ಕಾರವಾರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಮತ್ತು ತಮ್ಮ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಸಿಐಟಿಯು ನೇತೃತ್ವದಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗೂ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಸಮಿತಿಗಳಿಂದ ಶುಕ್ರವಾರ ಮುಷ್ಕರ ನಡೆಸಿ ಕರಾಳ ದಿನ ಆಚರಿಸಲಾಯಿತು.

ಸಂಘಟನೆಗಳ ಪ್ರಮುಖರು ಕಾರವಾರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುವ ಮೂಲಕ ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸಿದರು.

ಅಂಗನವಾಡಿ ನೌಕರರ ಸಂಘ ಸಲ್ಲಿಸಿದ ಮನವಿಯಲ್ಲಿ, ಕಳೆದ ಐವತ್ತೊಂದು ವರ್ಷಗಳಿಂದ ಜನಸಮುದಾಯದ ಜೀವನಾಡಿಯಾಗಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ಅನುದಾನವನ್ನು ಹೆಚ್ಚಿಸದೆ ನಿರಂತರವಾಗಿ ಕಡಿತಗೊಳಿಸುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ 3ರಿಂದ 6 ವರ್ಷದ ಮಕ್ಕಳನ್ನು ಅಂಗನವಾಡಿಯಿಂದ ದೂರವಿಟ್ಟು ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸುತ್ತಿರುವುದು ಹಾಗೂ ಖಾಸಗಿ ನರ್ಸರಿಗಳಿಗೆ, ಕೂಸಿನ ಮನೆಗಳಿಗೆ ಪರವಾನಗಿ ನೀಡುತ್ತಿರುವುದು ಅಂಗನವಾಡಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಲಾಗಿದೆ.

ಅಲ್ಲದೆ, ಗುಣಮಟ್ಟದ ಮೊಬೈಲ್ ಮತ್ತು ಡೇಟಾ ಸೌಲಭ್ಯವನ್ನು ನೀಡದೆ ಆನ್‌ಲೈನ್ ಕೆಲಸಗಳಾದ ಪೋಷಣ್ ಟ್ರ್ಯಾಕರ್, ಇ-ಕೆವೈಸಿ ಮುಂತಾದ ಕಾರ್ಯಗಳನ್ನು ಮಾಡಲು ಒತ್ತಡ ಹೇರುತ್ತಿರುವುದರಿಂದ ಲಕ್ಷಾಂತರ ಫಲಾನುಭವಿಗಳು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.

ಅಂಗನವಾಡಿ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ಕೂಲಿ ಜಾರಿಗೊಳಿಸಬೇಕು ಹಾಗೂ ರಾಜ್ಯ ಸರ್ಕಾರ ಚುನಾವಣೆ ವೇಳೆ ನೀಡಿದ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ₹15 ಸಾವಿರ ಹಾಗೂ ಸಹಾಯಕಿಯರಿಗೆ ₹10 ಸಾವಿರ ವೇತನ ನಿಗದಿ ಮಾಡಬೇಕು ಎಂದು ಅಂಗನವಾಡಿ ನೌಕರರ ಸಂಘ ಸರ್ಕಾರವನ್ನು ಒತ್ತಾಯಿಸಿದೆ.


ಮತ್ತೊಂದೆಡೆ, ಅಕ್ಷರ ದಾಸೋಹ ನೌಕರರ ಸಂಘ ತನ್ನ ಹಕ್ಕೊತ್ತಾಯಗಳನ್ನು ಮಂಡಿಸಿದ್ದು, ಕಳೆದ 25 ವರ್ಷಗಳಿಂದ ಮಕ್ಕಳ ಗೈರುಹಾಜರಾತಿ ತಡೆಯಲು ಶ್ರಮಿಸುತ್ತಿರುವ ಬಡ ಮಹಿಳೆಯರಿಗೆ ವೇತನ ಹೆಚ್ಚಳ ಮಾಡದೆ ಸರ್ಕಾರಗಳು ನಿರಂತರವಾಗಿ ಶೋಷಣೆ ಮಾಡುತ್ತಿವೆ ಎಂದು ದೂರಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಆಶ್ವಾಸನೆಯಂತೆ ಬಿಸಿಯೂಟ ನೌಕರರಿಗೆ ಏಳು ಸಾವಿರ ರುಪಾಯಿ ವೇತನ ಹೆಚ್ಚಳ ಮಾಡಬೇಕು ಮತ್ತು ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.

ಕೆಪಿಎಸ್ ಶಾಲೆ, ಇಸ್ಕಾನ್, ಮಠ ಹಾಗೂ ಇನ್ನಿತರ ಖಾಸಗಿ ಸಂಘ ಸಂಸ್ಥೆಗಳಿಗೆ ಬಿಸಿಯೂಟದ ಜವಾಬ್ದಾರಿ ನೀಡುವ ಪ್ರಸ್ತಾಪವನ್ನು ಸಂಪೂರ್ಣವಾಗಿ ಕೈಬಿಡಬೇಕು ಮತ್ತು ಯೋಜನೆಗೆ ಹೆಚ್ಚಿನ ಅನುದಾನ ಒದಗಿಸಿ ನೌಕರರಿಗೆ ಉದ್ಯೋಗ ಭದ್ರತೆ ಕಲ್ಪಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ತಮ್ಮ ಸೇವೆಯ ನಿವೃತ್ತಿಯ ಬಳಿಕದ ಭದ್ರತೆಗಾಗಿ ಮಾಸಿಕ ಹತ್ತು ಸಾವಿರ ಪಿಂಚಣಿ ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗಿದೆ. ನಗರದ ಮಿತ್ರ ಸಮಾಜ ಮೈದಾನದಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ವಿವಿಧ ತಾಲೂಕುಗಳ ಅಂಗನವಾಡಿ, ಅಕ್ಷರ ದಾಸೋಹ ಕಾರ್ಯಕರ್ತರು ಭಾಗಿಯಾಗಿದ್ದು, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿದರು.