ಸಿಎಂ ಸಿದ್ದು ವಿರುದ್ಧ ಷಡ್ಯಂತ್ರಕ್ಕೆ ಬೃಹತ್‌ ಪ್ರತಿಭಟನೆ

KannadaprabhaNewsNetwork | Published : Aug 6, 2024 12:31 AM

ಸಾರಾಂಶ

ಬಿಜೆಪಿ, ಜೆಡಿಎಸ್ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಷಡ್ಯಂತ್ರ ನಡೆಸುತ್ತಿರುವುದನ್ನು ಖಂಡಿಸಿ ಸೋಮವಾರ ಬೀದರ್‌ನಲ್ಲಿ ಶೋಷಿತ ಸಮುದಾಯಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು

ಕನ್ನಡಪ್ರಭ ವಾರ್ತೆ ಬೀದರ್

ಬಿಜೆಪಿ ಹಾಗೂ ಜೆಡಿಎಸ್ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಷಡ್ಯಂತ್ರ ನಡೆಸುತ್ತಿರುವುದನ್ನು ಖಂಡಿಸಿ ಸೋಮವಾರ ಬೀದರ್‌ನಲ್ಲಿ ಶೋಷಿತ ಸಮುದಾಯಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ನಗರದ ಬೊಮ್ಮಗೊಂಡೇಶ್ವರ ವೃತ್ತದಿಂದ ತಮಟೆ ಬಾರಿಸುತ್ತ ವಿವಿಧ ಸಂಘಟನೆಗಳ ಪ್ರಮುಖರು ಬೃಹತ್ ಪ್ರತಿಭಟನೆಗೆ ಗೊಂಡ ಸಮಾಜ, ಅಹಿಂದ ವರ್ಗಗಳ ಒಕ್ಕೂಟ ಹಾಗೂ ವಿವಿಧ ದಲಿತಪರ ಸಂಘಟನೆಗಳು ಕೈ ಜೋಡಿಸಿದವು. ಬೊಮ್ಮಗೊಂಡೇಶ್ವರ ವೃತ್ತದಿಂದ ಆರಂಭವಾದ ಪ್ರತಿಭಟನೆ ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಭಗತಸಿಂಗ್ ವೃತ್ತ, ಡಾ.ಅಂಬೇಡ್ಕರ್ ವೃತ, ಶಿವಾಜಿ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಈ ಕುರಿತು ರಾಜ್ಯಪಾಲರಿಗೆ ಬರೆದ ಮನವಿ ಜಿಲ್ಲಾಡಳಿತಕ್ಕೆ ಸಲ್ಲಿಸಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಮೂಡಾ ಹಗರಣ ನೆಪವಿಟ್ಟು ಅವರ ಆತ್ಮವಿಶ್ವಾಸ ಕುಂದಿಸಲು ಹಾಗೂ ಅವರ ಹೆಸರಿಗೆ ಮಸಿ ಬಳಿಯಲು ಡೋಂಗಿ ಪಾದಯಾತ್ರೆ ಹಮ್ಮಿಕೊಂಡಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರ ವಿರುದ್ಧ ಹಾಗೂ ಪ್ರಜಾಪ್ರಭುತ್ವ ದುರ್ಬಲಗೊಳಿಸಲು ರಾಜ್ಯಪಾಲರು ಕೇಂದ್ರ ಸರ್ಕಾರ ಮಾತು ಕೇಳಿ ಸಿದ್ದರಾಮಯ್ಯರಿಗೆ ನೋಟಿಸ್ ನೀಡಿದ್ದು ಸರಿಯಲ್ಲ. ಟಿ.ಜೆ.ಅಬ್ರಾಹಂ ನೀಡಿದ್ದ ದೂರು ತಿರಸ್ಕರಿಸಬೇಕೆಂದು ಆಗ್ರಹಿಸಲಾಯಿತು.

