ಯಲಬುರ್ಗಾ: ಪ್ರಸ್ತುತ ಹವಾಮಾನ ವೈಪರೀತ್ಯ ಮತ್ತು ಮಳೆಯ ಕೊರತೆಯಿಂದ ರೈತರು ಸಾಂಪ್ರದಾಯಿಕ ಬೆಳೆಗಳಿಗೆ ಪರ್ಯಾಯವಾಗಿ ಬೇರೆ ಬೆಳೆ ಬೆಳೆಯುವುದು ಅತ್ಯಗತ್ಯವಾಗಿದೆ ಎಂದು ಕೊಪ್ಪಳದ ಕೃಷಿ ವಿಸ್ತರಣಾ ಘಟಕದ ಮುಖ್ಯಸ್ಥ ಹಾಗೂ ವಿಜ್ಞಾನಿ ಡಾ.ಪಿ.ಆರ್. ಬದರಿಪ್ರಸಾದ ಹೇಳಿದರು.
ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಗವಿಸಿದ್ದೇಶ್ವರ ಮಠದ ಆವರಣದಲ್ಲಿ ರೈತ ಸಂಪರ್ಕ ಕೇಂದ್ರದಿಂದ ರೈತರಿಗೆ ಹಮ್ಮಿಕೊಂಡಿದ್ದ ಪರ್ಯಾಯ ಬೆಳೆ ಬೆಳೆಯುವ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.ಮುಂಗಾರು ಮಳೆ ಸಂಪೂರ್ಣ ವಿಫಲಗೊಂಡ ಕಾರಣ ರೈತರು ಜಮೀನುಗಳಲ್ಲಿ ಬಿತ್ತಿದ ಬೆಳೆಗಳು ಸಂಪೂರ್ಣ ಬಾಡಲಾರಂಭಿಸಿವೆ. ಹೀಗಾಗಿ ರೈತರು ಸಾಂಪ್ರದಾಯಿಕ ಬೆಳೆ ಬದಲಿಗೆ ಕಡಿಮೆ ಮಳೆ ಅಗತ್ಯವಿರುವ ಮತ್ತು ಬರಗಾಲ ತಡದುಕೊಳ್ಳಬಲ್ಲ ಬೆಳೆಗಳಾದ ತೊಗರಿ,ಸಜ್ಜೆ, ಸೂರ್ಯಕಾಂತಿ ಹಾಗೂ ಸಿರಿಧಾನ್ಯ ಬೆಳೆಯಬಹುದಾಗಿದೆ. ಇವು ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ತಂದುಕೊಡಬಲ್ಲವು. ಅಲ್ಲದೆ ಮಣ್ಣಿನ ಫಲವತ್ತತೆ ಕಾಪಾಡಲು ಮತ್ತು ನಷ್ಟ ತಪ್ಪಿಸಲು ಸಹಾಯ ಮಾಡುತ್ತದೆ. ಮಣ್ಣು ಮತ್ತು ವಾತಾವರಣಕ್ಕೆ ತಕ್ಕಂತೆ ರೈತರು ಬೆಳೆಯಬೇಕು ಎಂದರು.
ಉಪ ಕೃಷಿ ನಿರ್ದೇಶಕ ಸಿದ್ದೇಶ್ವರ ಮಾತನಾಡಿ, ರೈತರು ಒಂದೇ ಬೆಳೆ ನಂಬಿ ಕುಳಿತುಕೊಳ್ಳುವುದರಿಂದ ಆಗುವ ನಷ್ಟ ತಡೆಯಬಹುದು. ಮಣ್ಣಿನ ಪೋಷಕಾಂಶಗಳು ಹೆಚ್ಚಾಗಿ, ಮುಂದಿನ ಬೆಳೆಗಳಿಗೆ ಅನುಕೂಲವಾಗುತ್ತದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಇವುಗಳಿಗೆ ಉತ್ತಮ ಬೆಲೆ ಸಿಗುತ್ತದೆ ಎಂದರು.ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೊಂಡ ಬೆಳೆಗಳಾದ ಹೆಸರು, ಸಜ್ಜೆ, ಮೆಕ್ಕೆಜೋಳ, ತೊಗರಿ, ಅಲಸಂದಿ, ಹತ್ತಿ ಸೇರಿದಂತೆ ನಾನಾ ಬೆಳೆಗಳಿಗೆ ಪ್ರತಿಯೊಬ್ಬ ರೈತರು ಬೆಳೆ ವಿಮೆ ತುಂಬಲು ಮುಂದಾಗಬೇಕು. ಹೆಚ್ಚಿನ ಮಾಹಿತಿಗಾಗಿ ಹಾಗೂ ಅಧಿಸೂಚಿತ ಬೆಳೆ ಆಯ್ಕೆಗಾಗಿ ಬ್ಯಾಂಕುಗಳಿಗೆ ಹಾಗೂ ರೈತ ಸಂಪರ್ಕ ಕೇಂದ್ರಗಳಿಗೆ ಇಲ್ಲವೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ಕೃಷಿ ಅಧಿಕಾರಿ ಬಾಲಪ್ಪ ಜಲಗೇರಿ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ದ್ಯಾಮನಗೌಡ ಕರಿಗೌಡ್ರ, ಸಿಬ್ಬಂದಿ ಕಿರಣಕುಮಾರ ಕೆಂಚಮ್ಮನವರ್, ಕಾಶಿಮಸಾಬ್, ಮಹಾಬಳೇಶ ಚಿಣಗಿ ಹಾಗೂ ರೈತರು ಭಾಗವಹಿಸಿದ್ದರು.