹಿಂಪಡಿದಿದ್ದು, ರಾಜ್ಯ ಸರ್ಕಾರವೂ ತಕ್ಷಣ ಹಿಂಪಡೆಯಬೇಕು ಎಂಬ ಹಕ್ಕೊತ್ತಾಯ ಮಾಡಲಾಯಿತು.ಈ ವೇಳೆ ಕುಂದಗೋಳದ ಬಸವಣ್ಣ ಶ್ರೀಗಳು, ಸಂಘದ ರಾಜ್ಯ ಉಪಾಧ್ಯಕ್ಷ ಬಿ.ಎಸ್. ಬೆಳ್ಳಿಗಟ್ಟಿ, ರಾಜ್ಯ ಸಂಘಟನಾ ಕಾರ್ಯದರ್ಶಿ ವಿ.ಎಸ್. ಕಂಠೆಪ್ಪಗೌಡ್ರ, ಚಂದ್ರಪ್ಪ ಕಟಗಿ, ಶಿವಾನಂದ ಮಾಯಾಕಾರ, ಮಂಜುನಾಥ ಕಾಲವಾಡ, ಚಂದ್ರಶೇಖರ, ವೈ.ಎನ್. ಪಾಟೀಲ, ಯಲ್ಲಪ್ಪ ಶಿಗ್ಗಾಂವಿ, ವಿ.ಎಸ್. ಕೆಂಚಪ್ಪನವರ, ಶಂಕರಗೌಡ್ರ ದೊಡ್ಡಮನಿ ಸೇರಿದಂತೆ ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ಗುಲಬರ್ಗಾ ಸೇರಿದಂತೆ ಹಲವು ಜಿಲ್ಲೆಗಳಿಂದ ಸಾವಿರಾರು ರೈತರು ಪಾಲ್ಗೊಂಡಿದ್ದರು.
ಬೃಹತ್ ಪ್ರತಿಭಟನಾ ಮೆರವಣಿಗೆ:ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರರ ಪುತ್ಥಳಿಗೆ ಮೂಲಾರ್ಪಣೆ ಮಾಡುವ ಮೂಲಕ ಆರಂಭವಾದ ರೈತರ ಬೃಹತ್ ಪ್ರತಿಭಟನಾ ಮೆರವಣಿಗೆಯು ಲ್ಯಾಮಿಂಗ್ಟನ್ ರಸ್ತೆಯ ಮೂಲಕ ರಾಣಿ ಚೆನ್ನಮ್ಮ ವೃತ್ತದ ವರೆಗೆ ಆಗಮಿಸಿ ಅಲ್ಲಿ 15 ನಿಮಿಷಕ್ಕೂ ಹೆಚ್ಚುಕಾಲ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ಈ ವೇಳೆ ರೈತರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.