ಗದಗ: ರಾಜ್ಯ ಅಂಗನವಾಡಿ ನೌಕರರ ಹಾಗೂ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಸಮಿತಿ ವತಿಯಿಂದ ನೌಕರರ ಕರಾಳ ದಿನಾಚರಣೆ ಅಂಗವಾಗಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಒಂದು ದಿನದ ಬೃಹತ್ ಮುಷ್ಕರ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಪ್ರಧಾನ ಕಾರ್ಯದರ್ಶಿ ಮಹೇಶ ಹಿರೇಮಠ, ಕೇಂದ್ರ ಸರ್ಕಾರವು ಬೆಲೆ ಏರಿಕೆಗೆ ತಕ್ಕಂತೆ ಅನುದಾನ ಹೆಚ್ಚಿಸದೆ ಅಂಗನವಾಡಿ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020ರ ನೆಪದಲ್ಲಿ 3ರಿಂದ 6 ವರ್ಷದ ಮಕ್ಕಳನ್ನು ಅಂಗನವಾಡಿಗಳಿಂದ ದೂರವಿಟ್ಟು ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸುತ್ತಿರುವುದರಿಂದ ಫಲಾನುಭವಿಗಳ ಸಂಖ್ಯೆ ಕುಸಿಯುತ್ತಿದೆ.

ರಾಜ್ಯ ಸರ್ಕಾರವು 10 ಸಾವಿರ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ತೆರೆಯುವುದಾಗಿ ಹೇಳಿದರೂ ಸೂಕ್ತ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಸರ್ಕಾರದ ನೀತಿಗಳನ್ನು ಖಂಡಿಸಿದರು.

ಚುನಾವಣಾ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ₹15 ಸಾವಿರ ಹಾಗೂ ಸಹಾಯಕಿಯರಿಗೆ ₹10 ಸಾವಿರ ವೇತನ ಹೆಚ್ಚಿಸಬೇಕು. ಕನಿಷ್ಠ ವೇತನವಾಗಿ ಕಾರ್ಯಕರ್ತೆಯರಿಗೆ ₹41 ಸಾವಿರ ಹಾಗೂ ಸಹಾಯಕಿಯರಿಗೆ ₹35 ಸಾವಿರ ನಿಗದಿಪಡಿಸಬೇಕು ಮತ್ತು ಮಾಸಿಕ ₹18 ಸಾವಿರ ಪಿಂಚಣಿ ನೀಡಬೇಕು. ಎಲ್ಲ ಅಂಗನವಾಡಿಗಳಿಗೂ ಎಲ್‌ಕೆಜಿ, ಯುಕೆಜಿ ವಿಸ್ತರಿಸಬೇಕು. 3 ವರ್ಷದೊಳಗಿನ ಮಕ್ಕಳಿಗಾಗಿ ಅಂಗನವಾಡಿಗಳನ್ನು ಅಂಗನವಾಡಿ, ಕಮ್ ಶಿಶುಪಾಲನಾ ಕೇಂದ್ರಗಳಾಗಿ ಪರಿವರ್ತಿಸಬೇಕು. ಮಕ್ಕಳಿಗೆ ಉಚಿತ ಸಮವಸ್ತ್ರ, ಪುಸ್ತಕ ಹಾಗೂ ಆಟಿಕೆ ನೀಡಬೇ ಸೇರಿದಂತೆ ವಿವಿಧ ಬೇಡಿಕೆಯ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲೆಯ ನೂರಾರು ಅಂಗನವಾಡಿ ಹಾಗೂ ಬಿಸಿಯೂಟ ನೌಕರರು ಧರಣಿಯಲ್ಲಿ ಪಾಲ್ಗೊಂಡಿದ್ದರು.