ಮೂಡಾ ಹಗರಣದ ಬಗ್ಗೆ ಮಾತನಾಡುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಒಮ್ಮೆ ತಮ್ಮ ಚರಿತ್ರೆ ನೆನಪಿಸಿಕೊಳ್ಳಲಿ ಭ್ರಷ್ಟಾಚಾರ ವಿಚಾರದಲ್ಲಿ ಜೈಲಿಗೆ ಹೋಗಿ ಬಂದಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಪೆನ್‌ಡ್ರೈವ್ ಕೇಸ್‌ನಲ್ಲಿ ಜೈಲು ಪಾಲಾದ ದೇವೇಗೌಡರ ಕುಟುಂಬ ಮೊದಲು ತಮ್ಮ ಮೈ ಮುಟ್ಟಿಕೊಂಡು ನೋಡಲಿ. ತನ್ನ ಮೇಲೆ ಬಂದಿರುವ ಈ ಆರೋಪದ ಕುರಿತು ಸಿದ್ದರಾಮಯ್ಯ ಸ್ವತಃ ತನಿಖಾ ಸಮಿತಿ ರಚಿಸುವ ಮೂಲಕ ಇಡೀ ದೇಶದಲ್ಲಿ ಮಾದರಿ ನಾಯಕರಾಗಿದ್ದಾರೆ ಎಂದು ತಿಳಿಸಿದರು.

ಪ್ರತಿಭಟನಾಕಾರರು ಇದೇ ಸಂದರ್ಭದಲ್ಲಿ ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಕೆಲ ಹೊತ್ತು ಮಾನವ ಸರಪಳಿ ನಡೆಸಿ ಆಕ್ರೋಶ ಹೊರಹಾಕಿದರು.

ಪ್ರತಿಭಟನೆಯಲ್ಲಿ ಶೋಷಿತ ಸಮುದಾಯಗಳ ಒಕ್ಕೂಟದ ಮುಖಂಡರಾದ ಬಸವರಾಜ ಮಾಳಗೆ,ಪ್ರಮುಖರಾದ ಅಮೃತರಾವ ಚಿಮಕೊಡೆ, ಅಬ್ದುಲ್ ಮನ್ನಾನ ಸೇಠ್, ಅನೀಲಕುಮಾರ ಬೆಲ್ದಾರ್, ಬಾಬುರಾವ ಪಾಸ್ವಾನ್, ಜಿ.ಪಂ ಮಾಜಿ ಅಧ್ಯಕ್ಷೆ ಗೀತಾ ಚಿದ್ರಿ, ನಗರ ಸಭೆ ಅಧ್ಯಕ್ಷ ಮಹ್ಮದ ಗೌಸ್, ರಮೇಶ ಡಾಕುಳಗಿ, ಮಲ್ಲಿಕಾರ್ಜುನ ಬಿರಾದಾರ, ಡಾ.ರಾಜಶೇಖರ ಸೇಡಂಕರ್, ಸಿಪಿಎಂನ ಬಾಬುರಾವ ಹೊನ್ನಾ, ಗೋವರ್ಧನ ರಾಠೋಡ್, ಜಾನ್ ವೇಸ್ಲಿ, ಅಶೋಕಕುಮಾರ ಮಾಳಗೆ ಶ್ರೀಪತರಾವ ದೀನೆ, ಸಂದೀಪ ಕಾಂಟೆ, ಶಿವಕುಮಾರ ನೀಲಿಕಟ್ಟಿ, ಇರ್ಷಾದ ಪೈಲ್ವಾನ್, ರಮೇಶ ಪೌಳ್, ದೇವಿದಾಸ ತುಮಕೊಂಟಿ, ನರಸಪ್ಪ ಯಾಕತಪೂರ, ವಿಠಲದಾಸ್ ಪ್ಯಾಗೆ, ರಘುನಾಥ ಗಾಯಕವಾಡ, ಸುನೀಲ್ ಬಚ್ಚನ್ ಸೇರಿದಂತೆ ಕಾಂಗ್ರೆಸ್ ಮುಕಂಡರು ಭಾಗವಹಿಸಿದ್ದರು.

Share this article