ಶಿವಕುಮಾರ ಕುಷ್ಟಗಿ
ಗದಗ: ಮಲೆನಾಡು ಹಾಗೂ ಘಟ್ಟ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮುಂಗಾರಿನ ವ್ಯಾಪಕ ಮಳೆಯಿಂದಾಗಿ ತುಂಗಾ ಡ್ಯಾಂ ಸಂಪೂರ್ಣ ಭರ್ತಿಯಾಗಿದ್ದು, ಅಲ್ಲಿಂದ ಬರುವ ನೀರು ತುಂಗಭದ್ರಾ ನದಿ ಮೂಲಕ ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರು ಬ್ಯಾರೇಜ್‌ಗೆ ಕೂಡಾ ಭರ್ತಿ ಹಂತಕ್ಕೆ ತಲುಪಿದ್ದು, ಜಿಲ್ಲೆಯ ಕುಡಿಯುವ ನೀರಿನ ಗಂಭೀರ ಸಮಸ್ಯೆ ಇತ್ಯರ್ಥವಾಗಿದೆ.ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿಯಲ್ಲಿನ ಒಳಹರಿವಿನ ಪ್ರಮಾಣದಲ್ಲಿ ತೀವ್ರ ಹೆಚ್ಚಳವಾಗಿದೆ. ಸಧ್ಯ ಬ್ಯಾರೇಜ್‌ಗೆ 62 ಸಾವಿರ ಕ್ಯುಸೆಕ್‌ನಷ್ಟು ಬೃಹತ್ ಪ್ರಮಾಣದ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಪಾತ್ರಕ್ಕೆ ಹರಿಸುತ್ತಿರುವ ಹಿನ್ನೆಲೆ ನದಿ ಪಾತ್ರದ ಜನರಲ್ಲಿ ನೆಮ್ಮದಿಗೆ ಕಾರಣವಾಗಿದೆ.
ಪ್ರಸ್ತುತ ಬ್ಯಾರೇಜ್ ಭರ್ತಿಯಾಗಿ ನದಿ ಉಕ್ಕಿ ಹರಿಯುತ್ತಿದ್ದರೂ ಕೇವಲ ಹತ್ತು ದಿನಗಳ ಹಿಂದಿನ ಪರಿಸ್ಥಿತಿ ತೀರಾ ಆತಂಕಕಾರಿಯಾಗಿತ್ತು. ಕಳೆದ ಜೂ. 30ರ ಬೆಳಗಿನ ಅಧಿಕೃತ ವರದಿಯ ಪ್ರಕಾರ, ಬ್ಯಾರೇಜ್‌ಗೆ ಹರಿದು ಬರುತ್ತಿದ್ದ ಒಳಹರಿವಿನ ಪ್ರಮಾಣ ಸಂಪೂರ್ಣ ಶೂನ್ಯವಾಗಿತ್ತು. ಹರಲಹಳ್ಳಿ ಗೇಜ್‌ನಲ್ಲಿ ಕೇವಲ 1306 ಕ್ಯುಸೆಕ್‌ನಷ್ಟು ಅತ್ಯಲ್ಪ ನೀರು ದಾಖಲಾಗಿತ್ತಾದರೂ ಅದು ಹಮ್ಮಗಿ ಬ್ಯಾರೇಜ್ ತಲುಪುವಷ್ಟರಲ್ಲಿ ನದಿ ಮಾರ್ಗ ಮಧ್ಯದಲ್ಲೇ ಸಂಪೂರ್ಣ ಒಣಗಿ ಹೋಗುತ್ತಿತ್ತು. ಮಲೆನಾಡಿನ ನೀರಿನ ಮೂಲಗಳೇ ಒಣಗಿದ್ದರಿಂದ ಈ ಭಾಗದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿತ್ತು.