ಹಾವೇರಿ: ಹಳೆಯ ಪಿಂಚಣಿ ಯೋಜನೆ (ಒಪಿಎಸ್)ಯನ್ನು ಮರು ಜಾರಿಗೊಳಿಸುವುದು ಹಾಗೂ ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೂ ವಿಸ್ತರಿಸುವಂತೆ ಒತ್ತಾಯಿಸಿ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ, ತಾಲೂಕು ಘಟಕಗಳ ಪದಾಧಿಕಾರಿಗಳು ಶನಿವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಸಂಘದ ಗೌರವಾಧ್ಯಕ್ಷ ಎಚ್.ಪಿ.ಬಣಕಾರ ಮಾತನಾಡಿ, ಈ ಹೋರಾಟ ಇಲ್ಲಿಗೆ ಮುಗಿದಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೂ ಮುಂದುವರಿಯಲಿದೆ. ರಾಜ್ಯ ಮಟ್ಟದಲ್ಲಿ ಬೃಹತ್ ಹೋರಾಟ ಮಾಡುವ ಮೂಲಕ ಬೇಡಿಕೆ ಈಡೇರಿಸಿಕೊಳ್ಳಬೇಕಿದೆ. ಹಾವೇರಿಯಿಂದ ಬೆಂಗಳೂರುವರೆಗೆ 10 ದಿನಗಳ ಕಾಲ ಪಾದಯಾತ್ರೆ ನಡೆಸುವ ಚಿಂತನೆ ಮಾಡಲಾಗುತ್ತಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಅನಿವಾರ್ಯವಾಗಿ ಬೆಂಗಳೂರಿಗೆ ಪಾದಯಾತ್ರೆ ನಡೆಸಿ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷ ಆರ್.ಎಚ್. ಬೆಟ್ಟಳ್ಳೇರ ಮಾತನಾಡಿ, ಈಗಾಗಲೇ ತಾಲೂಕು ಹಂತದಲ್ಲಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ್ದೇವೆ. 2006 ಏ.1ರ ನಂತರ ನೇಮಕವಾದ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಹೊಸ ಪಿಂಚಣಿ ಯೋಜನೆಯಿಂದ ನೌಕರರ ಭವಿಷ್ಯಕ್ಕೆ ಯಾವುದೇ ಭದ್ರತೆ ಇಲ್ಲ. ಸರ್ಕಾರಿ ನೌಕರರಿಗೆ ಒಂದು ನಿಯಮ, ಅನುದಾನಿತ ನೌಕರರಿಗೆ ಇನ್ನೊಂದು ನಿಯಮ ಸರಿಯಲ್ಲ. ಇದು ಸಂವಿಧಾನಾತ್ಮಕ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪಿಂಚಣಿ ವಂಚಿತ ನೌಕರರ ಸಂಘದ ಅಧ್ಯಕ್ಷ ಜಿ.ಹನುಮಂತಪ್ಪ ಮಾತನಾಡಿ, 2006ರ ನಂತರ ನೇಮಕಗೊಂಡ ನೌಕರರು 30-35 ವರ್ಷ ಸೇವೆ ಸಲ್ಲಿಸಿದರೂ ನಿವೃತ್ತಿಯ ನಂತರ ಆರ್ಥಿಕ ಭದ್ರತೆ ಇಲ್ಲದಂತಾಗಿದೆ. ಮಕ್ಕಳ ಶಿಕ್ಷಣ, ಮದುವೆ, ಆರೋಗ್ಯಕ್ಕೆ ಹಣ ಹೊಂದಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಿವೃತ್ತಿಯ ನಂತರ ಬಡತನದ ಜೀವನ ನಡೆಸುವಂತಾಗಿದೆ. ಎನ್‌ಪಿಎಸ್‌ನಿಂದ ಬರುವ ಅಲ್ಪ ಮೊತ್ತದಿಂದ ಗೌರವಯುತ ಜೀವನ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಕೂಡಲೇ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ವಿವಿಧ ಸಂಘಟನೆಗಳ ಬೆಂಬಲ: ಪ್ರತಿಭಟನೆಗೆ ಸಹ ಶಿಕ್ಷಕರ ಸಂಘ, ಪದವಿ ಪೂರ್ವ ಉಪನ್ಯಾಸಕರ ಸಂಘ, ಸರ್ಕಾರಿ ನೌಕರರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಸಾವಿತ್ರಿಬಾಯಿ ಫುಲೆ ಮಹಿಳಾ ಶಿಕ್ಷಕಿಯರ ಸಂಘ, ಐಟಿಐ ನೌಕರರ ಸಂಘಟನೆಗಳು ಬೆಂಬಲ ಸೂಚಿಸಿದ್ದವು. ಈ ಸಂಘಟನೆಗಳ ಮುಖಂಡರು ಮಾತನಾಡಿ, ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಜಾರಿಗೊಳಿಸಿದಾಗ ಅನುದಾನಿತ ಶಾಲಾ-ಕಾಲೇಜು ನೌಕರರಿಗೆ ಯಾಕಿಲ್ಲ? ಇದು ಸ್ಪಷ್ಟ ತಾರತಮ್ಯ. ನೌಕರರ ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಸರ್ಕಾರ ಕೂಡಲೇ ಸ್ಪಂದಿಸಬೇಕು. ಇಲ್ಲದಿದ್ದರೆ ನಾವೆಲ್ಲರೂ ಜೊತೆಗೂಡಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.