ಪಶ್ಚಿಮ ಬಂಗಾಳದ ಬಾರುಪುರ್ ಮತ್ತು ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ನಡೆದ ಅತ್ಯಾಚಾರ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿವೆ
ಕೊಪ್ಪಳ: ನಗರದ ಜಿಲ್ಲಾಡಳಿತ ಭವನದಲ್ಲಿ ಅತ್ಯಾಚಾರಿಗಳಿಗೆ ಅತ್ಯುಗ್ರ ಶಿಕ್ಷೆಗೆ ಆಗ್ರಹಿಸಿ ಎಐಎಂಎಸ್ಎಸ್ ಜಿಲ್ಲಾ ಸಂಘಟನಾ ಸಮಿತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಎಐಎಂಎಸ್ಎಸ್ ಜಿಲ್ಲಾಧ್ಯಕ್ಷೆ ಮಂಜುಳಾ ಮಜ್ಜಿಗಿ ಮಾತನಾಡಿ, ಪಶ್ಚಿಮ ಬಂಗಾಳದ ಬಾರುಪುರ್ ಮತ್ತು ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ನಡೆದ ಅತ್ಯಾಚಾರ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿವೆ. ಪ್ರಪಂಚವನ್ನೇ ಅರಿಯದ 13 ವರ್ಷದ ಒಬ್ಬ ಅಪ್ರಾಪ್ತ ಹೆಣ್ಣು ಮಗಳ ಮೇಲೆ 30 ಜನ ನರರಾಕ್ಷಸರು ಎರಗುತ್ತಾರೆಂದರೆ ಇದೆಂಥ ಸಮಾಜ? ಇಂತಹ ನೀಚ ಘಟನೆಗಳಲ್ಲಿ ಸರ್ಕಾರದ ಯಾವುದೇ ಕಣ್ಣೊರೆಸುವ ತನಿಖೆಯನ್ನಾಗಲಿ ಅಥವಾ ನಿಧಾನಗತಿಯ ಶಿಕ್ಷೆಯನ್ನಾಗಲಿ ಜನರು ಸಹಿಸುವುದಿಲ್ಲ. ಈ ನಿಟ್ಟಿನಲ್ಲಿ ಈ ಎರಡು ಘಟನೆಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಅತ್ಯುಗ್ರ ಶಿಕ್ಷೆ ಖಾತ್ರಿಪಡಿಸಬೇಕೆಂದು ಎಐಎಂಎಸ್ಎಸ್ ಕೊಪ್ಪಳ ಜಿಲ್ಲಾ ಸಂಘಟನಾ ಸಮಿತಿಯು ಒತ್ತಾಯಿಸುತ್ತದೆ ಎಂದರು.ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶಾರದಾ ಗಡ್ಡಿ, ಸದಸ್ಯೆ ಪ್ರಭಾವತಿ ಇತರರಿದ್ದರು.