ನೀರಿನ ಸಮಸ್ಯೆ ಇತ್ಯರ್ಥ: ಗದಗ, ಲಕ್ಷ್ಮೇಶ್ವರ, ಶಿರಹಟ್ಟಿ ಮತ್ತು ಮುಂಡರಗಿ ತಾಲೂಕು ವ್ಯಾಪ್ತಿಯ ಬಹುತೇಕ(120) ಗ್ರಾಮಗಳು ಕುಡಿಯುವ ನೀರಿಗಾಗಿ ಆಶ್ರಯಿಸಿರುವುದು ಇದೇ ತುಂಗಭದ್ರಾ ನದಿಯನ್ನು. ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಿಂದಾಗಿ ಬಯಲುಸೀಮೆ ನಾಡಿನ ಜನರು ನೆಮ್ಮದಿಯಿಂದಾಗಿ ಮುಂದಿನ ವರ್ಷದವರೆಗೆ ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲದಂತೆ ಜೀವನ ನಡೆಸುವಂತಾಗಿದೆ. ಇದರೊಟ್ಟಿಗೆ ಜಿಲ್ಲೆಯ ಎಲ್ಲ ಕೆರೆಗಳನ್ನು ಈಗಲೇ ಭರ್ತಿ ಮಾಡಿದರೆ ಅನುಕೂಲವಾಗುತ್ತದೆ. ತುಂಗಭದ್ರಾ ಡ್ಯಾಂಗೂ ಅಪಾರ ನೀರು
ಕಳೆದ ಸಾಲಿನಲ್ಲಿ ಭರ್ತಿಯಾಗಿದ್ದ ತುಂಗಭದ್ರಾ ಡ್ಯಾಂನ ಕ್ರಸ್ಟ್‌ಗೇಟ್ ತುಂಡಾಗಿ ಅಪಾರ ಪ್ರಮಾಣದ ನೀರು ಪೋಲಾಗಿ ಕರ್ನಾಟಕ, ಆಂಧ್ರದ ಸಾವಿರಾರು ರೈತರು ಆತಂಕ ಎದುರಿಸಿದ್ದರು. ಈ ಬಾರಿ ಜುಲೈ ಮಧ್ಯಕ್ಕೆ ಬಂದರೂ ಮಳೆಯಾಗದೇ ಡ್ಯಾಂನಲ್ಲಿ ನೀರಿಲ್ಲದೇ ಕುಡಿಯುವ ನೀರಿಗೆ ಹಾಗೂ ರೈತರಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಿತ್ತು. ಆದರೆ ಜು. 10ರಂದು ಹಮ್ಮಗಿ ಬ್ಯಾರೇಜ್ ನಿಂದ 62 ಸಾವಿರ ಕ್ಯುಸೆಕ್‌ಗಿಂತಲೂ ಅಧಿಕ ಪ್ರಮಾಣದ ನೀರು ಹೊರಹರಿಯುತ್ತಿದೆ.ಡ್ಯಾಂನ ಯಾವುದೇ ಗೇಟ್‌ಗಳಲ್ಲಿ ಲೀಕೇಜ್ ಇಲ್ಲ. ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, 62 ಸಾವಿರ ಕ್ಯುಸೆಕ್‌ಗಿಂತಲೂ ಹೆಚ್ಚಿನ ನೀರು ಹರಿದುಬರುತ್ತಿದೆ. ಅಷ್ಟೇ ನೀರು ಹೊರಹರಿಸಲಾಗುತ್ತಿದೆ. ಕಳೆದ ಬೇಸಿಗೆಯಲ್ಲಿ ನದಿಪಾತ್ರದಲ್ಲಿ ನೀರಿಲ್ಲದ ವೇಳೆ ಅಗತ್ಯ ರಿಪೇರಿಗಳನ್ನು ಮಾಡಲಾಗಿದೆ ಎಂದು ಹಮ್ಮಗಿ ಬ್ಯಾರೇಜಿನ ಇಇ ಶಿವಮೂರ್ತಿ ತಿಳಿಸಿದರು.ಗರಿಷ್ಠ ಮಟ್ಟ 509 ಮೀ.
ಪ್ರಸ್ತುತ ನೀರಿನ ಮಟ್ಟ 507.47(
ಒಟ್ಟು ಸಂಗ್ರಹ ಸಾಮರ್ಥ್ಯ 3.17 ಟಿಎಂಸಿಪ್ರಸ್ತುತ ಜಲಸಂಗ್ರಹ 2.27 ಟಿಎಂಸಿ