ಡಿಸಿ ಕಚೇರಿ ಮುಂದೆ ನೌಕರರು ಮುತ್ತಿಗೆ ಹಾಕಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುವ ವೇಳೆ ಪೊಲೀಸರು ದಿಢೀರನೇ ಹೋರಾಟಗಾರರನ್ನು ಬಂಧಿಸಿ ಕರೆದೊಯ್ಯುವ ವೇಳೆ ತಳ್ಳಾಟ-ನೂಕಾಟ ನಡೆಯಿತು
ಕೊಪ್ಪಳ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಅಕ್ಷರ ದಾಸೋಹ ನೌಕರರು ಕೊಪ್ಪಳದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ನಗರದ ಡಿಸಿ ಕಚೇರಿಗೆ ನುಗ್ಗಲು ಯತ್ನಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪೊಲೀಸರು-ಹೋರಾಟಗಾರರ ನಡುವೆ ವಾಗ್ವಾದ ನಡೆಯಿತು. ಈ ವೇಳೆ ನಡೆದ ನೂಕು ನುಗ್ಗಲಿನಲ್ಲಿ ಕೆಲವರು ಗಾಯಗೊಂಡರು. ಪ್ರತಿಭಟನೆಯಲ್ಲಿ ಅಪಾರ ಸಂಖ್ಯೆಯ ಬಿಸಿಯೂಟ ನೌಕರರು ಭಾಗವಹಿಸಿದ್ದರು. ಪ್ರತಿಭಟನಾಕಾರರು ಜಿಲ್ಲಾಡಳಿತ ಭವನದ ಒಳ ನುಗ್ಗಲು ಯತ್ನಿಸಿದರು. ಪೊಲೀಸ್ ವಾಹನ ಅಡ್ಡಗಟ್ಟಿ ಪ್ರತಿಭಟಿಸಿದರು. ಈ ವೇಳೆ ಪೊಲೀಸರು ಸಂಘಟನೆಯ ಪ್ರಮುಖರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿ ಪ್ರತಿಭಟನೆ ಶಾಂತಗೊಳಿಸಿದರು.
ಹಲವರಿಗೆ ಗಾಯ: ಡಿಸಿ ಕಚೇರಿ ಮುಂದೆ ನೌಕರರು ಮುತ್ತಿಗೆ ಹಾಕಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುವ ವೇಳೆ ಪೊಲೀಸರು ದಿಢೀರನೇ ಹೋರಾಟಗಾರರನ್ನು ಬಂಧಿಸಿ ಕರೆದೊಯ್ಯುವ ವೇಳೆ ತಳ್ಳಾಟ-ನೂಕಾಟ ನಡೆಯಿತು. ಈ ವೇಳೆ ಕೆಲ ಬಿಸಿಯೂಟ ನೌಕರರು ಗಾಯಗೊಂಡರಲ್ಲದೇ ಪೊಲೀಸರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಬೇಡಿಕೆ ಈಡೇರಿಕೆಗಾಗಿ ಸರ್ಕಾರದ ಗಮನ ಸೆಳೆಯುತ್ತಿದ್ದೇವೆ. ಆದರೆ, ಪೊಲೀಸರ ಈ ವರ್ತನೆ ಸರಿಯಲ್ಲ ಎಂದು ಹಲವು ಮಹಿಳೆಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ತೀವ್ರ ಕಾವಿನ ಮಧ್ಯೆಯೂ ಪೊಲೀಸರು ಕೆಲವು ಮುಖಂಡರನ್ನು ಬಂಧಿಸಿ, ಬಳಿಕ ಬಿಡುಗಡೆ ಮಾಡಿದರು.
ಪ್ರತಿಭಟನಾಕಾರರು ವೇತನ ಹೆಚ್ಚಳ ಜತೆಗೆ ನಾನಾ ಬೇಡಿಕೆ ಈಡೇರಿಸಬೇಕು ಎಂದು ಜಿಲ್ಲಾಡಳಿತ ಮೂಲಕ ಸಿಎಂ ಡಿಕೆಶಿಗೆ ಮನವಿ ಸಲ್ಲಿಸಿದರು.
ಅಕ್ಷರ ದಾಸೋಹ ಯೋಜನೆ ಪ್ರಾರಂಭಿಸಿ 25 ವರ್ಷಗಳಾಗಿವೆ. ಬೆಲೆಯೇರಿಕೆಯಾಧಾರದಲ್ಲಿ ಯೋಜನೆಗೆ ಬೇಕಾದ ಅನುದಾನ ಹೆಚ್ಚಳ ಮಾಡದೇ ಖಾಸಗಿ ಸಂಸ್ಥೆಗಳಿಗೆ ಕೊಡುವ ಮುಖಾಂತರ ಯೋಜನೆ ಬಲಹೀನಗೊಳಿಸಲಾಗುತ್ತಿದೆ. 2008ರಿಂದ ಕೇಂದ್ರ ಈ ಬಡ ಮಹಿಳೆಯರಿಗೆ ವೇತನ ಹೆಚ್ಚಳ ಮಾಡದೇ ಶೋಷಣೆ ಮಾಡುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಕೊಟ್ಟ ಆಶ್ವಾಸನೆಯಂತೆ ಈ ಮಹಿಳೆಯರಿಗೆ ₹7,000 ತನಕ ವೇತನ ಹೆಚ್ಚಳ ಮಾಡಬೇಕು. ಇಸ್ಕಾನ್‌ಗೆ ಬಿಸಿಯೂಟ ಕೊಡುವ ಪ್ರಸ್ತಾಪ ಕೈಬಿಡಬೇಕು ಎಂದೂ ಒತ್ತಾಯಿಸಿದರು. ಅಲ್ಲದೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಸಂಘಟನೆಯ ಅಖಿಲ ಭಾರತ ಕರೆಯ ಮೇರೆಗೆ ಜು.10ರಂದು ಕಪ್ಪು ದಿನ ಆಚರಿಸಲಾಗುತ್ತಿದೆ. ಹೋರಾಟಕ್ಕೆ ಸರ್ಕಾರ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಅಕ್ಷರ ದಾಸೋಹ ಯೋಜನೆ ಸಂಪೂರ್ಣವಾಗಿ ಶಿಕ್ಷಣ ಇಲಾಖೆಯಡಿ ನಡೆಯಬೇಕು. ಬೇಸಿಗೆ ಮತ್ತು ದಸರಾ ರಜೆಗಳ ಮತ್ತು ಚುನಾವಣಾ ಸಂದರ್ಭದಲ್ಲಿ ವೇತನವನ್ನು ಕಡ್ಡಾಯವಾಗಿ ನೀಡಬೇಕು. ಶಾಲೆಗಳಲ್ಲಿ ಗ್ರೂಪ್ "ಡಿ " ನೌಕರರು ಇಲ್ಲದಿರುವುದರಿಂದ ಈ ನೌಕರರಿಂದಲೇ ಶಾಲಾ ಸ್ವಚ್ಚತೆ, ಕೈತೊಟ ನಿರ್ವಹಣೆ, ಶಾಲಾ ಸಮಯದ ಗಂಟೆ ಬಾರಿಸುವುದು ಇನ್ನಿತರ ಕೆಲಸ ನೀಡಿ ಶಾಲಾ ಸಿಬ್ಬಂದಿ ಎಂದು ನೇಮಿಸಿ ನೇಮಕಾತಿ ಆದೇಶ ನೀಡಬೇಕು. ಶಾಲಾ ಅವಧಿಯ ನಂತರ ನರೇಗಾ ಯೋಜನೆ ಅಡಿ ಶಾಲಾ ಕೈತೊಟದ ಕೆಲಸ ನೀಡಿ ವೇತನ ನೀಡಬೇಕು. ಅಪಘಾತದಲ್ಲಿ ಮರಣ ಹೊಂದಿದ ಅಡುಗೆ ಸಿಬ್ಬಂದಿ ಕುಟುಂಬದವರಿಗೆ ಕೆಲಸ ನೀಡಬೇಕು. ನಿವೃತ್ತಿ ಹೊಂದಿದ ಅಡುಗೆ ಸಿಬ್ಬಂದಿ ಕುಟುಂಬದವರಿಗೆ ಕೆಲಸ ನೀಡಬೇಕು. ಪ್ರತಿ ಶಾಲೆಯಲ್ಲಿ ಕನಿಷ್ಠ ಇಬ್ಬರು ಅಡುಗೆಯವರು ಇರಲೇಬೇಕು. ಕೆಲಸದ ಸ್ಥಳದಲ್ಲಿ ಮರಣ ಹೊಂದಿದರೆ ₹25 ಲಕ್ಷ ಪರಿಹಾರ ಕೊಡಬೇಕು. ಹಾಜರಾತಿ ಆಧಾರದಲ್ಲಿ ಕೆಲಸದಿಂದ ತೆಗೆಯುವ ಕ್ರಮ ನಿಲ್ಲಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯಾಧ್ಯಕ್ಷೆ ಲಕ್ಷ್ಮೀದೇವಿ ಸೋನಾರ, ಜಿಲ್ಲಾಧ್ಯಕ್ಷ ಹನುಮೇಶ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಶಿವನಗೌಡ ಕುಟಗಮರಿ, ಖಜಾಂಚಿ ಅನ್ನಪೂರ್ಣ ಬಾದಮಿನಾಳ, ಸಿಐಟಿಯು ರಾಜ್ಯ ಕಾರ್ಯದರ್ಶಿ ನಿರುಪಾದಿ ಬೆಣಕಲ್ಲ, ಕಾರ್ಯದರ್ಶಿ ಮಂಜುನಾಥ ಡಗ್ಗಿ, ಗಂಗಮ್ಮ ಸಿದ್ದಾಪೂರ, ಎಚ್.ಹನುಮಸಾಗರ, ಜಯಶ್ರೀ ಕುಕನೂರು, ಅನಸೂಯಾ ಗಂಗಾವತಿ, ದುರ್ಗಾಬಾಯಿ ಸಿದ್ದಾಪೂರ, ನೂರ್ಜಾ ಕನಕಗಿರಿ, ಸುಜಾತಾ ಸಂಗಾಪೂರ, ಸುರೇಖಾ ಕಾರಟಗಿ, ಜಯಶ್ರೀ ಗಂಗಾವತಿ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.